ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

WPL 2026: ಆರ್‌ಸಿಬಿ ಗೆಲುವನ್ನು ವಿಶೇಷ ವ್ಯಕ್ತಿಗೆ ಸಮರ್ಪಿಸಿದ ಕನ್ನಡತಿ ಶ್ರೇಯಾಂಕ ಪಾಟೀಲ್!

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ 6 ವಿಕೆಟ್‌ ಗೆಲುವು ಪಡೆಯುವ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಎರಡನೇ ಬಾರಿ ಚಾಂಪಿಯನ್‌ ಆಯಿತು. ಆರ್‌ಸಿಬಿ ಎರಡನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬಳಿಕ ಶ್ರೇಯಾಂಕ ಪಾಟೀಲ್‌, ತಮ್ಮ ನಾಯಕಿ ಸ್ಮೃತಿ ಮಂಧಾನಾ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಆರ್‌ಸಿಬಿಯ ಗೆಲುವನ್ನು ಸ್ಮೃತಿ ಮಂಧಾನಾಗೆ ಸಮರ್ಪಿಸಿದ ಶ್ರೇಯಾಂಕ.

ವಡೋದರ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB) ತಂಡ, ಎರಡನೇ ಬಾರಿ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2026) ಟ್ರೋಫಿಯನ್ನು ಮುಡಿಗೇರಿಸಿಕೊಂಡ ಬಳಿಕ ಸ್ಪಿನ್ನರ್‌ ಶ್ರೇಯಾಂಕ ಪಾಟೀಲ್‌ (Shreyanka Patil) ತಮ್ಮ ತಂಡದ ನಾಯಕಿ ಸ್ಮೃತಿ ಮಂಧಾನಾಗೆ (Smriti Mandhana) ಗೌರವವನ್ನು ಅರ್ಪಿಸಿದ್ದಾರೆ. ಅವರು ಕಳೆದ ಒಂದೂವರೆ ತಿಂಗಳಿನಿಂದ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸುತ್ತಿದ್ದಾರೆ. ಇದರ ಹೊರತಾಗಿಯೂ ಅವರು ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. ಹಾಗಾಗಿ ಆರ್‌ಸಿಬಿ ತಂಡದ ಗೆಲುವಿನ ಶ್ರೇಯ ಮಂಧಾನಾ ಅವರಿಗೆ ಸಲ್ಲಬೇಕು ಎಂದು ಹೇಳಿದ್ದಾರೆ.

ಗುರುವಾರ ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 203 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ಸ್ಮೃತಿ ಮಂಧಾನಾ ಹಾಗೂ ಜಾರ್ಜಿಯಾ ವಾಲ್‌ ಅವರ ಅರ್ಧಶತಕಗಳ ಬಲದಿಂದ 19.4 ಓವರ್‌ಗಳಿಗೆ ಗುರಿ ತಲುಪಿ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದ ಬಳಿಕ ಮಾತನಾಡಿದ ಶ್ರೇಯಾಂಕ ಪಾಟೀಲ್‌ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ನಾಯಕಿ ಸ್ಮೃತಿ ಮಂಧಾನಾ ಅವರ ಬಗ್ಗೆ ವಿಶೇಷ ಪದಗಳಲ್ಲಿ ಗುಣಗಾಣ ಮಾಡಿದ್ದಾರೆ.

WPL 2026: ಚಾಂಪಿಯನ್‌ ಆರ್‌ಸಿಬಿಗೆ ಸಿಕ್ಕ ನಗದು ಬಹುಮಾನವೆಷ್ಟು? ಪ್ರಶಸ್ತಿ ವಿಜೇತರ ಸಂಪೂರ್ಣ ವಿವರ!

ಪೋಸ್ಟ್‌ ಮ್ಯಾಚ್‌ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಶ್ರೇಯಾಂಕ ಪಾಟೀಲ್‌, "ಈ ಗೆಲುವಿನ ಶ್ರೇಯ ಸ್ಮೃತಿ ಮಂಧಾನಾ ಅವರಿಗೆ ಸಲ್ಲಬೇಕೆಂದು ಹೇಳುತ್ತೇನೆ. ಅವರು ಕಳೆದ ಒಂದೂವರೆ ತಿಂಗಳಿನಿಂದ ಎಷ್ಟು ಏರಿಳಿತಗಳನ್ನು ಕಂಡಿದ್ದಾರೆ ಹಾಗೂ ಎಷ್ಟೊಂದು ಅನುಭವಿಸಿದ್ದಾರೆ. ಹಾಗಾಗಿ ಈ ಗೆಲುವು ಅವರಿಗೇ ಸಲ್ಲಬೇಕು ಹಾಗೂ ಈ ಗೆಲುವು ನಮಗೆ ತುಂಬಾ ವಿಶೇಷ. ಈ ಗೆಲುವನ್ನು ಅವರಿಗೆ ನೀಡುವುದನ್ನು ನಾನು ಇಷ್ಟಪಡುತ್ತೇನೆ,"ಎಂದು ಅವರು ತಿಳಿಸಿದ್ದಾರೆ.

ಹೆಡ್‌ ಕೋಚ್‌ಗೂ ಮಲೋಲನ್‌ ರಂಘರಾಜನ್‌ ಶ್ಲಾಘನೆ

ತಮ್ಮ ಮೊದಲ ಋತುವಿನಲ್ಲಿ ತಂಡವನ್ನು ಪ್ರಶಸ್ತಿಗೆ ಮುನ್ನಡೆಸಿದ ಮುಖ್ಯ ತರಬೇತುದಾರ ಮಲೋಲನ್ ರಂಗರಾಜನ್ ಅವರ ಕೊಡುಗೆಯನ್ನು ಕನ್ನಡತಿ ಶ್ಲಾಘಿಸಿದರು. "ಅವರು ತಂಡದ ಮುಖ್ಯ ತರಬೇತುದಾರರಾಗಿರುವುದು ಇದೇ ಮೊದಲು ಮತ್ತು ಇದು ನಮಗೆಲ್ಲರಿಗೂ ವಿಶೇಷ ಗೆಲುವು ಎಂದು ನಾನು ಭಾವಿಸುತ್ತೇನೆ," ಎಂದು ಶ್ರೇಯಾಂಕ ಪಾಟೀಲ್‌ ಹೇಳಿದ್ದಾರೆ.



ಫೈನಲ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕಠಿಣ ಗುರಿಯನ್ನು ಆತ್ಮವಿಶ್ವಾಸದಿಂದ ಬೆನ್ನಟ್ಟಿತು. ನಾಯಕಿ ಸ್ಮೃತಿ ಮಧಾನಾ ಸೊಗಸಾದ 87 ರನ್‌ಗಳೊಂದಿಗೆ ಮುಂಚೂಣಿಯಲ್ಲಿ ನಿಂತರೆ, ಜಾರ್ಜಿಯಾ ವಾಲ್ ವೇಗದ 79 ರನ್‌ಗಳೊಂದಿಗೆ ಶಕ್ತಿಶಾಲಿ ಬೆಂಬಲ ನೀಡಿದರು. ಈ ಜೋಡಿ ಪಂದ್ಯವನ್ನು ತೀರ್ಮಾನಿಸುವಂತ ಮಹತ್ವದ ಜೊತೆಯಾಟ ಕಟ್ಟಿತು.



ಅವರ ಆಕ್ರಮಣಕಾರಿ ಆಟದ ಶೈಲಿಯ ಫಲವಾಗಿ ಆರ್‌ಸಿಬಿ ದಾಖಲೆ ರನ್‌ಚೇಸ್‌ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಇದರಿಂದ ಡಬ್ಲ್ಯುಪಿಎಲ್‌ನಲ್ಲಿ ಅತ್ಯಂತ ಸ್ಥಿರ ಮತ್ತು ವಿಶ್ವಾಸಾರ್ಹ ತಂಡಗಳಲ್ಲೊಂದು ಎಂಬ ತನ್ನ ಸ್ಥಾನವನ್ನು ಆರ್‌ಸಿಬಿ ಮತ್ತೊಮ್ಮೆ ದೃಢಪಡಿಸಿತು. ಈ ಜಯವು ಆರ್‌ಸಿಬಿಗೆ ಎರಡನೇ ಡಬ್ಲ್ಯುಪಿಎಲ್ ಪ್ರಶಸ್ತಿಯನ್ನು ತಂದುಕೊಟ್ಟಿದ್ದು, ಲೀಗ್‌ನ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾಗಿ ಸ್ಮೃತಿ ಮಂಧಾನಾ ತನ್ನ ಪರಂಪರೆಯನ್ನು ಇನ್ನಷ್ಟು ಬಲಪಡಿಸಿಕೊಂಡಿದ್ದಾರೆ.