ನವದೆಹಲಿ: ಭಾರತದ ಯುವ ಬ್ಯಾಟರ್ ಸರ್ಫರಾಝ್ ಖಾನ್ (Sarfaraz Khan) ಅವರನ್ನು ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ (IND vs NZ) ಆಯ್ಕೆ ಮಾಡದಿರುವ ಬಗ್ಗೆ ಮಾಜಿ ಆರಂಭಿಕ ಆಟಗಾರ ವಾಸೀಮ್ ಜಾಫರ್ (Wasim Jaffer) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶಿ ಕ್ರಿಕೆಟ್ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಸರ್ಫರಾಜ್ ಅವರನ್ನು ಮತ್ತೆ ಮತ್ತೆ ಕಡೆಗಣಿಸುತ್ತಿರುವುದರ ಹಿಂದೆ ಕ್ರಿಕೆಟ್ ಹೊರತಾದ ಕಾರಣಗಳಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
29ರ ವಯಸ್ಸಿನ ಸರ್ಫರಾಝ್ ಖಾನ್ ಭಾರತ ಪರ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 37.10ರ ಸರಾಸರಿಯಲ್ಲಿ 371 ರನ್ ಗಳಿಸಿದ್ದಾರೆ. ಅವರು ಕೊನೆಯ ಟೆಸ್ಟ್ ಪಂದ್ಯ 2024ರ ನವೆಂಬರ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಆ ಸರಣಿಯ ಮೊದಲ ಪಂದ್ಯದಲ್ಲಿ ಅವರು ಅಮೋಘ 150 ರನ್ಗಳ ಇನಿಂಗ್ಸ್ ಆಡಿದ್ದರು. ಆದರೆ, ನಂತರದ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ.
15 ಬಾಲ್ಗಳಲ್ಲಿ 42 ರನ್ ಸಿಡಿಸಿ ಇರ್ಫಾನ್ ಪಠಾಣ್ ದಾಖಲೆಯನ್ನು ಮುರಿದ ನಮನ್ ಧೀರ್!
ಸರ್ಫರಾಜ್ ಆಯ್ಕೆಯ ಬಗ್ಗೆ ವಾಸೀಮ್ ಜಾಫರ್ ಹೇಳಿದ್ದೇನು?
ಸರ್ಫರಾಝ್ ಖಾನ್ ಅವರ ನಿರಂತರ ನಿರ್ಲಕ್ಷ್ಯದ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ವಾಸೀಮ್ ಜಾಫರ್, ಆಯ್ಕೆದಾರರ ನಿರ್ಧಾರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
“ಇದರ ಹಿಂದೆ ಖಂಡಿತವಾಗಿಯೂ ಏನೋ ಇದೆ ಎಂದು ನನಗನಿಸುತ್ತದೆ. ಅವರನ್ನು ಆಯ್ಕೆ ಮಾಡಲು ಅವರಿಗೆ ಇಷ್ಟವಿಲ್ಲ ಎಂದು ಭಾಸವಾಗುತ್ತದೆ. ಇಲ್ಲದಿದ್ದರೆ, ಅವರ ಪ್ರದರ್ಶನ ನಮ್ಮ ಕಣ್ಣ ಮುಂದೆಯೇ ಇದೆ. ಇಷ್ಟು ಕಡಿಮೆ ಅವಧಿಯ ವೃತ್ತಿಜೀವನದಲ್ಲೇ ಅವರು 18 ಪ್ರಥಮ ದರ್ಜೆ ಶತಕಗಳನ್ನು ಗಳಿಸಿದ್ದಾರೆ. ಅವರನ್ನು ಏಕೆ ಆಯ್ಕೆ ಮಾಡುತ್ತಿಲ್ಲ ಎಂಬುದು ನನಗೆ ತಿಳಿದಿಲ್ಲ. ಆದರೆ, ಇದು ಕೇವಲ ಪ್ರದರ್ಶನ ಅಥವಾ ಕ್ರಿಕೆಟ್ಗೆ ಸಂಬಂಧಿಸಿದ ಕಾರಣಗಳನ್ನು ಮೀರಿದ ಸಂಗತಿ ಎಂದು ಅನಿಸುತ್ತದೆ. ಅವರು ಎಷ್ಟು ರನ್ ಗಳಿಸಿದರೂ, ಅವರ ಸರಾಸರಿ ಎಷ್ಟೇ ಇದ್ದರೂ ಸರ್ಫರಾಝ್ ಅವರನ್ನು ಆಯ್ಕೆ ಮಾಡಲು ಇಷ್ಟಪಡುತ್ತಿಲ್ಲ ಎಂಬ ಭಾವನೆ ನನಗಿದೆ. ಇದನ್ನು ಹೊರತುಪಡಿಸಿ ಬೇರೆ ಕಾರಣವಿರಲು ಸಾಧ್ಯವಿಲ್ಲ,” ಎಂದು ಜಾಫರ್ ದೂರಿದ್ದಾರೆ.
IND vs NZ: ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ, ಮೊಹಮ್ಮದ್ ಶಮಿಗೆ ಸ್ಥಾನವಿಲ್ಲ!
ದೇಶಿ ಕ್ರಿಕೆಟ್ನಲ್ಲಿ ಸರ್ಫರಾಝ್ ಖಾನ್ ದಾಖಲೆ ಹೇಗಿದೆ?
ದೇಶಿ ಕ್ರಿಕೆಟ್ನಲ್ಲಿ ಸರ್ಫರಾಝ್ ಖಾನ್ ಅವರ ಅಂಕಿಅಂಶಗಳು ಗಮನಾರ್ಹವಾಗಿವೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆಡಿರುವ 65 ಪಂದ್ಯಗಳಿಂದ ಅವರು 5,314 ರನ್ ಗಳಿಸಿದ್ದು, 64.02ರ ಅತ್ಯುತ್ತಮ ಸರಾಸರಿ ಹೊಂದಿದ್ದಾರೆ. ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಅಜೇಯ 301 ರನ್ಗಳು. 2026-27ರ ರಣಜಿ ಟ್ರೋಫಿ ಋತುವಿನಲ್ಲೂ ಸರ್ಫರಾಝ್ ಈಗಾಗಲೇ 154 ರನ್ ಗಳಿಸಿದ್ದಾರೆ. ರಾಷ್ಟ್ರೀಯ ತಂಡದಿಂದ ಮತ್ತೆ ಮತ್ತೆ ಹೊರಗುಳಿಯುತ್ತಿದ್ದರೂ ದೇಶಿ ಕ್ರಿಕೆಟ್ನಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ.
IND vs NZ: ಬೆಂಚ್ ಕಾಯುತ್ತಿರುವ ವೈಭವ್ ಸೂರ್ಯವಂಶಿಗೆ ದಿನೇಶ್ ಕಾರ್ತಿಕ್ ಸಂದೇಶ!
ಶ್ರೀಲಂಕಾ ಸರಣಿಯಲ್ಲೂ ಅವಕಾಶ ಸಿಕ್ಕಿರಲಿಲ್ಲ
ಆಗಸ್ಟ್ನಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಎರಡು ಪಂದ್ಯಗಳ ವಿದೇಶಿ ಟೆಸ್ಟ್ ಸರಣಿಗೆ ಸಾಯಿ ಸುದರ್ಶನ್ ಗಾಯಗೊಂಡ ಹಿನ್ನೆಲೆಯಲ್ಲಿ ಸರ್ಫರಾಜ್ ಖಾನ್ ಅವರನ್ನು ಬದಲಿ ಆಟಗಾರನಾಗಿ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ, ಆ ಸರಣಿಯ ಎರಡೂ ಪಂದ್ಯಗಳಲ್ಲಿ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ದೊರೆಯಲಿಲ್ಲ.
ಇದೀಗ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಅವರನ್ನು ಆಯ್ಕೆ ಮಾಡದಿರುವುದು ಚರ್ಚೆಗೆ ಕಾರಣವಾಗಿದೆ. ದೇಶಿ ಕ್ರಿಕೆಟ್ನಲ್ಲಿ ಉತ್ತಮ ದಾಖಲೆ ಹೊಂದಿರುವ ಹಾಗೂ ಈಗಾಗಲೇ ಭಾರತ ಪರ ಟೆಸ್ಟ್ ಪಂದ್ಯಗಳನ್ನಾಡಿರುವ ಆಟಗಾರನಿಗೆ ಮತ್ತೊಮ್ಮೆ ಅವಕಾಶ ನಿರಾಕರಿಸಿರುವುದರ ಬಗ್ಗೆ ಪ್ರಶ್ನೆಗಳು ಎದ್ದಿವೆ.