ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಂಡರ್‌-19 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ದೊಡ್ಡ ಮೊತ್ತದ ನಗದು ಬಹುಮಾನ ಘೋಷಿಸಿದ ಬಿಸಿಸಿಐ!

ಅಂಡರ್‌-19 ವಿಶ್ವಕಪ್‌ ಗೆದ್ದ ಆಯುಷ್‌ ಮ್ಹಾತ್ರೆ ನಾಯಕತ್ವದ ಭಾರತ ಕಿರಿಯರ ತಂಡಕ್ಕೆ ಬಿಸಿಸಿಐ ಭಾರಿ ಮೊತ್ತದ ನಗದು ಬಹುಮಾನವನ್ನು ಘೋಷಿಸಿದೆ. ಶುಕ್ರವಾರ ಹರಾರೆಯಲ್ಲಿ ನಡೆದಿದ್ದ ಫೈನಲ್‌ ಹಣಾಹಣಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಭಾರತ ತಂಡ 100 ರನ್‌ಗಳಿಂದ ಸೋಲಿಸಿತ್ತು. ಆ ಮೂಲಕ ಆರನೇ ಬಾರಿ ಕಿರಿಯರ ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತ್ತು.

ಭಾರತ ಅಂಡರ್‌-19 ತಂಡಕ್ಕೆ 7.5 ಕೋಟಿ ರು. ನಗದು ಬಹುಮಾನ!

ಭಾರತ ಅಂಡರ್‌-19 ತಂಡಕ್ಕೆ ದೊಡ್ಡ ಮೊತ್ತವನ್ನು ಘೋಷಿಸಿದ ಬಿಸಿಸಿಐ. -

Profile
Ramesh Kote Feb 7, 2026 6:19 PM

ನವದೆಹಲಿ: ಆರನೇ ಬಾರಿ ಅಂಡರ್‌-19 ವಿಶ್ವಕಪ್‌ (U-19 World Cup 2026) ಗೆದ್ದ ಆಯುಷ್‌ ಮ್ಹಾತ್ರೆ ನಾಯಕತ್ವದ ಭಾರತ ತಂಡಕ್ಕೆ (India U-19) ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (BCCI) 7.5 ಕೋಟಿ ರು. ಗಳ ನಗದು ಬಹುಮಾನವನ್ನು ಘೋಷಿಸಿದೆ. ಶುಕ್ರವಾರ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆದಿದ್ದ ಫೈನಲ್‌ ಹಣಾಹಣಿಯಲ್ಲಿ ವೈಭವ್‌ ಸೂರ್ಯವಂಶಿ ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಭಾರತ ತಂಡ 100 ರನ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಮಣಿಸಿತ್ತು. ಆ ಮೂಲಕ 2026ರ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಶನಿವಾರ ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಅವರು ಭಾರತ ಕರಿಯರ ತಂಡಕ್ಕೆ ಭಾರಿ ಮೊತ್ತದ ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಎನ್‌ಎನ್‌ಐ ಜೊತೆ ಮಾತನಾಡಿದ ದೇವಜಿತ್‌ ಸೈಕಿಯಾ, "2026ರ ಅಂಡರ್‌-19 ವಿಶ್ವಕಪ್‌ ಗೆದ್ದ ಭಾರತ ಕಿರಿಯರ ತಂಡದ ಸಾಧನೆಯ ಬಗ್ಗೆ ಇಡೀ ದೇಶ ಹಾಗೂ ಬಿಸಿಸಿಐಗೆ ಹೆಮ್ಮೆ ಇದೆ. ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿದ ರೀತಿ ಹಾಗೂ ಟೂರ್ನಿಯಲ್ಲಿ ಅಜೇಯರಾಗಿ ಉಳಿದ ರೀತಿ ನಿಜಕ್ಕೂ ನಮ್ಮೆಲ್ಲರಿಗೂ ಹೆಮ್ಮೆ ಅನಿಸುತ್ತಿದೆ. ಈ ಸಾಧನೆಯನ್ನು ಪರಿಗಣಿಸಿ ಬಿಸಿಸಿಐ ಭಾರತ ಕಿರಿಯರ ತಂಡಕ್ಕೆ 7.5 ಕೋಟಿ ರು. ನಗದು ಬಹುಮಾನವನ್ನು ನೀಡುತ್ತಿದೆ," ಎಂದು ಹೇಳಿದ್ದಾರೆ.

ವೈಭವ್‌ ಸೂರ್ಯವಂಶಿ ಅಬ್ಬರ, ಇಂಗ್ಲೆಂಡ್‌ಗೆ ಮಣ್ಣು ಮುಕ್ಕಿಸಿ ಅಂಡರ್‌-19 ವಿಶ್ವಕಪ್‌ ಗೆದ್ದ ಭಾರತ!

ಪಿಎಂ ನರೇಂದ್ರ ಮೋದಿಯಿಂದ ಅಭಿನಂದನೆ

ಇದಕ್ಕೂ ಮುನ್ನ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ಚಾಂಪಿಯನ್‌ ಅಂಡರ್‌-19 ತಂಡಕ್ಕೆ ಶುಭಾಶಯ ತಿಳಿಸಿದ್ದರು.

“ಭಾರತದ ಕ್ರಿಕೆಟ್ ಪ್ರತಿಭೆ ಮಿಂಚುತ್ತಿದೆ! ಅಂಡರ್-19 ತಂಡವು ವಿಶ್ವಕಪ್ ಅನ್ನು ದೇಶಕ್ಕೆ ತಂದುಕೊಟ್ಟಿರುವುದಕ್ಕೆ ಹೆಮ್ಮೆ ಇದೆ. ಟೂರ್ನಿಯಿಡೀ ತಂಡ ಅತ್ಯುತ್ತಮವಾಗಿ ಆಡಿದ್ದು, ವಿಶಿಷ್ಟ ಕೌಶಲ್ಯವನ್ನು ಪ್ರದರ್ಶಿಸಿದೆ. ಈ ಜಯವು ಅನೇಕ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿದೆ. ಮುಂದಿನ ಪ್ರಯತ್ನಗಳಿಗೆ ಎಲ್ಲಾ ಆಟಗಾರರಿಗೆ ಶುಭಾಶಯಗಳು,” ಎಂದು ಪಿಎಂ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಅಭಿನಂದನೆಯನ್ನು ತಿಳಿಸಿದ್ದಾರೆ.



411 ರನ್‌ ಕಲೆ ಹಾಕಿದ್ದ ಭಾರತ

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ, ವೈಭವ್‌ ಸೂರ್ಯವಂಶಿ ಅವರ ಶತಕ ಹಾಗೂ ಆಯುಷ್‌ ಮ್ಹಾತ್ರೆ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 411 ರನ್‌ಗಳನ್ನು ಕಲೆ ಹಾಕಿತ್ತು. ಸ್ಪೋಟಕ ಬ್ಯಾಟ್‌ ಮಾಡಿದ್ದ ವೈಭವ್‌, ಬರೋಬ್ಬರಿ 15 ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ 175 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಕಿರಿಯರ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಇವರ ಜೊತೆಗೆ ನಾಯಕ ಆಯುಷ್‌ ಮ್ಹಾತ್ರೆ ಅವರು 51 ಎಸೆತಗಳಲ್ಲಿ 53 ರನ್‌ಗಳನ್ನು ಬಾರಿಸಿದ್ದರು.

U-19 World Cup: 80 ಎಸೆತಗಳಲ್ಲಿ 175 ರನ್‌ ಚಚ್ಚಿ ಹಲವು ದಾಖಲೆಗಳನ್ನು ಮುರಿದ ವೈಭವ್‌ ಸೂರ್ಯವಂಶಿ!

311 ರನ್‌ಗಳಿಗೆ ಇಂಗ್ಲೆಂಡ್‌ ಆಲ್‌ಔಟ್‌

ಬಳಿಕ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್‌ ತಂಡ, ಕ್ಯಾಲೆಬ್‌ ಫಾಲ್ಕನರ್‌ ಅವರ ಶತಕದ ಹೊರತಾಗಿಯೂ ಇತರೆ ಬ್ಯಾಟ್ಸ್‌ಮನ್‌ಗಳ ಬೆಂಬಲ ಕೊರತೆಯಿಂದ 40.1 ಓವರ್‌ಗಳಿಗೆ 311 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಭಾರತದ ಪರ ಆರ್‌ಎಸ್‌ ಅಂಬರೀಶ್‌ ಅವರು ಮೂರು ವಿಕೆಟ್‌ಗಳನ್ನು ಕಬಳಿಸಿದರು. ಇಂಗ್ಲೆಂಡ್‌ ಆರಂಭಿಕ ಬ್ಯಾಟರ್‌ ಬೆನ್‌ ಡಾಕಿನ್ಸ್‌ 56 ಎಸೆತಗಳಲ್ಲಿ 66 ರನ್‌ಗಳನ್ನ ಗಳಿಸಿದ್ದರು ಹಾಗೂ ಕ್ಯಾಲೆಬ್‌ ಫಾಲ್ಕನರ್‌ 67ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 115 ರನ್‌ಗಳನ್ನು ಸಿಡಿಸಿದ್ದರು. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಆಂಗ್ಲರು ಸೋಲು ಒಪ್ಪಿಕೊಳ್ಳಬೇಕಾಯಿತು.