ನವದೆಹಲಿ: ಭಾರತ ತಂಡ ಇತ್ತೀಚೆಗೆ ತವರು ಟೆಸ್ಟ್ ಸರಣಿಗಳಲ್ಲಿ ಸತತ ವೈಫಲ್ಯವನ್ನು ಅನುಭವಿಸಿದೆ. ನ್ಯೂಜಿಲೆಂಡ್ ವಿರುದ್ಧ 0-3 ಹಾಗೂ ದಕ್ಷಿಣ ಆಫ್ರಿಕಾ ಎದುರು 0-2 ಅಂತರದಲ್ಲಿ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಆಘಾತವನ್ನು ಅನುಭವಿಸಿತ್ತು. ಇದರ ಫಲವಾಗಿ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಷಿಫ್ (WTC) ಫೈನಲ್‌ಗೆ ಅರ್ಹತೆ ಪಡೆದಿರಲಿಲ್ಲ. 2025ರ ಐಪಿಎಲ್ ಟೂರ್ನಿಯ ವೇಳೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಂದ ಹಾಗೆ ಭಾರತ ಟೆಸ್ಟ್ ತಂಡದ ವೈಫಲ್ಯದ ಬಗ್ಗೆ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ (Kapil Dev) ಪ್ರತಿಕ್ರಿಯೆ ನೀಡಿದ್ದಾರೆ.
"ಭಾರತ ತಂಡ ಇತ್ತೀಚೆಗೆ ಸ್ಪಿನ್ ಬೌಲಿಂಗ್ ಎದುರು ಉತ್ತಮ ಪ್ರದರ್ಶನವನ್ನು ತೋರಲು ಸಾಧ್ಯವಾಗುತ್ತಿಲ್ಲ, ಏಕೆಂದರೆ, ಟೀಮ್ ಇಂಡಿಯಾ ಆಟಗಾರರು ಇತ್ತೀಚೆಗೆ ಸಾಕಷ್ಟು ಟಿ20 ಹಾಗೂ ಏಕದಿನ ಕ್ರಿಕೆಟ್ ಅನ್ನು ಆಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ವಿಭಿನ್ನ ಚೆಂಡಿನ ಪಂದ್ಯವಾಗಿದೆ, ಶ್ರೀಲಂಕಾ ವಿರುದ್ಧಧ ಟೆಸ್ಟ್ ಸರಣಿಯಲ್ಲಿ ಭಾರತ ಉತ್ತಮ ಪ್ರದರ್ಶನವನ್ನು ತೋರಬಹುದೆಂದು ನಾನು ಭಾವಿಸುತ್ತೇನೆ," ಎಂದು ಕಪಿಲ್ ದೇವ್ ಹೇಳಿಕೆಯನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ, ಶ್ರೀಲಂಕಾ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಮೊದಲನೇ ಟೆಸ್ಟ್ ಪಂದ್ಯ ಆಗಸ್ಟ್ 15 ರಂದು ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಇಲ್ಲಿನ ಪಿಚ್‌ಗಳು ಸ್ಪಿನ್ ಸ್ನೇಹಿ ಕಂಡೀಷನ್ಸ್ ಇರುವ ಕಾರಣ, ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲು ಎದುರಾಗಲಿದೆ.
ಭಾರತ ತಂಡದ ಗಾಯಾಳುಗಳ ಸಮಸ್ಯೆಗೆ ಗೌತಮ್ ಗಂಭೀರ್ ಕಾರಣ ಎಂದ ಎಸ್ ಬದ್ರಿನಾಥ್!
ಸ್ಪಿನ್ ಎದುರು ಆಟಗಾರರ ಬ್ಯಾಟಿಂಗ್ ಕೌಶಲವನ್ನು ಹೆಚ್ಚಿಸುವ ಸಂಬಂಧ ದೇಶಿ ಕ್ರಿಕೆಟ್ ಎಷ್ಟೊಂದು ಮುಖ್ಯ ಎಂಬುದನ್ನು ಕಪಿಲ್ ದೇವ್ ಒತ್ತಿ ಹೇಳಿದ್ದಾರೆ. ಭಾರತ ತಂಡದ ಸ್ಟಾರ್ ಆಟಗಾರರು ದೇಶಿ ಕ್ರಿಕೆಟ್‌ಗೆ ಮರಳುವುದೇ ಇಲ್ಲ. ಭಾರತ ತಂಡದ ವೈಫಲ್ಯಕ್ಕೆ ಇದು ಕೂಡ ಬಲವಾದ ಕಾರಣ ಎಂಬುದು ಕಪಿಲ್ ದೇವ್ ವಾದ.
"ದೇಶಿ ಕ್ರಿಕೆಟ್ ಆಡುವುದು ತುಂಬಾ ಮುಖ್ಯ. ಭಾರತ ತಂಡದ ಅಗ್ರ ದರ್ಜೆಯ ಆಟಗಾರರು ದೇಶಿ ಕ್ರಿಕೆಟ್ ಆಡುವುದೇ ಇಲ್ಲ, ಇತ್ತೀಚೆಗೆ ಭಾರತ ತಂಡದ ವೈಫಲ್ಯಕ್ಕೆ ಇದು ಕೂಡ ಪ್ರಮುಖ ಕಾರಣವಾಗಿದೆ. ಹಾಗಾಗಿ ಬಿಸಿಸಿಐ, ಎಲ್ಲಾ ಆಟಗಾರರು ದೇಶಿ ಕ್ರಿಕೆಟ್‌ಗೆ ಮರಳಿ, ಮೂರಿ ದಿನಗಳ ಹಾಗೂ ನಾಲ್ಕು ದಿನಗಳ ಪಂದ್ಯಗಳನ್ನು ಆಯೋಜಿಸಬೇಕು. ಯುವ ಆಟಗಾರರು ದೇಶಿ ಕ್ರಿಕೆಟ್‌ನಲ್ಲಿ ಸ್ಟಾರ್ ಆಟಗಾರರಿಂದ ಹೆಚ್ಚಿನದಾಗಿ ಕಲಿಯಬಹುದಾಗಿದೆ," ಎಂದು ಅವರು ತಿಳಿಸಿದ್ದಾರೆ.
ಭಾರತ ವಿರುದ್ಧದ ಮೊದಲ ಟೆಸ್ಟ್‌ಗೆ 16 ಸದಸ್ಯರ ತಂಡ ಪ್ರಕಟಿಸಿದ ಶ್ರೀಲಂಕಾ
ಸ್ಪಿನ್ ಎದುರು ಭಾರತದ ವೈಫಲ್ಯಕ್ಕೆ ಕಾರಣ
ಸ್ಪಿನ್ ಬೌಲಿಂಗ್ ಹೊರತಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ವೇಳಾಪಟ್ಟಿಯಲ್ಲಿ ವೇಗದ ಬೌಲರ್‌ಗಳ ಮೇಲೆ ಬೀಳುತ್ತಿರುವ ಅತಿಯಾದ ಕೆಲಸದ ಹೊರೆಯ ಬಗ್ಗೆಯೂ ಮಾಜಿ ನಾಯಕ ಕಪಿಲ್ ದೇವ್ ಕಳವಳ ವ್ಯಕ್ತಪಡಿಸಿದ್ದಾರೆ. ವೇಗದ ಬೌಲರ್‌ಗಳ ದೈಹಿಕ ಸಾಮರ್ಥ್ಯದ ಮೇಲೆ ಬೀಳುವ ಒತ್ತಡವನ್ನು ಬಿಸಿಸಿಐ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಪ್ರತಿಯೊಬ್ಬರೂ ತಮ್ಮ ದೇಹದ ಬಗ್ಗೆ ತಿಳಿದುಕೊಳ್ಳಬೇಕು. ಈಗ ತುಂಬಾ ಟಿ20 ಮತ್ತು ಏಕದಿನ ಕ್ರಿಕೆಟ್ ನಡೆಯುತ್ತಿದೆ. ಹೀಗಾಗಿ ಅದು ದೇಹದ ಮೇಲೆ ಎಷ್ಟು ಒತ್ತಡ ಉಂಟುಮಾಡುತ್ತದೆ ಎಂಬುದರ ಬಗ್ಗೆ ಎಚ್ಚರಿಕೆ ವಹಿಸಬೇಕು.
ನಮ್ಮ ದೇಹ ನಿಜವಾಗಿಯೂ ವೇಗದ ಬೌಲರ್ ಆಗಲು ಹೆಚ್ಚು ಹೊಂದಿಕೆಯಾಗಿಲ್ಲ. ನಮ್ಮ ದೇಹ ಬ್ಯಾಟರ್ ಆಗಲು ಹೆಚ್ಚು ಹೊಂದಿಕೊಳ್ಳುತ್ತದೆ. ವೇಗದ ಬೌಲರ್‌ಗಳಿಗೆ ಎಷ್ಟು ಕೆಲಸದ ಹೊರೆ ನೀಡಬೇಕು ಎಂಬುದನ್ನು ಬಿಸಿಸಿಐ ಗಮನಿಸಬೇಕು,” ಎಂದು ಕಪಿಲ್ ದೇವ್ ಹೇಳಿದ್ದಾರೆ.