ನವದೆಹಲಿ: ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ (ODI World Cup 2027) ಇನ್ನು ಕೇವಲ ಒಂದು ವರ್ಷ ಮಾತ್ರ ಬಾಕಿ ಇದೆ. ಬಿಸಿಸಿಐ ಸೆಲೆಕ್ಟರ್‌ಗಳು ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ಅತ್ಯುತ್ತಮ ತಂಡವನ್ನು ಕಟ್ಟಲು ಈಗಾಗಲೇ ತಮ್ಮ ಕಾರ್ಯವನ್ನು ಆರಿಸಿದ್ದಾರೆ. ಇದರ ನಡುವೆ ಮಾಜಿ ವಿಕಟ್ ಕೀಪರ್ ರಾಬಿನ್ ಉತ್ತಪ್ಪ (Robin Uthappa) ಅವರು, ಏಕದಿನ ವಿಶ್ವಕಪ್ ಟೂರ್ನಿಗೆ ತಮ್ಮ ನೆಚ್ಚಿನ 15 ಸದಸ್ಯರ ಭಾರತ ತಂಡವನ್ನು ಆರಿಸಿದ್ದಾರೆ. ತಮ್ಮ ತಂಡದಲ್ಲಿ ಅವರು ವೈಭವ್ ಸೂರ್ಯವಂಶಿ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ರಾಬಿನ್ ಉತ್ತಪ್ಪ, "ದಕ್ಷಿಣ ಆಫ್ರಿಕಾದಲ್ಲಿ ನಡೆಯುವ 2027ರ ಏಕದಿನ ವಿಶ್ವಕಪ್ ಟೂರ್ನಿಗೆ ನನ್ನ ತಂಡ ಇದಾಗಿದೆ. ವಿಶ್ವಕಪ್ ಟೂರ್ನಿಗೆ ಇನ್ನೂ ಒಂದು ವರ್ಷ ಬಾಕಿ ಇದೆ ಹಾಗೂ ಈ 15 ಆಟಗಾರರು ಮುಂದಿನ ಟೂರ್ನಿಗೆ ಇಂದಿನಿಂದ ಅಭ್ಯಾಸ ನಡೆಸಲು ಪರಿಪೂರ್ಣವಾಗಿದೆ. ಇದೇ ವಿಶ್ವಕಪ್ ಬಾಂಬ್ ತಂಡ ಎಂದು ನನಗೆ ಅನಿಸುತ್ತಿದೆ," ಎಂದು ಹೇಳಿದ್ದಾರೆ.
ಭಾರತದ ಬಾಂಗ್ಲಾದೇಶ ಪ್ರವಾಸ ಮತ್ತೆ ಅನುಮಾನ
ವೈಭವ್ ಸೂರ್ಯವಂಶಿ ಇನ್
ಭಾರತ ತಂಡದ ಅಗ್ರ ಕ್ರಮಾಂಕಕ್ಕೆ ರಾಬಿನ್ ಉತ್ತಪ್ಪ ಅವರು, ರೋಹಿತ್ ಶರ್ಮಾ, ಶುಭಮನ್ ಗಿಲ್ ಹಾಗೂ ವೈಭವ್ ಸೂರ್ಯವಂಶಿಯನ್ನು ಆರಿಸಿದ್ದಾರೆ. ಇನ್ನು ಮಧ್ಯಮ ಕ್ರಮಾಂಕಕ್ಕೆ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಹಾಗೂ ಸಂಜು ಸ್ಯಾಮ್ಸನ್ ಅವರನ್ನು ಉತ್ತಪ್ಪ ಆರಿಸಿದ್ದಾರೆ. ಸಂಜು ಸ್ಯಾಮ್ಸನ್ ಅವರನ್ನು ಆರಿಸುವ ಮೂಲಕ ಭಾರತ ತಂಡದಲ್ಲಿ ಅತ್ಯುತ್ತಮ ಸಂಯೋಜನೆ ಉಂಟಾಗಿದೆ ಎಂಬುದು ರಾಬಿನ್ ಉತ್ತಪ್ಪ ಅವರ ಅಭಿಪ್ರಾಯ.
"ಸಂಜು ಸ್ಯಾಮ್ಸನ್ ಅವರು ಬ್ಯಾಕ್‌ಅಪ್ ವಿಕೆಟ್ ಕೀಪರ್, ಮ್ಯಾಚ್ ಫಿನಿಷರ್ ಹಾಗೂ ಇನಿಂಗ್ಸ್ ಕೂಡ ಆರಂಭಿಸಬಲ್ಲರು. ಅವರು ಬಹುಮುಖ ಪ್ರತಿಭೆ, ಹಾಗಾಗಿ ನಾನು ಅವರನ್ನು ಆಯ್ಕೆ ಮಾಡಲು ಇಷ್ಟಪಡುತ್ತೇನೆ," ಎಂದು ಕನ್ನಡಿಗ ವಿವರಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ಗೆ ಕೊಲಂಬೊಗೆ ಆಗಮಿಸಿದ ಭಾರತ ತಂಡ
ಸ್ಪಿನ್ನರ್, ಆಲ್‌ರೌಂಡರ್‌ಗಳು
ಆಲ್‌ರೌಂಡರ್ ವಿಭಾಗಕ್ಕೆ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಅವರನ್ನು ಆರಿಸಿದ ಉತ್ತಪ್ಪ, ಸ್ಪಿನ್ ವಿಭಾಗಕ್ಕೆ ಕುಲ್ದೀಪ್ ಯಾದವ್ ಅವರನ್ನು ಸೇರಿಸಿದ್ದಾರೆ. ಎಡಗೈ ಸ್ಪಿನ್ನರ್‌ಗಳ ಜೊತೆಗೆ ಕುಲ್ದೀಪ್ ಯಾದವ್ ಅವರು ತಮ್ಮ ವಿಭಿನ್ನ ಶೈಲಿಯ ಬೌಲಿಂಗ್‌ನಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಭೀತಿ ಹುಟ್ಟಿಸುತ್ತಾರೆ ಎಂದು ಉತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೇಗದ ಬೌಲಿಂಗ್ ವಿಭಾಗ
ಜಸ್‌ಪ್ರೀತ್ ಬುಮ್ರಾ ಸಾರಥ್ಯದ ವೇಗದ ಬೌಲಿಂಗ್ ವಿಭಾಗವನ್ನು ರಾಬಿನ್ ಆಯ್ಕೆ ಮಾಡಿದ್ದಾರೆ. ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಆರಿಸಲಾಗಿದೆ. 2022 ರಿಂದ ಭುವನೇಶ್ವರ್ ಕುಮಾರ್ ಅವರು ಭಾರತ ಏಕದಿನ ತಂಡದಲ್ಲಿ ಆಡಿಲ್ಲ.
2027ರ ಏಕದಿನ ವಿಶ್ವಕಪ್‌ಗೆ ರಾಬಿನ್ ಉತ್ತಪ್ಪ ಆರಿಸಿದ ಭಾರತ ತಂಡ: ರೋಹಿತ್ ಶರ್ಮಾ, ಶುಭಮನ್ ಗಿಲ್, ವೈಭವ್ ಸೂರ್ಯವಂಶಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಕ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್