ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

15ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ!

ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಗಳ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ 15ನೇ ವಯಸ್ಸಿನ ವೈಭವ್‌ ಸೂರ್ಯವಂಶಿ, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಈ ದಾಖಲೆಯ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ.

ನವದೆಹಲಿ: ಮುಂದಿನ ತಿಂಗಳುಗಳಲ್ಲಿ ನಡೆಯಲಿರುವ ಮೂರು ಟಿ20 ಅಂತಾರಾಷ್ಟ್ರೀಯ ಸರಣಿಗಳಿಗಾಗಿ ಬಿಸಿಸಿಐ ಭಾರತ ಟಿ20 ತಂಡವನ್ನು (India's T20 Squad) ಪ್ರಕಟಿಸಿದೆ. ಇದರಲ್ಲಿ ಐರ್ಲೆಂಡ್ ವಿರುದ್ಧದ ಟಿ20 ಸರಣಿ, ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೂ ಸೆಪ್ಟೆಂಬರ್‌ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಸೇರಿವೆ. ಈ ಆಯ್ಕೆಗಳೊಂದಿಗೆ ಭಾರತೀಯ ಕ್ರಿಕೆಟ್ ಹೊಸ ಯುಗಕ್ಕೆ ಕಾಲಿಟ್ಟಿದ್ದು, 2028ರ ಟಿ20 ವಿಶ್ವಕಪ್‌ವರೆಗೆ ಸಾಗುವ ಮುಂದಿನ ಎರಡು ವರ್ಷಗಳ ಅವಧಿಗೆ ತಂಡ ಸಿದ್ಧತೆಯನ್ನು ಆರಂಭಿಸಿದೆ. ಇದರಲ್ಲಿ ವಿಶೇಷ ಏನೆಂದರೆ ಭಾರತ ತಂಡಕ್ಕೆ ಇದೇ ಮೊದಲ ಬಾರಿ ವೈಭವ್‌ ಸೂರ್ಯವಂಶಿ (Vaibhav Sooryavanshi) ಆಯ್ಕೆಯಾಗಿದ್ದಾರೆ.

2026ರ ಐಪಿಎಲ್ ಟೂರ್ನಿಯಲಿ ರಾಜಸ್ಥಾನ್ ರಾಯಲ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ 15ರ ವಯಸ್ಸಿನ ವೈಭವ್‌ ಸೂರ್ಯವಂಶಿ ಅವರಿಗೆ ಕೊನೆಗೂ ಭಾರತ ತಂಡದಲ್ಲಿ ಸ್ಥಾನ ಲಭಿಸಿದೆ. ಇವರು ಕಳೆದ ಐಪಿಎಲ್‌ ಟೂರ್ನಿಯಲ್ಲಿ 776 ರನ್‌ಗಳ ಆರೆಂಜ್‌ ಕ್ಯಾಪ್‌ ಮತ್ತು ಅತ್ಯಂತ ಮೌಲ್ಯಯುತ ಆಟಗಾರ ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದರು. ಇದೀಗ ತಮ್ಮ 15ನೇ ವಯಸ್ಸಿನಲ್ಲಿಯೇ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

ವೈಭವ್‌ಗೆ ಇಷ್ಟು ಬೇಗ ಚಾನ್ಸ್‌ ಏಕೆ? ಸೂರ್ಯಕುಮಾರ್‌ಗೆ ಕೊಕ್‌ ನೀಡಿದ್ದೇಕೆ? ಬಿಸಿಸಿಐಗೆ ಅಶ್ವಿನ್‌ ಪ್ರಶ್ನೆ!

ಸಚಿನ್‌ ದಾಖಲೆ ಮುರಿದ ವೈಭವ್‌

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರನ್ನು ಮೊದಲ ಬಾರಿ 1989ರಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆಗ ಅವರಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಇದೀಗ ವೈಭವ್‌ ಸೂರ್ಯವಂಶಿ ಅವರು ಕೇವಲ 15ನೇ ವಯಸ್ಸಿನಲ್ಲೇ ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ, ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ವೈಭವ್ ಸೋರ್ಯವಂಶಿ ಬರೆದಿದ್ದಾರೆ. ಆ ಮೂಲಕ ಸಚಿನ್‌ ದಾಖಲೆಯನ್ನು ಎಡಗೈ ಬ್ಯಾಟ್ಸ್‌ಮನ್‌ ಮುರಿದಿದ್ದಾರೆ.

ವೈಭವ್‌ ಸೂರ್ಯವಂಶಿ ಆಯ್ಕೆಯ ಬಗ್ಗೆ ಅಗರ್ಕರ್‌ ಹೇಳಿದ್ದೇನು?

ತಂಡದ ಆಯ್ಕೆ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಆಯ್ಕೆದಾರ ಅಜಿತ್‌ ಅಗರ್ಕರ್‌, 2026ರ ಐಪಿಎಲ್ ಟೂರ್ನಿಯಲ್ಲಿ ಲ ವೈಭವ್ ಸೂರ್ಯವಂಶಿ ತೋರಿದ ಅದ್ಭುತ ಪ್ರದರ್ಶನದಿಂದಲೇ ಅವರಿಗೆ ಭಾರತ ತಂಡದಲ್ಲಿ ನೇರ ಸ್ಥಾನವನ್ನು ಖಚಿತಪಡಿಸಿತು ಎಂದು ಹೇಳಿದ್ದಾರೆ.

ಇಂಗ್ಲೆಂಡ್‌, ಐರ್ಲೆಂಡ್‌ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಶ್ರೇಯಸ್‌ ಅಯ್ಯರ್‌ ನಾಯಕ, ಸೂರ್ಯವಂಶಿಯೂ ಆಯ್ಕೆ

"ವೈಭವ್ ಬಗ್ಗೆ ಇನ್ನೇನು ಹೇಳಬಹುದು? ಅವರು ಏನು ಮಾಡಬಲ್ಲರೆಂಬುದನ್ನು ನಾವು ಎಲ್ಲರೂ ನೋಡಿದ್ದೇವೆ. ಪ್ಲೇಆಫ್ಸ್‌ ಹಂತದಲ್ಲಿಯೂ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಹುತೇಕ ಒಬ್ಬರೆ ಮುನ್ನಡೆಸಿದುದನ್ನು ನೀವು ಕಂಡಿದ್ದೀರಿ. ಅವರು ಎಷ್ಟು ಉತ್ತಮವಾಗಿ ಬ್ಯಾಟ್‌ ಮಾಡುತ್ತಿದ್ದಾರೆ ಅಥವಾ ಎಷ್ಟು ಚೆನ್ನಾಗಿ ಆಡುತ್ತಿದ್ದಾರೆ ಎಂಬುದನ್ನು ನಾನು ಮತ್ತೆ ಹೇಳಬೇಕಾದ ಅಗತ್ಯವಿಲ್ಲ. ಇದು ಕೇವಲ ಈ ಸೀಸನ್‌ನ ಕಥೆಯೂ ಅಲ್ಲ. ಕಳೆದ ಸೀಸನ್‌ನಲ್ಲಿಯೇ ಅವರು ಅದ್ಭುತ ಆರಂಭವನ್ನು ಪಡೆದಿದ್ದರು."

"ಅಷ್ಟೊಂದು ಸ್ಪರ್ಧಾತ್ಮಕ ಮತ್ತು ಒತ್ತಡಭರಿತವಾದ ಐಪಿಎಲ್‌ ಟೂರ್ನಿಯಲ್ಲಿ ಇಷ್ಟು ಚಿಕ್ಕ ವಯಸ್ಸಿನ ಆಟಗಾರ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವುದು ವಿಶೇಷ ಸಾಧನೆ. ಅವರು ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಆಟಗಾರ. ಟಿ20 ಕ್ರಿಕೆಟ್ ನೋಡುತ್ತಿರುವ ಪ್ರತಿಯೊಬ್ಬರಂತೆ ನಮಗೂ ಅವರ ಬಗ್ಗೆ ಅಪಾರ ನಿರೀಕ್ಷೆಗಳಿವೆ. ನನ್ನ ಅಭಿಪ್ರಾಯದಲ್ಲಿ ಅವರು ತನ್ನ ಪ್ರದರ್ಶನದ ಮೂಲಕ ತಂಡದಲ್ಲಿ ಸ್ಥಾನವನ್ನು ತಾನೇ ಗಳಿಸಿಕೊಂಡಿದ್ದಾರೆ," ಎಂದು ಅಗರ್ಕರ್ ಹೇಳಿದ್ದಾರೆ.