ಜುರೆಲ್ or ಸರ್ಫರಾಝ್? ಭಾರತ ತಂಡದ 6ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಮೊಹಮ್ಮದ್ ಕೈಫ್!
ಆಗಸ್ಟ್ 15 ರಂದು ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆರಂಭವಾಗುವ ಮೊದಲನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಆರನೇ ಕ್ರಮಾಂಕದಲ್ಲಿ ಧುವ್ ಜುರೆಲ್ ಅವರ ಬದಲು ಸರ್ಫರಾಝ್ ಖಾನ್ ಅವರನ್ನು ಆರಿಸಬೇಕೆಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಸಲಹೆ ನೀಡಿದ್ದಾರೆ.
ಧ್ರುವ್ ಜುರೆಲ್ ಬದಲು ಸರ್ಫರಾಝ್‌ಗೆ ಚಾನ್ಸ್ ನೀಡಬೇಕೆಂದ ಕೈಫ್. -
ನವದೆಹಲಿ: ಭಾರತ ಹಾಗೂ ಶ್ರೀಲಂಕಾ (IND vs SL) ತಂಡಗಳ ನಡುವಣ ಮೊದಲನೇ ಟೆಸ್ಟ್ ಪಂದ್ಯ ಆಗಸ್ಟ್ 15 ರಂದು ಶನಿವಾರ ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತ ತಂಡ ಸಜ್ಜಾಗುತ್ತಿದೆ. ಗಾಯಾಳು ಸಾಯಿ ಸುದರ್ಶನ್ (Sai Sudarshan) ಅವರು ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದು, ಅವರ ಸ್ಥಾನಕ್ಕೆ ಸರ್ಫರಾಝ್ ಖಾನ್‌ಗೆ (Sarfaraz Khan) ಅವಕಾಶವನ್ನು ನೀಡಲಾಗಿದೆ. ಟೀಮ್ ಇಂಡಿಯಾದ ಆರನೇ ಕ್ರಮಾಂಕದಲ್ಲಿ ಧ್ರುವ್ ಜುರೆಲ್ ಅವರ ಬಲದು ಸರ್ಫರಾಝ್ ಖಾನ್‌ಗೆ ಚಾನ್ಸ್ ನೀಡಬೇಕೆಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಆಗ್ರಹಿಸಿದ್ದಾರೆ. ಏಕೆಂದರೆ ಸ್ಪಿನ್ ಕಂಡೀಷನ್ಸ್‌ನಲ್ಲಿ ಧ್ರುವ್ ಜುರೆಲ್‌ಗಿಂದ ಸರ್ಫರಾಝ್ ಖಾನ್ ಉತ್ತಮವಾಗಿ ಬ್ಯಾಟ್ ಮಾಡುತ್ತಾರೆಂಬುದು ಕೈಫ್ ಅವರ ಅಭಿಪ್ರಾಯವಾಗಿದೆ.
ಶ್ರೀಲಂಕಾದಲ್ಲಿನ ಸ್ಪಿನ್ ಸ್ನೇಹಿ ಕಂಡೀಷನ್ಸ್‌ನಲ್ಲಿ ಸರ್ಫರಾಝ್ ಖಾನ್ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸರ್ಫರಾಝ್ ಖಾನ್ ಉತ್ತಮವಾಗಿ ಬ್ಯಾಟ್ ಮಾಡಿದ್ದರು. ಆದರೆ, ಭಾರತ ತಂಡದ ಬ್ಯಾಟರ್‌ಗಳು ವಿಫಲರಾಗಿದ್ದಾರೆ. ಸ್ಪಿನ್ ಎದುರು ಅತ್ಯುತ್ತಮ ಬ್ಯಾಟಿಂಗ್ ಕೌಶಲವನ್ನು ಹೊಂದಿರುವ ಸರ್ಫರಾಝ್ ಅವರು ಶ್ರೀಲಂಕಾದಲ್ಲಿ ಸಿಂಹಳೀಯರ ಎದುರು ಪ್ರಾಬಲ್ಯ ಸಾಧಿಸಬಹುದು. ಆದರೆ, ಧ್ರುವ್ ಜುರೆಲ್ ಅವರು ಸ್ಪಿನ್ ಎದುರು ವಿಶೇಷವಾಗಿ ಆಫ್ ಸ್ಪಿನ್ನರ್ ಎದುರು ದೌರ್ಬಲ್ಯವನ್ನು ಹೊಂದಿದ್ದಾರೆ. ಹಾಗಾಗಿ ಟೀಮ್ ಇಂಡಿಯಾ ಮುಂಬೈ ಬ್ಯಾಟ್ಸ್‌ಮನ್‌ಗೆ ಆಡುವ 11ರಲ್ಲಿ ಅವಕಾಶ ನೀಡಬಹುದು.
18 ವರ್ಷ ಸೋಲದ ಭಾರತಕ್ಕೆ ಈ ಬಾರಿ ಲಂಕಾದಲ್ಲಿ ಅಗ್ನಿಪರೀಕ್ಷೆ!
ತಂಡದಲ್ಲಿ ಈಗಾಗಲೇ ಆಡುತ್ತಿರುವ ಆಟಗಾರರಿಗೆ ಬೆಂಬಲ ನೀಡುವ ಪ್ರವೃತ್ತಿಯನ್ನು ಮುಂದುವರಿಸಿದರೆ, ಭಾರತ ತಂಡದ ಆಡಳಿತವು ಧ್ರುವ್ ಜುರೆಲ್ ಅವರನ್ನೇ ಮುಂದುವರಿಸಬಹುದು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದಾರೆ.
“ಅವರು ಈಗಾಗಲೇ ತಂಡದ ಭಾಗವಾಗಿರುವ ಆಟಗಾರರಿಗೆ ಬೆಂಬಲ ನೀಡುವ ನೀತಿಯನ್ನು ಅನುಸರಿಸಿದರೆ, ‘ಜುರೆಲ್ ಈಗಾಗಲೇ ನಮ್ಮೊಂದಿಗಿದ್ದಾರೆ. ಅವರು ನಿರಂತರವಾಗಿ ರನ್ ಗಳಿಸಿಲ್ಲ, ಆದರೆ ಅವರು ತಂಡದ ಭಾಗವಾಗಿರುವುದರಿಂದ ನಾವು ಅವರಿಗೆ ಬೆಂಬಲ ನೀಡುತ್ತೇವೆ’ ಎಂದು ಹೇಳಬಹುದು,” ಎಂದು ಮೊಹಮ್ಮದ್ ಕೈಫ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
“ಅಂತಹದ್ದೇ ನಿಲುವು ಮುಂದುವರಿದರೆ ಸರ್ಫರಾಝ್ ಖಾನ್ ಇನ್ನಷ್ಟು ಕಾಯಬೇಕಾಗುತ್ತದೆ. ಆದರೆ ನನ್ನ ದೃಷ್ಟಿಯಲ್ಲಿ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವುದಾದರೆ, ಸರ್ಫರಾಖ್ ಖಾನ್ ನನ್ನ ತಂಡದಲ್ಲಿ ಖಂಡಿತವಾಗಿಯೂ ಇರುತ್ತಾರೆ. 5 ಅಥವಾ 6ನೇ ಕ್ರಮಾಂಕದಲ್ಲಿ ಸ್ಪಿನ್ ಬೌಲಿಂಗ್ ಅನ್ನು ಅತ್ಯುತ್ತಮವಾಗಿ ಎದುರಿಸುವ ಸಾಮರ್ಥ್ಯ ಅವರಿಗಿದೆ. ಸ್ಪಿನ್ ವಿರುದ್ಧ ಅವರ ದಾಖಲೆ ಅತ್ಯುತ್ತಮವಾಗಿದೆ. ಅಲ್ಲದೆ, ಅವರ ಬಳಿ ವೈವಿಧ್ಯಮಯ ಶಾಟ್‌ಗಳಿವೆ,” ಎಂದು ಕೈಫ್ ತಿಳಿಸಿದ್ದಾರೆ.
“ಟೆಸ್ಟ್ ಪಂದ್ಯದ ನಾಲ್ಕನೇ ಅಥವಾ ಐದನೇ ದಿನ ಬ್ಯಾಟಿಂಗ್ ನಡೆಸುವುದು ಹೆಚ್ಚು ಕಷ್ಟಕರವಾಗುತ್ತದೆ. ಅಂತಹ ಸಂದರ್ಭದಲ್ಲಿ ಸರ್ಫರಾಝ್ ಖಾನ್ ಅವರಂತಹ ಆಟಗಾರ ತಂಡಕ್ಕೆ ಬಹಳ ಉಪಯುಕ್ತರಾಗಬಹುದು,” ಎಂದು ಅವರು ಹೇಳಿದ್ದಾರೆ.
IND vs SL 1st Test: ಸರ್ಫರಾಝ್ ಖಾನ್ ಇನ್? ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಸುಮಾರು ಎರಡು ವರ್ಷಗಳಿಂದ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದ ಸರ್ಫರಾಝ್ ಖಾನ್‌ಗೆ ಇದೀಗ ಅವಕಾಶ ಒಲಿದುಬಂದಿದೆ. ಸಾಯಿ ಸುದರ್ಶನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡಕ್ಕೆ ಸೇರಿಸಲಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15ರಿಂದ ಆರಂಭವಾಗಲಿದೆ.
ಭಾರತ ಟೆಸ್ಟ್ ತಂಡ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ (ನಾಯಕ), ದೇವದತ್ ಪಡಿಕ್ಕಲ್, ಕೆ.ಎಲ್. ರಾಹುಲ್ (ಉಪ ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಮಾನವ್ ಸುತಾರ್, ಸಾರಾಂಶ್ ಜೈನ್, ಕುಲ್ದೀಪ್ ಯಾದವ್,ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಆಕಿಬ್ ನಬಿ, ಗುರ್ನೂರ್ ಬ್ರಾರ್, ಹರ್ಷ್ ದುಬೆ, ವಿಪ್ರಜ್ ನಿಗಮ್