ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಸೈಯದ್ ಅಬಿದ್ ಅಲಿ ವಿಧಿವಶ!
Syed Abid Ali died aged 83: ಭಾರತದ ಮಾಜಿ ಕ್ರಿಕೆಟಿಗ ಸೈಯದ್ ಅಬಿದ್ ಅಲಿ (83) ನಿಧನರಾಗಿದ್ದಾರೆ. ಡಿಸೆಂಬರ್ 1967 ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬಿದ್ ಅಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಭಾರತ ತಂಡದ ಪರ ಅವರು 29 ಟೆಸ್ಟ್ ಪಂದ್ಯಗಳು ಹಾಗೂ ಐದು ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಮಾಜಿ ಕ್ರಿಕೆಟಿಗ ಸೈಯದ್ ಅಬಿದ್ ಅಲಿ ವಿಧಿವಶ.

ನವದೆಹಲಿ: ಬಹುಮುಖ ಪ್ರತಿಭೆ ಮತ್ತು ಅತ್ಯುತ್ತಮ ಫೀಲ್ಡರ್ ಎಂದು ಹೆಸರುವಾಸಿಯಾಗಿದ್ದ ಭಾರತದ ಮಾಜಿ ಆಲ್‌ರೌಂಡರ್ ಸೈಯದ್ ಅಬಿದ್ ಅಲಿ ದೀರ್ಘಕಾಲದ ಅನಾರೋಗ್ಯದ ಕಾರಣ ಬುಧವಾರ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಅಬಿದ್ ಅಲಿ ಹೈದರಾಬಾದ್‌ನ ಪ್ರಸಿದ್ಧ ಕ್ರಿಕೆಟಿಗರಾದ ಎಂಎಕೆ ಪಟೌಡಿ, ಎಂ.ಎಲ್. ಜೈಸಿಂಹ ಮತ್ತು ಅಬ್ಬಾಸ್ ಅಲಿ ಬೇಗ್ ಅವರ ಗುಂಪಿಗೆ ಅಬಿದ್ ಅಲಿ ಕೂಡ ಸೇರ್ಪಡೆಯಾಗುತ್ತಾರೆ. ಅವರು ಅಮೆರಿಕದಲ್ಲಿ ನಿಧನರಾಗಿದ್ದಾರೆ. ಅಬಿದ್ ಅಲಿಯವರ ನಿಧನದ ಸುದ್ದಿಯನ್ನು ನಾರ್ತ್ ಅಮೇರಿಕನ್ ಕ್ರಿಕೆಟ್ ಲೀಗ್ (NACL) ಹಂಚಿಕೊಂಡಿದೆ.
"ಭಾರತೀಯ ಕ್ರಿಕೆಟ್ ದಂತಕಥೆ, ಟ್ರೇಸಿ, ಕ್ಯಾಲಿಫೋರ್ನಿಯಾವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡ ಮತ್ತು ಅವರ ಗಮನಾರ್ಹ ಪರಂಪರೆಯು ಶ್ರೇಷ್ಠತೆಗಾಗಿ ಶ್ರಮಿಸಲು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುವ ಚಾಚಾ ಸೈಯದ್ ಅಬಿದ್ ಅಲಿ ಅವರ ನಿಧನದ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತೀವ್ರ ಸಂತಾಪವಿದೆ," ಎಂದು ನಾರ್ಥ್ ಅಮೆರಿಕನ್ ಕ್ರಿಕೆಟ್ ಲೀಗ್ ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದೆ.
"ಬೇ ಏರಿಯಾದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಅವರ ಅವಿಶ್ರಾಂತ ಪ್ರಯತ್ನಗಳು ಮತ್ತು ಕೊಡುಗೆಗಾಗಿ ಉತ್ತರ ಅಮೆರಿಕನ್ ಕ್ರಿಕೆಟ್ ಲೀಗ್ ಮತ್ತು ಉತ್ತರ ಕ್ಯಾಲಿಫೋರ್ನಿಯಾ ಕ್ರಿಕೆಟ್ ಅಸೋಸಿಯೇಷನ್ (NCCA) ಕೃತಜ್ಞರಾಗಿರಬೇಕು, ಇದು ಅವರ ಶಾಶ್ವತ ಪ್ರಭಾವಕ್ಕೆ ಸಾಕ್ಷಿಯಾಗಿದೆ. ನಮ್ಮ ಪ್ರಾರ್ಥನೆಗಳಲ್ಲಿ ಅವರನ್ನು ನೆನಪಿಸಿಕೊಳ್ಳೋಣ ಮತ್ತು ಅವರ ಗಮನಾರ್ಹ ಪರಂಪರೆಯನ್ನು ಆಚರಿಸೋಣ,"ಎಂದು ತಿಳಿಸಿದೆ.
IND vs NZ: ನ್ಯೂಜಿಲೆಂಡ್‌ಗೆ ಮಣ್ಣು ಮುಕ್ಕಿಸಿ ಮೂರನೇ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ!
1967ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ
1967ರ ಡಿಸೆಂಬರ್‌ನಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬಿದ್ ಅಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಮತ್ತು ಪ್ರಥಮ ಇನಿಂಗ್ಸ್‌ನಲ್ಲಿ 55ಕ್ಕೆ ತಮ್ಮ ವೃತ್ತಿಜೀವನದ ಅತ್ಯುತ್ತಮ 6 ವಿಕೆಟ್ ಪಡೆದರು. ಅದೇ ಸರಣಿಯಲ್ಲಿ ಅವರು ಸಿಡ್ನಿ ಟೆಸ್ಟ್‌ನಲ್ಲಿ 78 ಮತ್ತು 81 ರನ್‌ಗಳನ್ನು ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.
1967 ರಿಂದ 1974 ರವರೆಗೆ ಭಾರತ ಪರ 29 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಬಿದ್ ಅಲಿ, 1018 ರನ್ ಗಳಿಸಿ 47 ವಿಕೆಟ್ ಪಡೆದಿದ್ದಾರೆ. ಅವರು ವಿಕೆಟ್‌ಗಳ ನಡುವೆ ವೇಗವಾಗಿ ಓಡುವುದಕ್ಕೆ ಹೆಸರುವಾಸಿಯಾಗಿದ್ದರು ಮತ್ತು ಅವರ ಕಾಲದ ಅತ್ಯುತ್ತಮ ಕ್ಷೇತ್ರರಕ್ಷಣೆಗಾರರಲ್ಲಿ ಒಬ್ಬರಾಗಿದ್ದರು.
My first cricket hero. Rejoiced as a child when he had a great debut against Australia, was overjoyed when he scored the winning runs against England in 1971. Great trier, big hearted man. Khudahafiz Abid Chicha. #SyedAbidAli pic.twitter.com/OWICAGWCGr
— Harsha Bhogle (@bhogleharsha) March 12, 2025
ಸಾಕಷ್ಟು ಮ್ಯಾಚ್ ವಿನ್ನಿಂಗ್ ಪಂದ್ಯಗಳನ್ನು ಆಡಿರುವ ಅಬಿದ್
ಅಬಿದ್ ಅಲಿ ಕೂಡ ಅಪರೂಪದ ಸಾಧನೆ ಮಾಡಿದ್ದರು. ಅವರು ಹಲವು ಪಂದ್ಯಗಳಲ್ಲಿ ಭಾರತ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಗಮನವನ್ನು ಸೆಳೆದಿದ್ದಾರೆ. ಅವರು 1968 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು ಬಾರಿ, 1969 ರಲ್ಲಿ ಮೂರು ಬಾರಿ ತವರಿನಲ್ಲಿ ಮತ್ತು 1971 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಎರಡು ಬಾರಿ ಆಲ್‌ರೌಂಡರ್ ಪ್ರದರ್ಶನವನ್ನು ತೋರಿದ್ದರು.
1974 ರಲ್ಲಿ ಹೆಡಿಂಗ್ಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಿದ ಅಜಿತ್ ವಾಡೇಕರ್ ನೇತೃತ್ವದ ಭಾರತೀಯ ತಂಡದ ಭಾಗವಾಗಿದ್ದರು ಅಬಿದ್ ಅಲಿ. ಅದು 55 ಓವರ್‌ಗಳ ಪಂದ್ಯವಾಗಿದ್ದು, ಭಾರತ ಸೋತಿತ್ತು. 1975 ರಲ್ಲಿ ನಡೆದ ಮೊದಲ ಏಕದಿನ ವಿಶ್ವಕಪ್‌ನಲ್ಲಿ ಅಬಿದ್ ಅಲಿ ಭಾರತೀಯ ತಂಡದ ಭಾಗವಾಗಿದ್ದರು ಮತ್ತು ಮೂರು ಪಂದ್ಯಗಳನ್ನು ಆಡಿದ್ದರು. ಏಕದಿನ ಮಾದರಿಯಲ್ಲಿ ಅವರ ಅತ್ಯುತ್ತಮ ಪ್ರದರ್ಶನವೆಂದರೆ ನ್ಯೂಜಿಲೆಂಡ್ ವಿರುದ್ಧ 98 ಎಸೆತಗಳಲ್ಲಿ 70 ರನ್ ಗಳಿಸಿರುವುದು.
Deeply saddened to hear about the passing of Syed Abid Ali Saheb. His contributions to the game and his unwavering passion for cricket will always be remembered.#SyedAbidAli pic.twitter.com/ca6QmMhhVH
— Mohammed Azharuddin (@azharflicks) March 12, 2025
ದೇಶಿ ಕ್ರಿಕೆಟ್ ದಾಖಲೆ
ಐದು ಏಕದಿನ ಪಂದ್ಯಗಳಲ್ಲಿ ಅಬಿದ್ ಅಲಿ 93 ರನ್ ಗಳಿಸಿ ಏಳು ವಿಕೆಟ್ ಕಬಳಿಸಿದ್ದರು. ದೇಶಿ ಕ್ರಿಕೆಟ್‌ನಲ್ಲಿ ಅವರು 212 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 8732 ರನ್‌ಗಳನ್ನು ಗಳಿಸಿದ್ದಾರೆ ಮತ್ತು ಅಜೇಯ 173 ರನ್ ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಅವರು 23 ರನ್‌ಗಳಿಗೆ 6 ವಿಕೆಟ್‌ಗಳ ಅತ್ಯುತ್ತಮ ಪ್ರದರ್ಶನದೊಂದಿಗೆ 397 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.