ಕ್ರೈಸ್ಟ್ ಚರ್ಚ್: ತಮ್ಮ ಸ್ಪೋಟಕ ಅರ್ಧಶತಕದ ಬಲದಿಂದ ತಿಲಕ್ ವರ್ಮಾ (Tilak Verma) ಎರಡನೇ ಟಿ20ಐ ಪಂದ್ಯದಲ್ಲಿ (IND vs NZ) ಭಾರತ ತಂಡಕ್ಕೆ 4 ವಿಕೆಟ್ಗಳ ಗೆಲುವಿಗೆ ನೆರವು ನೀಡಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 181 ರನ್ಗಳ ಗುರಿಯನ್ನು ಹಿಂಬಾಲಸಿದ ಭಾರತ ತಂಡ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಸೋಲಿನಂಚಿಗೆ ತಲುಪಿತ್ತು. ಆದರೆ, ತಿಲಕ್ ವರ್ಮಾ 26 ಎಸೆತಗಳಲ್ಲಿ 51 ರನ್ ಗಳಿಸಿ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಭಾರತ ತಂಡವನ್ನು ಗೆಲ್ಲಿಸಿದರು. ಪಂದ್ಯದ ಬಳಿಕ ತಮ್ಮ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ನ ಶ್ರೇಯವನ್ನು ಹೆಡ್ ಕೋಚ್ ಗೌತಮ್ ಗಂಭೀರ್ಗೆ ಸಲ್ಲಿಸಿದ್ದಾರೆ.
ಸೋನಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ತಿಲಕ್ ವರ್ಮಾ, "ನಾನು ಕೊನೆಯವರೆಗೂ ಬ್ಯಾಟ್ ಮಾಡುವುದರ ಬಗ್ಗೆಯೇ ಯೋಚಿಸುತ್ತಿದ್ದೆ. ಇಂದಿನ ಪಂದ್ಯಕ್ಕೂ ಮುನ್ನ ಗೌತಮ್ ಸರ್ ಮತ್ತು ಸಿತಾಂಶು ಕೋಟಕ್ ಸರ್ ಅವರೊಂದಿಗೆ ಮಾತನಾಡಿದ್ದೆ. ಇಡೀ ಭಾರತ ತಂಡವೇ ನನ್ನ ಮೇಲೆ ನಂಬಿಕೆ ಇಟ್ಟಿದೆ. ನಾನು ಕೊನೆಯವರೆಗೂ ಕ್ರೀಸ್ನಲ್ಲಿ ಉಳಿದು ಬ್ಯಾಟ್ ಮಾಡಿದರೆ, ತಂಡಕ್ಕೆ ಗೆಲುವು ತಂದುಕೊಡಬಲ್ಲೆ ಎಂದು ಅವರು ನನಗೆ ಹೇಳಿದರು. ಅವರ ಮಾತುಗಳು ನನ್ನ ಮನಸ್ಸಿನಲ್ಲಿದ್ದವು. ಸಾಧ್ಯವಾದಷ್ಟು ಕೊನೆಯವರೆಗೂ ಪಂದ್ಯವನ್ನು ಕೊಂಡೊಯ್ದು ತಂಡವನ್ನು ಗೆಲುವಿನ ದಡ ಸೇರಿಸಬೇಕು ಎಂದು ಬಯಸಿದ್ದೆ. ಅವರು ನನ್ನ ಮೇಲೆ ಇಟ್ಟಿದ್ದ ನಂಬಿಕೆಗೆ ತಕ್ಕಂತೆ ಆಡಿದ್ದಕ್ಕೆ ನನಗೆ ನಿಜಕ್ಕೂ ಹೆಮ್ಮೆ ಇದೆ,” ಎಂದು ತಿಳಿಸಿದ್ದಾರೆ.
IND vs NZ: ತಿಲಕ್-ನಿತೀಶ್ ಝಲಕ್, ಎರಡನೇ ಪಂದ್ಯದಲ್ಲಿಯೂ ಭಾರತಕ್ಕೆ 4 ವಿಕೆಟ್ ರೋಚಕ ಜಯ!
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಚೇಸಿಂಗ್ ಸಂಕಷ್ಟಕ್ಕೆ ಸಿಲುಕಿತ್ತು. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮಧ್ಯಮ ಕ್ರಮಾಂಕವನ್ನು ಧ್ವಂಸಗೊಳಿಸಿ ಕೇವಲ 21 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದರು. ಆದರೆ ತಿಲಕ್ ವರ್ಮಾ ಒತ್ತಡದ ನಡುವೆಯೂ ತಾಳ್ಮೆಯಿಂದ ಬ್ಯಾಟಿಂಗ್ ಮುಂದುವರಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ನಿತೀಶ್ ಕುಮಾರ್ ರೆಡ್ಡಿ 13 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿದರು.
ಈ ಜೋಡಿ ಕೇವಲ 30 ಎಸೆತಗಳಲ್ಲಿ ಮುರಿಯದ 69 ರನ್ಗಳ ಜೊತೆಯಾಟವಾಡಿ ಭಾರತವನ್ನು ಮತ್ತೆ ಗೆಲುವಿನ ಹಾದಿಗೆ ತಂದಿತು. ಅಂತಿಮವಾಗಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಯಿತು. ತಿಲಕ್ ವರ್ಮಾ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ವೇಳೆ ಅವರು ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಮತ್ತೊಂದೆಡೆ, ನಿತೀಶ್ ರೆಡ್ಡಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ನ್ಯೂಜಿಲೆಂಡ್ ಬೌಲರ್ಗಳ ಮೇಲೆ ಒತ್ತಡ ಹೆಚ್ಚಿಸಿತು.
ನ್ಯೂಜಿಲೆಂಡ್ನ ನಿಧಾನಗತಿಯ ಪಿಚ್ನಲ್ಲಿ ಸ್ಪಿನ್ನರ್ಗಳನ್ನು ಎದುರಿಸುವಾಗ ವಿಕೆಟ್ಗಳ ನಡುವೆ ವೇಗವಾಗಿ ಓಡಿ ರನ್ ಗಳಿಸುವುದು ಮುಖ್ಯವಾಗಿತ್ತು ಎಂದು ತಿಲಕ್ ತಿಳಿಸಿದರು. ನಮನ್ ಧೀರ್ ಅವರೊಂದಿಗೆ ಕೊನೆಯವರೆಗೂ ಕ್ರೀಸ್ನಲ್ಲಿ ಉಳಿಯುವ ಬಗ್ಗೆ ಚರ್ಚಿಸಿದ್ದಾಗಿ ಅವರು ಹೇಳಿದರು.
ಟಿ20ಐ ಕ್ರಿಕೆಟ್ನಲ್ಲಿ ತಿಲಕ್ ವರ್ಮಾ ವಿಶ್ವದಾಖಲೆ: ಏಕೈಕ ವರ್ಷದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತೀಯ!
“ನಾನು ನಮನ್ಗೆ ನಾವು ಕೊನೆಯವರೆಗೂ ಕ್ರೀಸ್ನಲ್ಲಿ ಉಳಿಯಬಹುದು ಎಂದು ಹೇಳಿದ್ದೆ. ಹಿಂದಿನ ಪಂದ್ಯಕ್ಕೆ ಹೋಲಿಸಿದರೆ ಈ ಪಿಚ್ ನಿಧಾನವಾಗಿತ್ತು. ಹೀಗಾಗಿ, ವಿಶೇಷವಾಗಿ ಸ್ಪಿನ್ನರ್ಗಳು ಬೌಲ್ ಮಾಡುವಾಗ ವಿಕೆಟ್ಗಳ ನಡುವೆ ವೇಗವಾಗಿ ಓಡಿ ರನ್ ಗಳಿಸಬೇಕೆಂದು ತಿಳಿಸಿದ್ದೆ. ಅದೇ ನಮ್ಮ ಯೋಜನೆಯಾಗಿತ್ತು. ನಾವು ಅದನ್ನು ಉತ್ತಮವಾಗಿ ಕಾರ್ಯಗತಗೊಳಿಸಿದೆವು,” ಎಂದು ತಿಲಕ್ ಹೇಳಿದರು.
ನಮನ್ ಧೀರ್ 17 ಎಸೆತಗಳಲ್ಲಿ 31 ರನ್ ಗಳಿಸಿ 15ನೇ ಓವರ್ನಲ್ಲಿ ಮಿಚೆಲ್ ಸ್ಯಾಂಟ್ನರ್ಗೆ ವಿಕೆಟ್ ಒಪ್ಪಿಸಿದರು. ನಮನ್ ವಿಕೆಟ್ ಕಳೆದುಕೊಳ್ಳದಿದ್ದರೆ ಭಾರತ ಇನ್ನೂ ಬೇಗನೆ ಪಂದ್ಯ ಮುಗಿಸಬಹುದಿತ್ತು ಎಂಬ ಅಭಿಪ್ರಾಯವನ್ನು ತಿಲಕ್ ವ್ಯಕ್ತಪಡಿಸಿದರು.
“ದುರದೃಷ್ಟವಶಾತ್, ಮಿಚೆಲ್ ಸ್ಯಾಂಟ್ನರ್ ಅವರ ಕೊನೆಯ ಓವರ್ನಲ್ಲಿ ನಮನ್ ಔಟಾದರು. ಇಲ್ಲದಿದ್ದರೆ, ನಾವು 18ನೇ ಓವರ್ನಲ್ಲೇ ಪಂದ್ಯವನ್ನು ಮುಗಿಸಬಹುದಿತ್ತು ಎಂದು ಭಾವಿಸುತ್ತೇನೆ. ನಮನ್ ಆಡಿದ ರೀತಿಗೂ ಶ್ರೇಯ ಸಲ್ಲಬೇಕು. ಆ ಬಳಿಕ ಹೈದರಾಬಾದ್ನ ಆಟಗಾರರಾದ ನಿತೀಶ್ ರೆಡ್ಡಿ ಮತ್ತು ನಾನು ಕ್ರೀಸ್ನಲ್ಲಿದ್ದೆವು. ನಾವಿಬ್ಬರೂ ಸೇರಿ ಪಂದ್ಯವನ್ನು ಮುಗಿಸಿದ್ದು ನನಗೆ ತುಂಬಾ ಸಂತೋಷ ತಂದಿದೆ,” ಎಂದು ತಿಲಕ್ ವರ್ಮಾ ತಿಳಿಸಿದ್ದಾರೆ.