ನವದೆಹಲಿ: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಮೂವರು ಸ್ಪಿನ್ನರ್‌ಗಳನ್ನು ಮಾಜಿ ಟೆಸ್ಟ್ ಆರಂಭಿಕ ವಾಸೀಮ್ ಜಾಫರ್ (Wasim Jaffer) ಆಯ್ಕೆ ಮಾಡಿದ್ದು, ಸ್ಪಿನ್ ದಿಗ್ಗಜ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆಗೆ (Anil Kumble) ಅಗ್ರ ಸ್ಥಾನವನ್ನು ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿದ ವಿಡಿಯೊದಲ್ಲಿ ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಅತ್ಯುತ್ತಮ ಸ್ಪಿನ್ನರ್ ಯಾರು ಎಂಬ ಪ್ರಶ್ನೆಗೆ ಜಾಫರ್ ಉತ್ತರಿಸಿದ್ದಾರೆ. ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರೇ ತಾವು ಕಂಡ ಶ್ರೇಷ್ಠ ಮ್ಯಾಚ್ ವಿನ್ನರ್ ಎಂದು ಅವರು ಹೇಳಿದ್ದಾರೆ.
ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ದಿನಗಳನ್ನು ನೆನಪಿಸಿಕೊಂಡ ಜಾಫರ್, ಹರ್ಭಜನ್ ಸಿಂಗ್ ಮತ್ತು ನರೇಂದ್ರ ಹಿರ್ವಾನಿ ಅವರಂತಹ ದಿಗ್ಗಜ ಸ್ಪಿನ್ನರ್‌ಗಳ ಹೆಸರನ್ನೂ ಉಲ್ಲೇಖಿಸಿದರು. ಇದೇ ವೇಳೆ, ಹಾಲಿ ಭಾರತ ತಂಡದ ಸ್ಪಿನ್ ಬೌಲಿಂಗ್ ಕೋಚ್ ಸೈರಾಜ್ ಬಹುತುಲೆ ಹಾಗೂ ತಮ್ಮ ಮುಂಬೈ ತಂಡದ ಸಹ ಆಟಗಾರ ರಮೇಶ್ ಪವಾರ್ ಅವರ ಬಗ್ಗೆಯೂ ಜಾಫರ್ ಮಾತನಾಡಿದರು. ಅಲ್ಲದೆ, ವೈಟ್-ಬಾಲ್ ಕ್ರಿಕೆಟ್‌ನ ಬೆಳವಣಿಗೆಯಿಂದಾಗಿ ಸ್ಪಿನ್ ಬೌಲಿಂಗ್‌ನ ಕಲೆ ಕೂಡ ಬದಲಾಗಿದೆ ಎಂದು ವಾಸೀಮ್ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿಗೆ ಜಹೀರ್ ಖಾನ್ ಬಲವಾದ ಸಂದೇಶ!
"ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹರ್ಭಜನ್ ಸಿಂಗ್ ಅತ್ಯುತ್ತಮವಾಗಿದ್ದಾರೆ. ಅವರ ವಿರುದ್ಧ ನಾನು ಸಾಕಷ್ಟು ಬ್ಯಾಟಿಂಗ್ ನಡೆಸಿಲ್ಲ. ನರೇಂದ್ರ ಹಿರ್ವಾಣಿ ಮತ್ತೊಂದು ಹೆಸರು. ಸಾಯಿರಾಜ್ ಬಹುತುಲೆ ಕೂಡ ಅತ್ಯುತ್ತಮ ಸ್ಪಿನ್ನರ್, ರಮೇಶ್ ಪೊವಾರ್ ಕೂಡ ಉತ್ತಮವಾಗಿದ್ದಾರೆ. ತಮ್ಮ ವೃತ್ತಿ ಜೀವನದ ಅಂತ್ಯದಲ್ಲಿ ವಿದರ್ಭ ತಂಡದ ಪರ ಆಡುವಾಗ, ಅಕ್ಷಯ್ ವಾಖರೆ ಅತ್ಯುತ್ತಮ ಸ್ಪಿನ್ನರ್ ಆಗಿದ್ದರು. ಜಲಜ್ ಸೆಕ್ಸೇನಾ ಕೂಡ ಉತ್ತಮ ಸ್ಪಿನ್ನರ್. ನಾನು ಕ್ರಿಕೆಟ್ ಆಡುವ ಸಂದರ್ಭದಲ್ಲಿ ಹಲವು ಅತ್ಯುತ್ತಮ ಸ್ಪಿನ್ನರ್‌ಗಳಿದ್ದರು," ಎಂದಿದ್ದಾರೆ.
“ವೈಟ್-ಬಾಲ್ ಕ್ರಿಕೆಟ್‌ನಿಂದಾಗಿ ಈಗ ಸಾಕಷ್ಟು ಬದಲಾವಣೆಗಳಾಗಿವೆ. ಇಂದಿನ ಸ್ಪಿನ್ನರ್‌ಗಳು ಸ್ವಲ್ಪ ಮಟ್ಟಿಗೆ ರಕ್ಷಣಾತ್ಮಕ ಮನೋಭಾವ ಹೊಂದಿದ್ದಾರೆ ಎಂದು ನನಗೆ ಅನಿಸುತ್ತದೆ. ಆದರೆ ಹಿಂದಿನ ಕಾಲದ ಸ್ಪಿನ್ನರ್‌ಗಳು ವಿಕೆಟ್ ಪಡೆಯುವ ಉದ್ದೇಶದಿಂದ ಬೌಲ್ ಮಾಡುತ್ತಿದ್ದರು. ಈಗ ಅದೇ ರೀತಿಯಲ್ಲಿ ಬೌಲ ಮಾಡಲು ಸಾಧ್ಯವಿಲ್ಲ. ಬ್ಯಾಟರ್‌ಗಳು ಕೂಡ ನಿರ್ಭೀತರಾಗಿದ್ದಾರೆ. ಹೀಗಾಗಿ ಆಟವೂ ಬದಲಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು,” ಎಂದು ವಾಸೀಮ್ ಜಾಫರ್ ಹೇಳಿದ್ದಾರೆ.
ಜುರೆಲ್ or ಸರ್ಫರಾಝ್? ಭಾರತ ತಂಡದ 6ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಮೊಹಮ್ಮದ್ ಕೈಫ್!
ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಮೂವರು ಸ್ಪಿನ್ನರ್‌ಗಳನ್ನು ಆರಿಸಿದ ಜಾಫರ್
ಆರ್‌ಸಿಬಿ ಮಾಜಿ ಬ್ಯಾಟರ್ ಜಾಫರ್, ಅನಿಲ್ ಕುಂಬ್ಳೆ ಅವರನ್ನು ಉತ್ತಮ ನಾಯಕ ಹಾಗೂ ಕೋಚ್ ಎಂದೂ ಬಣ್ಣಿಸಿದ್ದಾರೆ. ಭಾರತದ ಸಾರ್ವಕಾಲಿಕ ಶ್ರೇಷ್ಠ ಮೂವರು ಸ್ಪಿನ್ನರ್‌ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಹರ್ಭಜನ್ ಸಿಂಗ್ ಅವರನ್ನೂ ಸೇರಿಸಿದ್ದಾರೆ. ಭಾರತ ತಂಡದ ಕೋಚ್ ಆಗಿ ಕುಂಬ್ಳೆ ಅವರ ಅಲ್ಪಾವಧಿಯ ಅಧಿಕಾರಾವಧಿಯ ಬಗ್ಗೆಯೂ ಜಾಫರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ಉತ್ತಮ ಕ್ರಿಕೆಟ್ ಆಡಿತ್ತು ಎಂದು ಹೇಳಿದ್ದಾರೆ.
“ನಾನು ನೋಡಿದವರ ಪೈಕಿ ಅನಿಲ್ ಕುಂಬ್ಳೆ ಅವರೇ ಅತ್ಯುತ್ತಮರು ಎಂದು ನಾನು ಭಾವಿಸುತ್ತೇನೆ. ಬಹುಶಃ ಅವರೇ ಶ್ರೇಷ್ಠ ಮ್ಯಾಚ್ ವಿನ್ನರ್. ನಂತರ ಅಶ್ವಿನ್ ಮತ್ತು ಹರ್ಭಜನ್. ಈ ಮೂವರು ನನಗೆ ವಿಶೇಷವಾಗಿ ಕಾಣುತ್ತಾರೆ,” ಎಂದು ಜಾಫರ್ ಹೇಳಿದ್ದಾರೆ.
“ಅನಿಲ್ ಉತ್ತಮ ನಾಯಕ ಕೂಡ ಆಗಿದ್ದರು. ಅವರ ನಾಯಕತ್ವದಲ್ಲಿ ಭಾರತ ಉತ್ತಮ ಕ್ರಿಕೆಟ್ ಆಡಿದೆ. ಕೋಚ್ ಆಗಿ ಅವರಿಗೆ ದೀರ್ಘಾವಧಿಯ ಅವಕಾಶ ಸಿಗಲಿಲ್ಲ. ಆದರೆ ಆ ಅವಧಿಯೂ ಉತ್ತಮವಾಗಿತ್ತು. ಎಲ್ಲರಿಗೂ ಎಲ್ಲವೂ ಸಿಗುವುದಿಲ್ಲ. ಆದರೆ ಅವರು ಶ್ರೇಷ್ಠ ಕ್ರಿಕೆಟಿಗ, ಅತ್ಯಂತ ಸಜ್ಜನ ವ್ಯಕ್ತಿ ಹಾಗೂ ಅದ್ಭುತ ಮಾನವೀಯ ಗುಣಗಳಿದ್ದ ವ್ಯಕ್ತಿಯಾಗಿದ್ದರು,” ಎಂದು ವಾಸೀಮ್ ಜಾಫರ್ ಗುಣಗಾನ ಮಾಡಿದ್ದಾರೆ.