ಟಿ20ಐ ಕ್ರಿಕೆಟ್ನಲ್ಲಿ ತಿಲಕ್ ವರ್ಮಾ ವಿಶ್ವದಾಖಲೆ: ಏಕೈಕ ವರ್ಷದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತೀಯ!
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ತಿಲಕ್ ವರ್ಮಾ ಫೀಲ್ಡಿಂಗ್ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಏಕೈಕ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಕ್ಯಾಚ್ಗಳನ್ನು ಪಡೆದ ಫೀಲ್ಡರ್ ಎನಿಸಿಕೊಂಡಿದ್ದಾರೆ. ಭಾರತದ ಬೌಲರ್ಗಳು ನ್ಯೂಜಿಲೆಂಡ್ ತಂಡವನ್ನು 180 ರನ್ಗಳಿಗೆ ನಿಯಂತ್ರಿಸಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಕ್ಯಾಚ್ಗಳಲ್ಲಿ ತಿಲಕ್ ವರ್ಮಾ ವಿಶ್ವ ದಾಖಲೆ ಬರೆದಿದ್ದಾರೆ. -
ಕ್ರೈಸ್ಟ್ ಚರ್ಚ್: ಭಾರತ ಮತ್ತು ನ್ಯೂಜಿಲೆಂಡ್ (IND vs NZ) ತಂಡಗಳ ನಡುವಿನ ಎರಡನೇ ಟಿ20ಐ ಪಂದ್ಯದಲ್ಲಿ ತಿಲಕ್ ವರ್ಮಾ (Tilak Verma) ಫೀಲ್ಡಿಂಗ್ನಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರಿದರು. ಅವರು ಕ್ಯಾಚ್ಗಳ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಫೀಲ್ಡಿಂಗ್ನಲ್ಲಿ ಗಮನ ಸೆಳೆದ ಬಳಿಕ ತಿಲಕ್ ವರ್ಮಾ ಬ್ಯಾಟಿಂಗ್ನಲ್ಲಿ 26 ಎಸೆತಗಳಲ್ಲಿ ಅಜೇಯ 51 ರನ್ಗಳನ್ನು ಸಿಡಿಸಿ ಭಾರತ ತಂಡವನ್ನು ಗೆಲ್ಲಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಎರಡನೇ ಟಿ20ಐ ಅಕ್ಟೋಬರ್ 24ರಂದು ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಸರಣಿಯ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 225 ರನ್ಗಳನ್ನು ಗಳಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಎದುರಾಳಿ ತಂಡವನ್ನು 180 ರನ್ಗಳಿಗೆ ನಿಯಂತ್ರಿಸಿದರು. ಆ ಮೂಲಕ ಮೊದಲ ಪಂದ್ಯಕ್ಕೆ ಹೋಲಿಸಿದರೆ ಭಾರತ ತಂಡದ ಬೌಲಿಂಗ್ ವಿಭಾಗ ಗಮನಾರ್ಹ ಸುಧಾರಣೆ ಕಂಡಿತು.
IND vs NZ: 38 ವಿಕೆಟ್ಗಳೊಂದಿಗೆ ಭುವನೇಶ್ವರ್ ಕುಮಾರ್ ದಾಖಲೆ ಮುರಿದ ಅರ್ಷದೀಪ್ ಸಿಂಗ್!
ವಿಶ್ವ ದಾಖಲೆ ಬರೆದ ತಿಲಕ್ ವರ್ಮಾ
ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ತಿಲಕ್ ವರ್ಮಾ ತಮ್ಮ ಫೀಲ್ಡಿಂಗ್ ಮೂಲಕ ಗಮನ ಸೆಳೆದರು. ಅವರು ಎರಡು ಕ್ಯಾಚ್ಗಳನ್ನು ಪಡೆಯುವ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಏಕೈಕ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಕ್ಯಾಚ್ಗಳನ್ನು ಪಡೆದ ಫೀಲ್ಡರ್ ಎಂಬ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ತಿಲಕ್ ವರ್ಮಾ ಹಿಡಿದ ಎರಡನೇ ಕ್ಯಾಚ್ ಅವರ 2026ರ 27ನೇ ಕ್ಯಾಚ್ ಆಗಿತ್ತು. ಈ ಮೂಲಕ 2025ರಲ್ಲಿ ಇಂಡೋನೇಷ್ಯಾದ ಡ್ಯಾನಿಲ್ಸನ್ ಹಾವೋ 25 ಕ್ಯಾಚ್ಗಳನ್ನು ಪಡೆದಿದ್ದ ದಾಖಲೆಯನ್ನು ಅವರು ಮುರಿದಿದ್ದಾರೆ.
ಏಕೈಕ ವರ್ಷದಲ್ಲಿ ಟಿ20ಐ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ಗಳನ್ನು ಪಡೆದ ಆಟಗಾರರು
27 ಕ್ಯಾಚ್ಗಳು – ತಿಲಕ್ ವರ್ಮಾ (ಭಾರತ), 2026
25 ಕ್ಯಾಚ್ಗಳು – ಡ್ಯಾನಿಲ್ಸನ್ ಹಾವೋ (ಇಂಡೋನೇಷ್ಯಾ), 2025
24 ಕ್ಯಾಚ್ಗಳು – ಮುಹಮ್ಮದ್ ವಸೀಮ್ (ಯುಎಇ), 2024
21 ಕ್ಯಾಚ್ಗಳು – ಶರ್ವಿನ್ ಮುನಿಯಾಂಡಿ (ಮಲೇಷ್ಯಾ), 2025
20 ಕ್ಯಾಚ್ಗಳು – ಬ್ರಿಯಾನ್ ಮಸಾಬಾ (ಉಗಾಂಡ), 2023
20 ಕ್ಯಾಚ್ಗಳು – ತಂಜಿದ್ ಹಸನ್ (ಬಾಂಗ್ಲಾದೇಶ), 2025
ಗ್ಲೆನ್ ಫಿಲಿಪ್ಸ್, ಬೆವನ್ ಜೇಕಬ್ಸ್ ಅರ್ಧಶತಕ
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಆಟಗಾರರಾದ ಟಿಮ್ ಸೀಫರ್ಟ್ ಮತ್ತು ಫಿನ್ ಆಲೆನ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಸೀಫರ್ಟ್ 7 ರನ್ ಗಳಿಸಿದರೆ, ಆಲೆನ್ 16 ರನ್ಗಳಿಗೆ ಔಟಾದರು. ಡ್ಯಾರಿಲ್ ಮಿಚೆಲ್ ಕೂಡ ಕೇವಲ 6 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್ 70 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಬೆವನ್ ಜೇಕಬ್ಸ್ 58 ರನ್ಗಳ ಕೊಡುಗೆ ನೀಡಿದರು. ಈ ಇಬ್ಬರ ಉತ್ತಮ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ 20 ಓವರ್ಗಳಲ್ಲಿ 180 ರನ್ಗಳ ಮೊತ್ತ ದಾಖಲಿಸಿತು.
ಭಾರತದ ಪರ ಅರ್ಷದೀಪ್ ಸಿಂಗ್ ಎರಡು ವಿಕೆಟ್ಗಳನ್ನು ಪಡೆದರು. ಭುವನೇಶ್ವರ್ ಕುಮಾರ್, ಪ್ರಿನ್ಸ್ ಯಾದವ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಒಂದು ವಿಕೆಟ್ ಕಬಳಿಸಿದರು.
IND vs NZ: ತಿಲಕ್-ನಿತೀಶ್ ಝಲಕ್, ಎರಡನೇ ಪಂದ್ಯದಲ್ಲಿಯೂ ಭಾರತಕ್ಕೆ 4 ವಿಕೆಟ್ ರೋಚಕ ಜಯ!
ಭಾರತ ತಂಡಕ್ಕೆ 4 ವಿಕೆಟ್ ರೋಚಕ ಜಯ
ನ್ಯೂಜಿಲೆಂಡ್ ತಂಡ ನೀಡಿದ್ದ 181 ರನ್ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ ಹಾಗೂ ಅಭಷೇಕ್ ಶರ್ಮಾ ಯೋಗ್ಯ ಆರಂಭವನ್ನು ನೀಡಿ ವಿಕೆಟ್ ಒಪ್ಪಿಸಿದರು. ವೈಭವ್ ಸೂರ್ಯವಂಶಿ, ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ಮಧ್ಯಮ ಕ್ರಮಾಂಕದಲ್ಲಿವ ವಿಫಲರಾದರು. ಆದರೆ, ತಿಲಕ್ ವರ್ಮಾ (51 ರನ್), ನಮನ್ ಧೀರ್ (31 ರನ್) ಹಾಗೂ ನಿತೀಶ್ ಕುಮಾರ್ ರೆಡ್ಡಿ (26* ರನ್) ಅವರ ಬ್ಯಾಟಿಂಗ್ ಬಲದಿಂದ ಭಾರತ ತಂಡ, ಇನ್ನೂ ಒಂದು ಎಸೆತ ಬಾಕಿ ಇದ್ದಾಗಲೇ ಗೆಲುವಿನ ದಡ ಸೇರಿತು.