ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್(WPL 2026) ಅಂಕ ಪಟ್ಟಿಯಲ್ಲಿ ಪ್ರಸ್ತುತ ಕೊನೆಯ ಸ್ಥಾನದಲ್ಲಿರುವ ಯುಪಿ ವಾರಿಯರ್ಸ್ (UP Warriorz) ತಂಡಕ್ಕೆ ಟೂರ್ನಿಯ ನಾಕ್‌ಔಟ್ ಪಂದ್ಯಗಳಿಗೂ ಮುನ್ನ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಅವರ ಸ್ಟಾರ್ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಫೋಬೆ ಲಿಚ್‌ಫೀಲ್ಡ್ (Phobe Litchfield) ಗಾಯದಿಂದಾಗಿ ಟೂರ್ನಿಯ ಇನ್ನುಳಿದ ಭಾಗದಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಇಂಗ್ಲಿಷ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಮಿ ಜೋನ್ಸ್ ಅವರನ್ನು ಯುಪಿ ವಾರಿಯರ್ಸ್ ತಂಡ ಸೇರಿಸಿಕೊಂಡಿದೆ.
ಯುಪಿ ವಾರಿಯರ್ಸ್ ಬುಧವಾರ ಇದನ್ನು ಘೋಷಿಸಿತು. ಈ ಋತುವಿನಲ್ಲಿ ಫೋಬೆ ಲಿಚ್‌ಫೀಲ್ಡ್ ಅವರ ಬ್ಯಾಟಿಂಗ್ ಭರದಿಂದ ಸಾಗಿದೆ. ಅವರು ಆರು ಪಂದ್ಯಗಳಲ್ಲಿ 243 ರನ್ ಗಳಿಸುವ ಮೂಲಕ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದರು. ಆದರೆ ಅವರು ಇದೀಗ ಗಾಯಕ್ಕೆ ತುತ್ತಾಗಿರುವುದು ಯುಪಿ ತಂಡಕ್ಕೆ ಭಾರಿ ಹಿನ್ನಡೆಯನ್ನು ತಂದಿದೆ.
World Legends Pro T20 League: ಗುರುಗ್ರಾಮ್ ಥಂಡರ್ಸ್ ವಿರುದ್ಧ ಪುಣೆ ಪ್ಯಾಂಥರ್ಸ್‌ಗೆ 4 ವಿಕೆಟ್ ಜಯ!
ಆಮಿ ಜೋನ್ಸ್ ಅವರ ವೃತ್ತಿಜೀವನ
32 ವರ್ಷದ ಆಮಿ ಜೋನ್ಸ್ ಇಂಗ್ಲೆಂಡ್ ಪರ 8 ಟೆಸ್ಟ್, 111 ಏಕದಿನ ಮತ್ತು 125 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಅವರು ಒಂದು ಅರ್ಧಶತಕದೊಂದಿಗೆ 188 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅವರು ಎರಡು ಶತಕ ಮತ್ತು 16 ಅರ್ಧಶತಕಗಳೊಂದಿಗೆ 2,659 ರನ್ ಗಳಿಸಿದ್ದಾರೆ. ಅವರ ಸರಾಸರಿ 32.8 ರಷ್ಟಿದೆ. ಆಮಿ ಜೋನ್ಸ್ ಟಿ20ಐಗಳಲ್ಲಿ 121.6ರ ಸ್ಟ್ರೈಕ್ ರೇಟ್‌ನಲ್ಲಿ 1666 ರನ್ ಗಳಿಸಿದ್ದಾರೆ, ಇದರಲ್ಲಿ ಐದು ಅರ್ಧಶತಕಗಳಿವೆ. ಜೋನ್ಸ್ 50 ಲಕ್ಷ ರು. ಗಳಿಗೆ ಯುಪಿ ವಾರಿಯರ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಡಬ್ಲ್ಯುಪಿಎಲ್‌ನಲ್ಲಿ ಯುಪಿ ವಾರಿಯರ್ಸ್‌ಗೆ ಕೊನೆಯ ಸ್ಥಾನ
2026ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್ ತಂಡವು ಇಲ್ಲಿಯವರೆಗೆ ಒಟ್ಟು ಆರು ಪಂದ್ಯಗಳನ್ನು ಆಡಿದ್ದು, ಕೇವಲ ಎರಡನ್ನು ಮಾತ್ರ ಗೆದ್ದಿದೆ. ಯುಪಿ ತಂಡದ ರನ್ ರೇಟ್ -0.769 ರಷ್ಟಿದೆ ಹಾಗೂ ನಾಲ್ಕು ಅಂಕಗಳೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು, ಅವರು ತಮ್ಮ ಉಳಿದ ಎರಡೂ ಪಂದ್ಯಗಳನ್ನು ಉತ್ತಮ ರನ್ ರೇಟ್‌ನೊಂದಿಗೆ ಗೆಲ್ಲಬೇಕಾಗುತ್ತದೆ. ವಾರಿಯರ್ಸ್‌ನ ಮುಂದಿನ ಎರಡು ಪಂದ್ಯಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿವೆ. ಈ ಟೂರ್ನಿಯಲ್ಲಿ ಪ್ರಸ್ತುತ ಪ್ಲೇಆಫ್ ರೇಸ್ ಹೆಚ್ಚು ಆಸಕ್ತಿದಾಯಕವಾಗಿದೆ. ಆರ್‌ಸಿಬಿ ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ, ಆದರೆ ಇನ್ನೂ ಎರಡು ಸ್ಥಾನಗಳು ಉಳಿದಿವೆ, ಇದಕ್ಕಾಗಿ ಇತರ ತಂಡಗಳು ಸ್ಪರ್ಧಿಸುತ್ತಿವೆ.