ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಏಕದಿನ ಪಂದ್ಯದಲ್ಲಿ(IND vs AFG) ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸುತ್ತಿವೆ. ಯುವ ಆಟಗಾರರಾದ ಹರ್ಷ್ ದುಬೇ (Harsh Dubey) ಹಾಗೂ ಗುರ್ನೂರ್ ಬ್ರಾರ್ (Gurnoor Brar) ಅವರು ಭಾರತದ ಪ್ಲೇಯಿಂಗ್ XIನಲ್ಲಿ ಚೊಚ್ಚಲ ಅವಕಾಶ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಇನ್ನು ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು, ಹಾಗಾಗಿ ಪಂದ್ಯದ ಓವರ್‌ಗಳನ್ನು 25 ಕ್ಕೆ ಇಳಿಸಲಾಯಿತು.
ಇಲ್ಲಿಯವರೆಗೂ ಭಾರತ ತಂಡದ ಯಾವುದೇ ಸ್ವರೂಪದಲ್ಲಿ ಹರ್ಷ್ ದುಬೇ ಆಡಿರಲಿಲ್ಲ. ಇದೀಗ ಅವರನ್ನು ಟೆಸ್ಟ್ ಹಾಗೂ ಒಡಿಐ ಎರಡೂ ತಂಡಗಳಲ್ಲಿ ಅವಕಾಶವನ್ನು ನೀಡಲಾಗಿದೆ. ಅಂದ ಹಾಗೆ ಟೆಸ್ಟ್ ಪಂದ್ಯದಲ್ಲಿ ಹರ್ಷ್ ದುಬೇ ಅವರನ್ನು ಹಿಂದಿಕ್ಕಿ ಮಾನವ್ ಸುತಾರ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ 7 ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಆಫ್ಘನ್ ಎದುರಿನ ಏಕದಿನ ಸರಣಿಯ ಭಾರತ ತಂಡದಲ್ಲಿ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್‌ಗೆ ವಿಶ್ರಾಂತಿಯನ್ನು ನೀಡಲಾಗಿದೆ. ಹಾಗಾಗಿ ಆಲ್‌ರೌಂಡರ್ ಹರ್ಷ್ ದುಬೇಗೆ ಭಾರತ ಏಕದಿನ ತಂಡದಲ್ಲಿ ಅವಕಾಶ ಸಿಕ್ಕಿದೆ. ಅಂದ ಹಾಗೆ ಹರ್ಷ ದುಬೇ ಬಗ್ಗೆ ಇಲ್ಲಿ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ.
IND vs AFG: ವಿರಾಟ್ ಕೊಹ್ಲಿ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಆಕಾಶ್ ಚೋಪ್ರಾ!
ಭಾರತದ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹರ್ಷ್ ದುಬೇ ಯಾರು?
ಹರ್ಷ್ ದುಬೇ ಅವರು ಮೂಲತಃ ವಿದರ್ಭ ರಾಜ್ಯದವರು ಹಾಗೂ 2024-25ರಸಾಲಿನಲ್ಲಿ ರಣಜಿ ಟ್ರೋಫಿ ಗೆದ್ದ ರಾಜ್ಯ ತಂಡದಲ್ಲಿದ್ದರು. ಇವರು ಆ ಸೀಸನ್‌ನಲ್ಲಿ ಆಡಿ 10 ಪಂದ್ಯಗಳಿಂದ 69 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸುವ ಮೂಲಕ 92 ವರ್ಷಗಳ ದಾಖಲೆಯನ್ನು ಮುರಿದಿದ್ದರು.
2022ರ ಡಿಸೆಂಬರ್ ತಿಂಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದಕ್ಕೂ ಮುನ್ನ ಹರ್ಷ್ ದುಬೇ ಅವರು ವಿದರ್ಭ ತಂಡದ ಪರ ಲಿಸ್ಟ್ ಎ ಹಾಗೂ ದೇಶಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಒಟ್ಟಾರೆ ಅವರು 27 ಪ್ರಥಮ ದರ್ಜೆ ಪಂದ್ಯಗಳಿಂದ 133 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 50 ಓವರ್‌ಗಳ ಸ್ವರೂಪದ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಆಡಿದ 30 ಪಂದ್ಯಗಳಿಂದ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು 38 ಟಿ20 ಪಂದ್ಯಗಳಿಂದ 34 ವಿಕೆಟ್‌ಗಳನ್ನು ಕಿತ್ತಿದ್ದಾರೆ.
ಬೌಲಿಂಗ್ ಜತೆಗೆ ಅವರು ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಕೊಡುಗೆಯನ್ನು ನೀಡಬಲ್ಲರು. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 26.65ರ ಸರಾಸರಿಯಲ್ಲಿ 8 ಅರ್ಧಶತಕಗಳ ಮೂಲಕ 1096 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 26.90ರ ಸರಾಸರಿಯಲ್ಲಿ 296 ರನ್‌ಗಳನ್ನು ಪೇರಿಸಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಆಡುದ್ದ ದುಬೇ
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗಾಯಗೊಂಡಿದ್ದ ರವಿಚಂದ್ರನ್ ಸ್ಮರಣ್ ಅವರ ಸ್ಥಾನಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದರು. ಅವರು 30 ಲಕ್ಷ ರು ಮೂಲ ಬೆಲೆಗೆ ಎಸ್‌ಆರ್‌ಎಚ್ ತಂಡವನ್ನು ಸೇರಿದ್ದರು. ಕಳೆದ ವರ್ಷ ಇವರು ಕೇವಲ ಮೂರು ಪಂದ್ಯಗಳನ್ನು ಆಡಿದ್ದರು. ಆದರೆ, 2026ರ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಿಂದ 8 ವಿಕೆಟ್‌ಗಳನ್ನು ಕಬಳಿಸಿದ್ದರು.
ಸಚಿನ್-ಗಂಗೂಲಿ ಜೋಡಿ ಅಲ್ಲ; ಭಾರತ ತಂಡಕ್ಕೆ ಬೆಸ್ಟ್ ಓಪನರ್ಸ್ ಹೆಸರಿಸಿದ ಆಕಾಶ್ ಚೋಪ್ರಾ!
ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬಳಿಕ ಹರ್ಷ್ ದುಬೇ ಅವರು ಭಾರತ ಎ ತಂಡದ ಪರ ನಿಯಮಿತವಾಗಿ ಆಡುತ್ತಿದ್ದಾರೆ. ಇದೀಗ ಅವರಿಗೆ ಏಕದಿನ ತಂಡದಲ್ಲಿ ಅವಕಾಶವನ್ನು ನೀಡಲಾಗಿದೆ.
ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ xi: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೇ, ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್, ಪ್ರಸಿಧ್ ಕೃಷ್ಣ