ನವದೆಹಲಿ: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಎಂಟು ವರ್ಷಗಳ ಬಳಿಕ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಮೂಲಕ ದೇಶಿ ಕ್ರಿಕೆಟ್‌ಗೆ ಮರಳಿದ್ದಾರೆ. ಅವರು ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ 62 ಎಸೆತಗಳಲ್ಲಿ ಸ್ಪೋಟಕ ಶತಕವನ್ನು ಬಾರಿಸಿದ್ದಾರೆ. ತಮ್ಮ ಸ್ಪೋಟಕ ಇನಿಂಗ್ಸ್‌ನಲ್ಲಿ ಮುಂಬೈ ಬ್ಯಾಟ್ಸ್‌ಮನ್ 8 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ ಶತಕವನ್ನು ಸಿಡಿಸಿದ್ದಾರೆ. ಇದು ಇವರ ಲಿಸ್ಟ್ ಎ ಕ್ರಿಕೆಟ್‌ನಲ್ಲಿನ 37ನೇ ಶತಕವಾಗಿದೆ. ಜೈಪುರದ ಸಾವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಅವರ ಶತಕದ ಬಲದಿಂದ ಸಿಕ್ಕಿಂ ನೀಡಿದ್ದ 237 ರನ್‌ಗಳನ್ನು ಮುಂಬೈ ಸುಲಭವಾಗಿ ಚೇಸ್ ಮಾಡಿದೆ.
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ಅತ್ಯಂತ ವೇಗದ ಶತಕ ಇದಾಗಿದೆ. ಇದಕ್ಕೂ ಮುನ್ನ 2023ರಲ್ಲಿ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ 63 ಎಸೆತಗಳಲ್ಲಿ ಸೆಂಚುರಿಯನ್ನು ಬಾರಿಸಿದ್ದರು. ರೋಹಿತ್ ಶರ್ಮಾ ಅವರ ಇನಿಂಗ್ಸ್ ಅನ್ನು ಜೈಪುರದಲ್ಲಿ 12000 ಕ್ಕೂ ಅಧಿಕ ಕ್ರಿಕೆಟ್ ಪ್ರೇಮಿಗಳು ಕಣ್ತುಂಬಿಸಿಕೊಂಡಿದ್ದರು. 2018ರ ಬಳಿಕ ರೋಹಿತ್ ಶರ್ಮಾ ಅವರ ಪಾಲಿಗೆ ಇದು ಮೊದಲನೇ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಪಂದ್ಯವಾಗಿದೆ. ಮೊದಲನೇ ಎಸೆತ ಬೌಲ್ ಮಾಡುವುದಕ್ಕೂ ಮುನ್ನ ಸಾವಿರಾರು ಮಂದಿ ಮೈದಾನದಲ್ಲಿ ರೋಹಿತ್, ರೋಹಿತ್ ಹಾಗೂ ಮುಂಬೈ ರಾಜ ಎಂಬ ಮಾತನ್ನು ಕೂಗುತ್ತಿದ್ದರು.
IND vs SA: ಅರ್ಧಶತಕ ಬಾರಿಸಿ ರೋಹಿತ್ ಶರ್ಮಾ ದಾಖಲೆ ಮುರಿದ ತಿಲಕ್ ವರ್ಮಾ!
ರೋಹಿತ್ ಶರ್ಮಾಗೆ ಬೌಲಿಂಗ್ ಕೊಡಿ ಎಂದು ಮತ್ತೊಂದು ಗುಂಪು ಆಗ್ರಹಿಸುತ್ತಿತ್ತು. ಆ ಮೂಲಕ ಟೀಮ್ ಇಂಡಿಯಾ ಮಾಜಿ ನಾಯಕನನ್ನು ನೋಡುವ ಮೂಲಕ ರಾಜಸ್ಥಾನ ಕ್ರಿಕೆಟ್ ಅಭಿಮಾನಿಗಳು ಹರ್ಷಭರಿತರಾದರು. ಅಂದ ಹಾಗೆ ಈ ಪಂದ್ಯವನ್ನು ವೀಕ್ಷಣೆಯು ಅಭಿಮಾನಿಗಳಿಗೆ ಉಚಿತ ಪ್ರವೇಶವನ್ನು ನೀಡಲಾಗಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳ ನಿರೀಕ್ಷೆಯನ್ನು ರೋಹಿತ್ ಶರ್ಮಾ ಹುಸಿಗೊಳಿಸಲಿಲ್ಲ. ಅವರು ತಾವು ಎದುರಿಸಿದ ಮೊದಲನೇ ಎಸೆತದಲ್ಲಿಯೇ ಮಿಡ್ ವಿಕೆಟ್ ಮೇಲೆ ಪುಲ್ ಶಾಟ್ ಮೂಲಕ ಬೌಂಡರಿ ಬಾರಿಸಿದ್ದರು. ಆ ಮೂಲಕ ಸಿಕ್ಕಿಂ ಬೌಲರ್‌ಗಳಿಗೆ ಭೀತಿ ಹುಟ್ಟಿಸಿದ್ದರು.
94 ಎಸೆತಗಳಲ್ಲಿ 155 ರನ್ ಸಿಡಿಸಿದ ಹಿಟ್‌ಮ್ಯಾನ್
ಸ್ಪೋಟಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ, 94 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 18 ಬೌಂಡರಿಗಳೊಂದಿಗೆ 155 ರನ್‌ಗಳನ್ನು ಸಿಡಿಸಿದರು. ಅಲ್ಲದೆ, ಅಂಗ್‌ಕೃಷ್ ರಘುವಂಶಿ ಅವರ ಜೊತೆ ಮೊದಲನೇ ವಿಕೆಟ್‌ಗೆ 141 ರನ್‌ಗಳ ಜೊತೆಯಾಟವನ್ನು ಆಡಿದ್ದ ಹಿಟ್‌ಮ್ಯಾನ್, ಬಳಿಕ ಮುಶೀರ್ ಖಾನ್ ಅವರ ಜೊತೆಗೆ 85 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಮುಂಬೈ ತಂಡದ 8 ವಿಕೆಟ್‌ಗಳ ಗೆಲುವಿನ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ದೀರ್ಘಾವಧಿ ಬಳಿಕ ರೋಹಿತ್ ಶರ್ಮಾ ದೇಶಿ ಕ್ರಿಕೆಟ್‌ನಲ್ಲಿ ಬ್ಯಾಟ್ ಮಾಡುತ್ತಿರುವ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಅಂತಿಮವಾಗಿ ಮುಂಬೈ ತಂಡ 237 ರನ್‌ಗಳ ಗುರಿಯನ್ನು 30.3 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ ಗೆದ್ದು ಬೀಗಿತು. ರೋಹಿತ್ ಶರ್ಮಾ ಜೊತೆಗೆ ಅಂಗ್‌ಕೃಷ್ ರಘುವಂಶಿ 38 ರನ್ ಗಳಿಸಿದ್ದರೆ, ಮುಶೀರ್ ಖಾನ್ ಅಜೇಯ 27 ರನ್‌ಗಳನ್ನು ಬಾರಿಸಿದ್ದರು. ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ ನಾಯಕ ಶಾರ್ದುಲ್ ಠಾಕೂರ್ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು.
ನ್ಯೂಜಿಲೆಂಡ್ ಏಕದಿನ ಸರಣಿ ಆಡಲಿರುವ ರೋಹಿತ್ ಶರ್ಮಾ
ಈ ಶತಕದ ಮೂಲಕ ರೋಹಿತ್ ಶರ್ಮಾ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ತಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯಲ್ಲಿ ಹಿಟ್‌ಮ್ಯಾನ್ ಮಿಂಚಿದ್ದರು. ಅವರು ಟೆಸ್ಟ್ ಹಾಗೂ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ನಿಮಿತ್ತ 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.