ನವದೆಹಲಿ: ಗುಜರಾತ್ ಜಯಂಟ್ಸ್ ವಿರುದ್ಧ 2026ರ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕವನ್ನು ಬಾರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿ ಗೌತಮಿ ನಾಯಕ್ (Gautami Naik) ಅವರನ್ನು ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ ವಿಡಿಯೊ ಮೂಲಕ ಅವರು ಆರ್‌ಸಿಬಿ ಆಟಗಾರ್ತಿಗೆ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ಗೌತಮ್ ನಾಯಕ್ ಅರ್ಧಶತಕದ ಬಲದಿಂದ ಆರ್‌ಸಿಬಿ, ಸೋಮವಾರ ಗುಜರಾತ್ ತಂಡವನ್ನು ಮಣಿಸಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿತ್ತು.
ಸೋಮವಾರ ರಾತ್ರಿ ಗೌತಮಿ ತಮ್ಮ ತಂಡದ ಪರ 55 ಎಸೆತಗಳಲ್ಲಿ 73 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿದರು. ಇವರ ಸಹಾಯದಿಂದ ಆರ್‌ಸಿಬಿ ಮಹಿಳಾ ತಂಡ, ಗುಜರಾತ್ ಜಯಂಟ್ಸ್ ವಿರುದ್ಧ 61 ರನ್‌ಗಳ ಗೆಲುವು ಸಾಧಿಸಿತು. ಈ ಋತುವಿನಲ್ಲಿ ಇದು ಆರ್‌ಸಿಬಿಯ ಸತತ ಐದನೇ ಗೆಲುವು. ಇದರೊಂದಿಗೆ, ಸ್ಮೃತಿ ಮಂಧಾನಾ ಪಡೆ ಪ್ಲೇಆಫ್ಸ್ ಸ್ಥಾನ ಪಡೆದುಕೊಂಡಿದೆ. 2024 ರ ಚಾಂಪಿಯನ್ ಆರ್‌ಸಿಬಿ, ಈ ಋತುವಿನಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ, ಆದರೆ ಸೋಮವಾರ ರಾತ್ರಿ, ಆರ್‌ಸಿಬಿ, ಜಿಜಿಟಿ ವಿರುದ್ಧ ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ, ಗೌತಮಿ ಅದ್ಭುತ ಇನಿಂಗ್ಸ್ ಆಡಿದರು ಮತ್ತು ತಂಡವನ್ನು ಅಪಾಯದಿಂದ ಪಾರು ಮಾಡಿದ್ದರು.
ಹಾರ್ದಿಕ್ ಪಾಂಡ್ಯ ನನಗೆ ಸ್ಪೂರ್ತಿ ಎಂದ ಗೌತಮಿ
ಆರ್‌ಸಿಬಿ ತಂಡದ ಗೆಲುವಿನ ಬಳಿಕ ಗೌತಮಿ ಒಂದು ವೀಡಿಯೊದಲ್ಲಿ ಹಾರ್ದಿಕ್ ಅವರನ್ನು ತಮ್ಮ ಆದರ್ಶ ವ್ಯಕ್ತಿ ಎಂದು ಕರೆದರು. ಡಬ್ಲ್ಯುಪಿಎಲ್ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಗೌತಮಿ, "ಕ್ರಿಕೆಟ್‌ನಲ್ಲಿ ನನ್ನ ಆದರ್ಶ ವ್ಯಕ್ತಿ ಹಾರ್ದಿಕ್ ಪಾಂಡ್ಯ. ನಾನು ಅವರಂತೆ ಆಡಲು ಬಯಸುತ್ತೇನೆ. ನಾನು ಪ್ರತಿ ಬಾರಿ ಒತ್ತಡದಲ್ಲಿ ಅವರ ಪಂದ್ಯಗಳನ್ನು ನೋಡುತ್ತೇನೆ. ಅವರು ಹೇಗೆ ಶಾಂತವಾಗಿ ಆಡುತ್ತಾರೆಂದು ನಾನು ನೋಡುತ್ತೇನೆ ಮತ್ತು ಅದು ನನ್ನ ಸ್ವಭಾವವೂ ಆಗಿದೆ. ನಾನು ಅವರಂತೆಯೇ ನನ್ನನ್ನು ಪರಿಗಣಿಸುತ್ತೇನೆ ಮತ್ತು ಅವರಂತೆ ಆಡಲು ಬಯಸುತ್ತೇನೆ," ಎಂದು ಹೇಳಿದ್ದರು.
ಗೌತಮಿ ನಾಯಕ್ ಹಾರ್ದಿಕ್ ವಿಶೇಷ ಸಂದೇಶ
ಗೌತಮಿ ನಾಯಕ್ ಅವರು ಹಾರ್ದಿಕ್ ಪಾಂಡ್ಯ ನನಗೆ ಸ್ಪೂರ್ತಿ ಎಂದು ಹೇಳಿದ ಬೆನ್ನಲ್ಲೆ ಟೀಮ್ ಇಂಡಿಯಾ ಆಲ್‌ರೌಂಡರ್ ವಿಡಿಯೊ ಮೂಲಕ ಆರ್‌ಸಿಬಿ ಆಟಗಾರ್ತಿಗೆ ವಿಶೇಷ ಸಂದೇಶವನ್ನು ರವಾನಿಸಿದರು. "ಹಾಯ್ ಗೌತಮಿ, ನಾನು ಹಾರ್ದಿಕ್. ನಾನು ನಿಮ್ಮ ಕ್ರಿಕೆಟ್‌ಗೆ ಸ್ಪೂರ್ತಿ ಎಂದು ಈಗಷ್ಟೇ ತಿಳಿದುಕೊಂಡೆ. ಮೊದಲನೆಯದಾಗಿ, ಇಷ್ಟೊಂದು ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ನಿಮ್ಮ ಅರ್ಧಶತಕಕ್ಕೆ ಶುಭಾಶಯಗಳು. ಆಟವನ್ನು ಪ್ರೀತಿಸಿ, ಶಿಸ್ತಿನಿಂದ ಇರಿ ಹಾಗೂ ಆಟವನ್ನು ಆನಂದಿಸಿ," ಎಂದು ಶುಭ ಹಾರೈಸಿದ್ದಾರೆ.