Vijay Hazare Trophy: ಬಿಹಾರ ಪರ ಎರಡನೇ ಪಂದ್ಯಕ್ಕೆ ವೈಭವ್ ಸೂರ್ಯವಂಶಿ ಅಲಭ್ಯ! ಇದಕ್ಕೆ ಕಾರಣವೇನು?
ಅರುಣಾಚಲ ಪ್ರದೇಶ ವಿರುದ್ಧದ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ತಮ್ಮ ಚೊಚ್ಚಲ ಪಂದ್ಯದಲ್ಲಿ ಬಿಹಾರ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರು 84 ಎಸೆತಗಳಲ್ಲಿ 190 ರನ್‌ಗಳನ್ನು ಗಳಿಸಿ ಹಲವು ದಾಖಲೆಗಳನ್ನು ಬರೆದಿದ್ದರು. ಇದೀಗ ಅವರು ಎರಡನೇ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇದಕ್ಕೆ ಕಾರಣವೇನೆಂದು ಇಲ್ಲಿ ವಿವರಿಸಲಾಗಿದೆ.
ಮಣಿಪುರ ವಿರುದ್ದದ ಪಂದ್ಯಕ್ಕೆ ವೈಭವ್ ಸೂರ್ಯವಂಶಿ ಔಟ್. -
ನವದೆಹಲಿ: ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿರುವ 14ನೇ ವಯಸ್ಸಿನ ವೈಭವ್ ಸೂರ್ಯವಂಶಿ (Vaibhav Suryavanshi) 2025-26ರ ವಿಜಯ್ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯಲ್ಲಿ ಅದ್ಭುತ ಆರಂಭ ಕಂಡಿದ್ದಾರೆ. ಬುಧವಾರ ಅರುಣಾಚಲ ಪ್ರದೇಶ ವಿರುದ್ಧದ ಬಿಹಾರ (Bihar) ಪರ ಮೊದಲ ಪಂದ್ಯದಲ್ಲಿ ವೈಭವ್ 84 ಎಸೆತಗಳಲ್ಲಿ 190 ರನ್ ಚಚ್ಚಿದ್ದರು. ಅದರಲ್ಲಿಯೂ ಕೇವಲ 36 ಎಸೆತಗಳಲ್ಲಿ 100 ರನ್ ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದಿದ್ದರು. ಈ ಇನಿಂಗ್ಸ್‌ನೊಂದಿಗೆ ವೈಭವ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಬಿಹಾರದ ಎರಡನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರಿಂದ ಕ್ರಿಕೆಟ್ ಅಭಿಮಾನಿಗಳು ಮತ್ತೊಂದು ಬಲವಾದ ಪ್ರದರ್ಶನವನ್ನು ನಿರೀಕ್ಷಿಸಿದ್ದರು, ಆದರೆ ಅವರ ಭರವಸೆಗಳು ಈಗ ಭಗ್ನಗೊಂಡಿವೆ. ಏಕೆಂದರೆ ಅವರು ಮಣಿಪುರ ವಿರುದ್ಧ ಡಿಸೆಂಬರ್ 26 ರಂದು ನಡೆಯುವ ಎರಡನೇ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಅವರು ಪ್ರಶಸ್ತಿಯೊಂದನ್ನು ಸ್ವೀಕರಿಸಲು ಅವರು ದೆಹಲಿಗೆ ಪ್ರಯಾಣಿಸಲಿದ್ದಾರೆ.
ವೈಭವ್ ಸೂರ್ಯವಂಶಿ ಅವರನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಬಾಲ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳನ್ನು ಶುಕ್ರವಾರ (ಡಿಸೆಂಬರ್ 26) ಸನ್ಮಾನಿಸಲಾಗುವುದು. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಮಾರಂಭವನ್ನು ಆಯೋಜಿಸಲಾಗಿದ್ದು, ಅಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಎಲ್ಲಾ ಮಕ್ಕಳನ್ನು ಸನ್ಮಾನಿಸಲಿದ್ದಾರೆ. ನಂತರ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. 14 ವರ್ಷದ ಸ್ಟಾರ್ ಕ್ರಿಕೆಟಿಗ ಪ್ರಶಸ್ತಿ ಸ್ವೀಕರಿಸಲು ಬುಧವಾರ ಸಂಜೆ ದೆಹಲಿಗೆ ತೆರಳಿದರು.
190 ರನ್ ಸಿಡಿಸಿದ ವೈಭವ್ ಸೂರ್ಯವಂಶಿಗೆ ಭಾರತ ತಂಡದಲ್ಲಿ ಸ್ಥಾನ ನೀಡಬೇಕೆಂದ ಶಶಿ ತರೂರ್!
ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ಎಂದರೇನು?
ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಮಕ್ಕಳ ಪ್ರಶಸ್ತಿಯು ದೇಶದಲ್ಲಿ ಮಕ್ಕಳಿಗೆ ನೀಡುವ ಅತ್ಯುನ್ನತ ಗೌರವವಾಗಿದೆ. ಈ ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ವಾರ್ಷಿಕವಾಗಿ ನೀಡುತ್ತದೆ. ಎರಡು ರೀತಿಯ ಪ್ರಶಸ್ತಿಗಳಿವೆ. ಮೊದಲನೆಯದು ರಾಷ್ಟ್ರೀಯ ಮಕ್ಕಳ ಪ್ರಶಸ್ತಿ, ಇದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ ಮಕ್ಕಳನ್ನು ಕಲೆ, ಸಂಸ್ಕೃತಿ ಅಥವಾ ಕ್ರೀಡೆಗಳಿಗೆ ನೀಡಿದ ಕೊಡುಗೆಗಳಿಗಾಗಿ ಗೌರವಿಸುತ್ತದೆ. ಎರಡನೆಯದು ರಾಷ್ಟ್ರೀಯ ಮಕ್ಕಳ ಪ್ರಶಸ್ತಿ, ಇದು ಮಕ್ಕಳ ಅಭಿವೃದ್ಧಿ ಅಥವಾ ಮಕ್ಕಳ ರಕ್ಷಣೆಯಲ್ಲಿ ಅತ್ಯುತ್ತಮ ಕೆಲಸಕ್ಕಾಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ಗೌರವಿಸುತ್ತದೆ.
ವಿಸ್ಫೋಟಕ ಬ್ಯಾಟಿಂಗ್; 36 ಎಸೆತಗಳಲ್ಲಿ ಶತಕ ಬಾರಿಸಿದ ಸೂರ್ಯವಂಶಿ
ಹಲವು ದಾಖಲೆಗಳನ್ನು ಮುರಿದಿದ್ದ ವೈಭವ್
ಡಿಸೆಂಬರ್ 24 ರಂದು ನಡೆದಿದ್ದ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಬಿಹಾರ ಪರ ಅರುಣಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ವೈಭವ್, ತಮ್ಮ ಮೊದಲ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಅವರು 84 ಎಸೆತಗಳಲ್ಲಿ 190 ರನ್ ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದಿದ್ದರು. ಅವರು ಕೇವಲ 36 ಎಸೆತಗಳಲ್ಲಿ ಭಾರತ ತಂಡಕ್ಕಾಗಿ ಎರಡನೇ ಅತಿ ವೇಗದ ಲಿಸ್ಟ್ ಎ ಶತಕವನ್ನು ಸಿಡಿಸಿದ್ದರು. ಆದಾಗ್ಯೂ, ಕೆಲವೇ ಗಂಟೆಗಳಲ್ಲಿ ಅವರು ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದರು. ಇದಲ್ಲದೆ, ವೈಭವ್ ಕೇವಲ 59 ಎಸೆತಗಳಲ್ಲಿ 150 ರನ್ ಗಳಿಸಿದರು, ಎಬಿ ಡಿವಿಲಿಯರ್ಸ್ ಅವರ 64 ಎಸೆತಗಳಲ್ಲಿ ಅತಿ ವೇಗದ 150 ರನ್ ಗಳಿಸುವ 10 ವರ್ಷಗಳ ದಾಖಲೆಯನ್ನು ಮುರಿದರು. ಈ ಶತಕದೊಂದಿಗೆ, ವೈಭವ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.