ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈಭವ್‌ ಸೂರ್ಯವಂಶಿಗೆ 14 ವರ್ಷ ವಯಸ್ಸಾಗಿದ್ದರೂ ಇನ್ನೊಂದು U-19 ವಿಶ್ವಕಪ್‌ ಆಡಲು ಅವಕಾಶವಿಲ್ಲವೇಕೆ?

ಭಾರತ ಕಿರಿಯರ ತಂಡ 2026ರ ಅಂಡರ್‌-19 ವಿಶ್ವಕಪ್‌ ಗೆಲುವಿನಲ್ಲಿ 14ರ ವಯಸ್ಸಿನ ವೈಭವ್‌ ಸೂರ್ಯವಂಶಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅವರು ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಫೈನಲ್‌ನಲ್ಲಿ ಅವರು 175 ರನ್‌ಗಳನ್ನು ಬಾರಿಸಿದ್ದರು.

ವೈಭವ್‌ ಸೂರ್ಯವಂಶಿ ಮತ್ತೊಂದು ಅಂಡರ್‌-19 ವಿಶ್ವಕಪ್‌ ಆಡಬಹುದಾ?

ನವದೆಹಲಿ: ವೈಭವ್ ಸೂರ್ಯವಂಶಿ ಅವರ ಅದ್ಭುತ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ಭಾರತ ಅಂಡರ್-19 ತಂಡವು ಶುಕ್ರವಾರ (ಫೆಬ್ರವರಿ 6) ಆರನೇ ಬಾರಿ ಜೂನಿಯರ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಆಯುಷ್ ಮ್ಹಾತ್ರೆ ನಾಯಕತ್ವದ ತಂಡ, ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಸೋಲಿಸಿ ಕಿರೀಟ ಮುಡಿಗೇರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ, ಕೇವಲ 80 ಎಸೆತಗಳಲ್ಲಿ 175 ರನ್‌ಗಳ ಅಬ್ಬರದ ಇನಿಂಗ್ಸ್ ಆಡಿದರು ಹಾಗೂ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು. ಅವರು 218.75 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ 15 ಸಿಕ್ಸರ್‌ಗಳು ಹಾಗೂ 15 ಬೌಂಡರಿಗಳೊಂದಿಗೆ ಭಾರತ ತಂಡವನ್ನು 411/9 ಭಾರೀ ಮೊತ್ತಕ್ಕೆ ಕೊಂಡೊಯ್ದರು. ವೈಭವ್‌ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಅವರು ಮೊದಲನೇ ವಿಕೆಟ್‌ಗೆ 142 ರನ್‌ಗಳ ಮಹತ್ವದ ಜೊತೆಯಾಟವಾಡಿದರು. ಆಯುಷ್ ಮ್ಹಾತ್ರೆ 51 ಎಸೆತಗಳಲ್ಲಿ 53 ರನ್‌ಗಳ ಉಪಯುಕ್ತ ಇನಿಂಗ್ಸ್ ಆಡಿದರು.

ಕಾನಿಷ್ಕ್‌ ಚೌವ್ಹಾಣ್‌ 20 ಎಸೆತಗಳಲ್ಲಿ ಅಜೇಯ 37 ರನ್‌ ಹಾಗೂ ಅಭಿಜ್ಞಾನ ಕುಂಡು 31 ಎಸೆತಗಳಲ್ಲಿ 40 ರನ್‌ಗಳನ್ನು ಕಲೆ ಹಾಕಿ ತಂಡದ ಮೊತ್ತಕ್ಕೆ ಪರಿಪೂರ್ಣ ಅಂತ್ಯ ನೀಡಿದರು. ಬೌಲಿಂಗ್‌ನಲ್ಲೂ ಕಾನಿಷ್ಕ್‌ ತಮ್ಮ ಕೊಡುಗೆ ನೀಡಿದ್ದು, ಎರಡು ವಿಕೆಟ್‌ಗಳನ್ನು ಪಡೆದರು. ಫೈನಲ್ ಪಂದ್ಯದಲ್ಲಿ ಆರ್‌ಎಸ್ ಅಂಬರೀಶ್‌ ಮೂರು ವಿಕೆಟ್‌ ಪಡೆದು ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದರು.

ಅಂಡರ್‌-19 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ದೊಡ್ಡ ಮೊತ್ತದ ನಗದು ಬಹುಮಾನ ಘೋಷಿಸಿದ ಬಿಸಿಸಿಐ!

ವೈಭವ್‌ ಸೂರ್ಯವಂಶಿ ಇನ್ನೊಂದು ಅಂಡರ್‌-19 ವಿಶ್ವಕಪ್‌ ಆಡಬಹುದಾ?

14 ವರ್ಷ ಮತ್ತು 275 ದಿನಗಳ ವಯಸ್ಸಿನಲ್ಲಿ ವೈಭವ್ ಸೂರ್ಯವಂಶಿ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ ಭಾರತದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. 2030ರ ಅಂಡರ್-19 ವಿಶ್ವಕಪ್ ವೇಳೆಗೆ ಅವರು ಇನ್ನೂ ಕೇವಲ 18 ವರ್ಷದವರಾಗಿರುತ್ತಾರೆ. ಹೀಗಾಗಿ ಸೂರ್ಯವಂಶಿ ಇನ್ನೂ ಎರಡು ಅಂಡರ್-19 ವಿಶ್ವಕಪ್‌ ಟೂರ್ನಿಗಳಲ್ಲಿ ಆಡಲು ಅರ್ಹರಾಗಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ.



ಇಲ್ಲ, ಭಾರತ ಅಂಡರ್‌-19 ತಂಡದ ಪರ ಮತ್ತೊಂದು ವಿಶ್ವಕಪ್‌ ಆಡಲು ಸಾಧ್ಯವಿಲ್ಲ. 2016ರಲ್ಲಿ ಬಿಸಿಸಿಐ ಒಂದು ನಿಯಮವನ್ನು ಜಾರಿಗೆ ತಂದಿದ್ದು, ಆಟಗಾರರು ಒಂದಕ್ಕಿಂತ ಹೆಚ್ಚು ಅಂಡರ್-19 ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ನಿರ್ಬಂಧ ಹೇರಿತ್ತು. ಈ ನಿಯಮದ ಪರಿಣಾಮವಾಗಿ ವಾಷಿಂಗ್ಟನ್ ಸುಂದರ್ 2018ರ ಅಂಡರ್-19 ವಿಶ್ವಕಪ್‌ ಟೂರ್ನಿಯಲ್ಲಿ ಆಡಲು ಅವಕಾಶವನ್ನು ಕಳೆದುಕೊಂಡಿದ್ದರು.

ಈ ಹಿಂದೆ ಒಂದಕ್ಕಿಂತ ಹೆಚ್ಚು ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ಆಡಬಹುದಿತ್ತು. ಬಿಸಿಸಿಐ ಹೊಸ ನಿಯಮವನ್ನು ಜಾರಿಗೆ ತರುವುದಕ್ಕೂ ಮುನ್ನ ರವೀಂದ್ರ ಜಡೇಜಾ, ಸಂದೀಪ್‌ ಶರ್ಮಾ, ಸರ್ಫರಾಝ್‌ ಖಾನ್‌ ಹಾಗೂ ಇನ್ನೂ ಹಲವು ಆಟಗಾರರು ಎರಡು ಅಂಡರ್‌-19 ವಿಶ್ವಕಪ್‌ ಟೂರ್ನಿಗಳಲ್ಲಿ ಆಡಿದ್ದರು.



ಪ್ರಸ್ತುತ ತಂಡದ ಬಹುಪಾಲು ಆಟಗಾರರು ಮುಂದಿನ ದಿನಗಳಲ್ಲಿ ದೇಶಿ ಕ್ರಿಕೆಟ್‌ಗೆ ಮರಳಿ ತಮ್ಮ ತಮ್ಮ ರಾಜ್ಯ ತಂಡಗಳಿಗಾಗಿ ಶ್ರಮಿಸಲಿದ್ದಾರೆ. ಇತ್ತ ವೈಭವ್ ಸೂರ್ಯವಂಶಿಗೆ ಐಪಿಎಲ್ ಒಪ್ಪಂದವಿದ್ದು, ರಾಷ್ಟ್ರೀಯ ತಂಡದ ಆಯ್ಕೆಗೆ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುವ ಅವಕಾಶವೂ ಅವರಿಗೆ ಲಭ್ಯವಾಗಲಿದೆ.

ಎಡಗೈ ಬ್ಯಾಟರ್ ಆಗಿರುವ ಸೂರ್ಯವಂಶಿ 2025ರಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಪರ ಆಡಿದ ತಮ್ಮ ಮೊದಲ ಐಪಿಎಲ್ ಸೀಸನ್‌ನಲ್ಲೇ ಗಮನಾರ್ಹ ಪ್ರದರ್ಶನ ನೀಡಿದ್ದರು. ಕೇವಲ ಏಳು ಪಂದ್ಯಗಳಲ್ಲಿ 252 ರನ್‌ಗಳನ್ನು ಗಳಿಸಿದ ಅವರು, 206.55 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ 24 ಸಿಕ್ಸರ್‌ಗಳು ಮತ್ತು 18 ಬೌಂಡರಿಗಳನ್ನು ಸಿಡಿಸಿದ್ದರು.