ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿಮ್ಮ ಈ ಬೇಜವಾಬ್ದಾರಿತನ ಆಟಕ್ಕೆ ನಿಮಗೆ ನಾಯಕತ್ವ ಸಿಗಲಿಲ್ಲ: ರಿಷಭ್‌ ಪಂತ್‌ ವಿರುದ್ಧ ಆರ್‌ ಅಶ್ವಿನ್‌ ಕಿಡಿ!

ರಿಷಭ್‌ ಪಂತ್‌ ಅವರ ಆಕ್ರಮಣಕಾರಿ ಬ್ಯಾಟಿಂಗ್‌ ಶೈಲಿಯನ್ನು ಆರ್‌ ಅಶ್ವಿನ್‌ ಪ್ರಶ್ನಿಸಿದ್ದಾರೆ. ಕಳಪೆ ನಿರ್ಧಾರಗಳಿಂದ ಪಂತ್‌ ತಮ್ಮ ಪ್ರತಿಭೆಗೆ ತಕ್ಕ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಅವರ ಅಬ್ಬರದ ಆಟ ಭಾರತಕ್ಕೆ ಎಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದೆ ಎಂಬ ಬಗ್ಗೆಯೂ ಅಶ್ವಿನ್‌ ಪ್ರಶ್ನೆ ಎತ್ತಿದ್ದಾರೆ.

ರಿಷಭ್‌ ಪಂತ್‌ ವಿರುದ್ಧ ಆರ್‌ ಅಶ್ವಿನ್‌ ಕಿಡಿ.

ನವದೆಹಲಿ: ಭಾರತದ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ (Rishabh Pant) ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ ಶೈಲಿಯಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ಗುರುತಿಸಿಕೊಂಡಿದ್ದಾರೆ. ಕಠಿಣ ಸಂದರ್ಭಗಳಲ್ಲೂ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡುವ ಸಾಮರ್ಥ್ಯ ಹೊಂದಿರುವ ಪಂತ್‌, ಹಲವು ಸ್ಮರಣೀಯ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ ಅವರ ಈ ನಿರ್ಭೀತ ಆಟದ ಶೈಲಿ ತಂಡಕ್ಕೆ ಎಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದೆ ಎಂಬ ಪ್ರಶ್ನೆಯನ್ನು ಭಾರತದ ಮಾಜಿ ಸ್ಪಿನ್ನರ್‌ ಆರ್‌. ಅಶ್ವಿನ್‌ (R Ashwin) ಎತ್ತಿದ್ದಾರೆ. ಪಂತ್‌ ಅವರ ಪ್ರತಿಭೆಯನ್ನು ಮೆಚ್ಚಿಕೊಂಡಿರುವ ಅಶ್ವಿನ್‌, ಅವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಟೀಕಿಸಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಪಂತ್‌ ಔಟಾದ ರೀತಿಯೇ ಈ ಚರ್ಚೆಗೆ ಕಾರಣವಾಗಿದೆ. ಮೊದಲ ಇನಿಂಗ್ಸ್‌ನಲ್ಲಿ 356 ರನ್‌ ಬಿಟ್ಟುಕೊಟ್ಟಿದ್ದ ಭಾರತ ತಂಡ ಸಂಕಷ್ಟದಿಂದ ಹೊರಬರಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಪಂತ್‌ ವಿಕೆಟ್‌ ಕಳೆದುಕೊಂಡರು.

ಜೇಕಬ್‌ ಡಫಿ ಎಸೆತವನ್ನು ಎದುರಿಸಲು ಕ್ರೀಸ್‌ನಿಂದ ಮುಂದೆ ಬಂದ ಪಂತ್‌, ಆಕ್ರಮಣಕಾರಿ ಹೊಡೆತಕ್ಕೆ ಮುಂದಾದರು. ಆದರೆ ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ಮಿಡ್‌ವಿಕೆಟ್‌ ಕಡೆಗೆ ಹಾರಿತು. ಅಲ್ಲಿ ಕೈಲ್‌ ಜೇಮಿಸನ್‌ ಸುಲಭವಾಗಿ ಕ್ಯಾಚ್‌ ಪಡೆದರು. ಆ ಮೂಲಕ ಪಂತ್‌ 23 ರನ್‌ ಗಳಿಸಿ ನಿರ್ಣಾಯಕ ಹಂತದಲ್ಲಿ ಪೆವಿಲಿಯನ್‌ಗೆ ಮರಳಿದರು.

IND vs NZ: ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ವಿಕೆಟ್ ಪಡೆಯದೆ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಜಸ್‌ಪ್ರೀತ್ ಬುಮ್ರಾ!

ಪಂತ್‌ ಭಾರತದ ಅತ್ಯುತ್ತಮ ಆಟಗಾರನಾಗಬಹುದಿತ್ತು

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್‌, ಪಂತ್‌ ತಮ್ಮ ಆಟದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ ಭಾರತದ ಪ್ರಮುಖ ಆಟಗಾರನಾಗಿ ಬೆಳೆಯಬಹುದಿತ್ತು ಎಂದಿದ್ದಾರೆ.

"ರಿಷಭ್‌ ಪಂತ್‌ ತಮ್ಮ ಪೀಳಿಗೆಯ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅವರು ತಮ್ಮ ಆಟವನ್ನು ಇನ್ನಷ್ಟು ಸುಧಾರಿಸಿಕೊಂಡು ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ, ಭಾರತದ ಪರ ನಾಲ್ಕನೇ ಕ್ರಮಾಂಕದಲ್ಲಿ ಖಾಯಂ ಆಟಗಾರನಾಗಬಹುದಿತ್ತು. ಅಷ್ಟೇ ಅಲ್ಲ, ಭಾರತ ತಂಡದ ನಾಯಕನಾಗುವ ಅವಕಾಶವೂ ಅವರಿಗಿತ್ತು. ಆದರೆ ಅವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೇ ಅವರಿಗೆ ಹಿನ್ನಡೆಯಾಗಿದೆ," ಎಂದು ಅಶ್ವಿನ್‌ ಹೇಳಿದ್ದಾರೆ.

ಅಬ್ಬರದ ಆಟದಿಂದ ಎಷ್ಟು ಪಂದ್ಯ ಗೆದ್ದಿದ್ದಾರೆ?

ಪಂತ್‌ ಅವರ ಪ್ರತಿಭೆಯನ್ನು ಯಾವಾಗಲೂ ಮೆಚ್ಚಿಕೊಂಡಿರುವ ಅಶ್ವಿನ್‌, ಅವರು ಪದೇ-ಪದೆ ಒಂದೇ ರೀತಿಯ ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

"ಭಾರತ ಕಂಡ ಅತ್ಯಂತ ಪ್ರತಿಭಾವಂತ ಟೆಸ್ಟ್‌ ಬ್ಯಾಟರ್‌ಗಳಲ್ಲಿ ರಿಷಭ್‌ ಪಂತ್‌ ಕೂಡ ಒಬ್ಬರು ಎಂದು ನಾನು ಯಾವಾಗಲೂ ಹೇಳುತ್ತೇನೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರು ಆಕ್ರಮಣಕಾರಿ ಹೊಡೆತಗಳಿಗೆ ಮುಂದಾಗಿ ವಿಕೆಟ್‌ ಕಳೆದುಕೊಳ್ಳುತ್ತಾರೆ. ಕ್ರೀಸ್‌ನಿಂದ ಮುಂದೆ ಬಂದು ಚೆಂಡನ್ನು ಬೌಂಡರಿ ಅಥವಾ ಸಿಕ್ಸರ್‌ಗೆ ಅಟ್ಟಲು ಪ್ರಯತ್ನಿಸುತ್ತಾರೆ. ಆದರೆ ಫೀಲ್ಡರ್‌ಗಳು ಅದೇ ಜಾಗದಲ್ಲಿ ನಿಂತಿರುವುದರಿಂದ ಕ್ಯಾಚ್‌ ನೀಡಿ ನಿರ್ಗಮಿಸುತ್ತಾರೆ," ಎಂದು ಅಶ್ವಿನ್‌ ವಿಶ್ಲೇಷಿಸಿದ್ದಾರೆ.

IND vs NZ: ಭಾರತ ತಂಡದಲ್ಲಿ ಬೆಂಚ್‌ ಕಾಯುತ್ತಿರುವ ಮೊಹಮ್ಮದ್‌ ಸಿರಾಜ್‌ ಬಗ್ಗೆ ಭವಿಷ್ಯ ನುಡಿದ ಆರ್‌ ಅಶ್ವಿನ್‌!

ಪಂತ್‌ ಅಸಾಧಾರಣ ಇನಿಂಗ್ಸ್‌ಗಳನ್ನು ಆಡಿರುವುದನ್ನು ಒಪ್ಪಿಕೊಂಡಿರುವ ಅಶ್ವಿನ್‌, ಅವರ ಆಕ್ರಮಣಕಾರಿ ಆಟ ಎಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದೆ ಎಂಬುದನ್ನು ಪರಿಶೀಲಿಸುವಂತೆ ಹೇಳಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವಿಕೆಟ್‌ ಕೀಪರ್‌ ಆಡಂ ಗಿಲ್‌ಕ್ರಿಸ್ಟ್‌ ಅವರೊಂದಿಗೆ ಹೋಲಿಕೆ ಮಾಡುವಾಗ ಕೇವಲ ಮನರಂಜನೆಯ ಆಟಕ್ಕಿಂತ ಫಲಿತಾಂಶಗಳಿಗೂ ಆದ್ಯತೆ ನೀಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಪಂತ್‌ ತಮ್ಮ ಟೆಸ್ಟ್‌ ವೃತ್ತಿಜೀವನದಲ್ಲಿ ಒಂಬತ್ತು ಶತಕಗಳನ್ನು ಬಾರಿಸಿದ್ದಾರೆ. ಆದರೆ ಅವುಗಳಲ್ಲಿ ಕೇವಲ ಎರಡು ಶತಕಗಳು ಭಾರತ ಗೆದ್ದ ಪಂದ್ಯಗಳಲ್ಲಿ ದಾಖಲಾಗಿವೆ ಎಂಬ ಅಂಶವನ್ನು ಅಶ್ವಿನ್‌ ಉಲ್ಲೇಖಿಸಿದ್ದಾರೆ.

"ಪಂತ್‌ ಅವರ ಟೆಸ್ಟ್‌ ಶತಕಗಳು ಮತ್ತು ಆ ಪಂದ್ಯಗಳ ಫಲಿತಾಂಶಗಳನ್ನು ಪರಿಶೀಲಿಸಿದಾಗ ಗೆಲುವಿನ ಸಂಖ್ಯೆ ಅಚ್ಚರಿ ಮೂಡಿಸಿತು. ಆ ಸಮಯದಲ್ಲಿ ಅವರ ಶತಕಗಳಲ್ಲಿ ಕೇವಲ ಒಂದು ಮಾತ್ರ ಭಾರತ ಗೆದ್ದ ಪಂದ್ಯದಲ್ಲಿ ದಾಖಲಾಗಿತ್ತು. ಗಾಬಾ ಟೆಸ್ಟ್‌ನಲ್ಲಿ ಅವರು ಗಳಿಸಿದ 89 ರನ್‌ಗಳನ್ನೂ ಸೇರಿಸಿದರೆ, ಗೆಲುವಿಗೆ ಕೊಡುಗೆ ನೀಡಿದ ಎರಡು ಅಥವಾ ಮೂರು ಇನಿಂಗ್ಸ್‌ಗಳಿವೆ ಎಂದು ಹೇಳಬಹುದು," ಎಂದು ಅಶ್ವಿನ್‌ ತಿಳಿಸಿದ್ದಾರೆ.

ʻನಾನು ನಾಯಕನಾಗಿದ್ದರೆ ಮೊಹಮ್ಮದ್‌ ಸಿರಾಜ್‌ರನ್ನು ಆಡಿಸುತ್ತಿದ್ದೆʼ: ಸೌರವ್‌ ಗಂಗೂಲಿ!

90 ರನ್‌ಗೆ ಔಟಾದರೆ ಅದು ನಿಸ್ವಾರ್ಥ ಆಟವಲ್ಲ

ಇಂಗ್ಲೆಂಡ್‌ ವಿರುದ್ಧದ ಹಿಂದಿನ ಪಂದ್ಯಗಳಲ್ಲಿಯೂ ಪಂತ್‌ ಇದೇ ರೀತಿಯ ಆಕ್ರಮಣಕಾರಿ ಹೊಡೆತಗಳಿಗೆ ಮುಂದಾಗಿ ವಿಕೆಟ್‌ ಕಳೆದುಕೊಂಡಿದ್ದನ್ನು ಅಶ್ವಿನ್‌ ನೆನಪಿಸಿದ್ದಾರೆ. ಆಕ್ರಮಣಕಾರಿ ಆಟವಾಡಿ ಔಟಾದರೆ ಅದನ್ನು ನಿಸ್ವಾರ್ಥ ಆಟ ಎಂದು ಪರಿಗಣಿಸಬೇಕೆಂಬ ವಾದವನ್ನೂ ಅವರು ತಳ್ಳಿಹಾಕಿದ್ದಾರೆ.

"90 ರನ್‌ ಗಳಿಸಿ ಔಟಾದ ಮಾತ್ರಕ್ಕೆ ಅದು ನಿಸ್ವಾರ್ಥ ಆಟವಾಗುವುದಿಲ್ಲ. ಕೆಲವೊಮ್ಮೆ ಅದು ಕೇವಲ ಬೇಜವಾಬ್ದಾರಿಯುತ ಅಥವಾ ಯೋಚನೆಯಿಲ್ಲದ ಆಟವಾಗಿರಬಹುದು," ಎಂದು ಅಶ್ವಿನ್‌ ಕಟುವಾಗಿ ಹೇಳಿದ್ದಾರೆ.