ನವದೆಹಲಿ: ಶ್ರೀ ಚರಣಿ ಸ್ಪಿನ್ ಮೋಡಿ ಹಾಗೂ ಜೆಮಿಮಾ ರೊಡ್ರಿಗಸ್ (Jemimah Rodrigues) ಅವರ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ, 2026ರ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿತು. ಆ ಮೂಲಕ ಟೂರ್ನಿಯಲ್ಲಿ ಎರಡನೇ ಗೆಲುವು ಪಡೆಯುವ ಮೂಲಕ ಪ್ಲೇಆಫ್ಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಇದೀಗ ಅಗ್ರ ಸ್ಥಾನದಲ್ಲಿರುವ ಆರ್‌ಸಿಬಿ ಬಿಟ್ಟು ಇನ್ನುಳಿದ ಎಲ್ಲಾ ತಂಡಗಳು ತಲಾ ಎರಡೆರಡು ಅಂಕಗಳನ್ನು ಗಳಿಸಿ ಪ್ಲೇಆಫ್ಸ್ ರೇಸ್‌ನಲ್ಲಿವೆ. ಸ್ಮೃತಿ ಮಂಧಾನಾ ನಾಯಕತ್ವದ ಆರ್‌ಸಿಬಿ ಆಡಿದ ಐದೂ ಪಂದ್ಯಗಳನ್ನು ಗೆದ್ದು ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿದೆ.
ಮಂಗಳವಾರ ವಡೋದರದ ಬಿಸಿಎ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಮುಂಬೈ ಇಂಡಿಯನ್ಸ್ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 154 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 155 ರನ್‌ಗಳ ಗುರಿಯನ್ನು ನೀಡಿತು. ಮುಂಬೈ ಪರ ನ್ಯಾಟ್ ಸೀವರ್ ಬ್ರಂಟ್ 45 ಎಸೆತಗಳಲ್ಲಿ ಅಜೇಯ 65 ರನ್ ಗಳಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು 41 ರನ್ ಗಳಿಸಿದರು. ಡೆಲ್ಲಿ ಪರ ಮೂರು ವಿಕೆಟ್ ಕಿತ್ತ ಶ್ರೀಚರಣಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಮರಿಜನ್ನೆ ಕಪ್ ಮತ್ತು ನಂದಿನಿ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
16ನೇ ವಯಸ್ಸಿನಲ್ಲಿ ಡಬ್ಲ್ಯುಪಿಎಲ್‌ಗೆ ಪದಾರ್ಪಣೆ ಮಾಡಿ ವಿಶೇಷ ದಾಖಲೆ ಬರೆದ ದೀಯಾ ಯಾದವ್!
ಬಳಿಕ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಜೆಮಿಮಾ ರೊಡ್ರಿಗಸ್ ಅರ್ಧಶತಕದ ಬಲದಿಂದ 19ನೇ ಓವರ್‌ಗೆ 3 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ 7 ವಿಕೆಟ್‌ಗಳ ಗೆಲುವು ಪಡೆಯಿತು. ಜೆಮಿಮಾ ರೊಡ್ರಿಗಸ್ ಅವರ ಜೊತೆಗೆ ಲೆಜೆಲ್ ಲೀ 46 ರನ್ ಹಾಗೂ ಶಫಾಲಿ ವರ್ಮಾ 26 ರನ್‌ಗಳನ್ನು ಕಲೆ ಹಾಕಿದರು. ಮುಂಬೈ ಪರ ಅಮನ್‌ಜೋತ್ ಕೌರ್ ಹಾಗೂ ವೈಷ್ಣವಿ ಶರ್ಮಾ ತಲಾ ಒಂದೊಂದು ವಿಕೆಟ್ ಕಿತ್ತರು.
ಡೆಲ್ಲಿ ಉತ್ತಮ ಆರಂಭ
ಡೆಲ್ಲಿ ಪರ ಇನಿಂಗ್ಸ್ ಆರಂಭಿಸಿದ ಶಫಾಲಿ ವರ್ಮಾ ಹಾಗೂ ಲೆಝೆಲ್ ಲೀ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 63 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ಇವರು ತಂದುಕೊಟ್ಟಿದ್ದರು. 24 ಎಸೆತಗಳಲ್ಲಿ 26 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ಶಫಾಲಿ ವರ್ಮಾ, ವೈಷ್ಣವಿ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್ ಮಾಡಿದ ಲೆಝೆಲ್ ಲೀ ಅವರು 28 ಎಸೆತಗಳಲ್ಲಿ 46 ರನ್ ಗಳಿಸಿ ಔಟ್ ಆದರು. ಆ ಮೂಲಕ ಕೇವಲ 4 ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು.
ಜೆಮಿಮಾ ರೊಡ್ರಿಗಸ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ತಂದುಕೊಟ್ಟು ವಿಕೆಟ್ ಒಪ್ಪಿಸಿದ ಬಳಿಕ ತಂಡದ ಜವಾಬ್ದಾರಿಯನ್ನು ಹೊತ್ತುಕೊಂಡ ನಾಯಕಿ ಜೆಮಿಮಾ ರೊಟ್ರಿಗಸ್ ದೀರ್ಘಾವಧಿ ಬ್ಯಾಟ್ ಮಾಡಿದರು. ಅವರು 37 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 51 ರನ್‌ಗಳನ್ನು ಗಳಿಸಿ, ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.