ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಯಶಸ್ವಿ ಜೈಸ್ವಾಲ್‌ ಶತಕ, ಮೂರನೇ ಪಂದ್ಯ ಗೆದ್ದು ಏಕದಿನ ಸರಣಿ ಮುಡಿಗೇರಿಸಿಕೊಂಡ ಭಾರತ!

IND vs SA 3rd ODI Highlights: ಯಶಸ್ವಿ ಜೈಸ್ವಾಲ್‌ ಚೊಚ್ಚಲ ಶತಕ ಹಾಗೂ ವಿರಾಟ್‌ ಕೊಹ್ಲಿಯ ಸ್ಪೋಟಕ ಅರ್ಧಶತಕದ ಬಲದಿಂದ ಭಾರತ ತಂಡ, ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಮ್‌ ಇಂಡಿಯಾ 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.

ಮೂರನೇ ಪಂದ್ಯ ಗೆದ್ದು ಏಕದಿನ ಸರಣಿ ಮುಡಿಗೇರಿಸಿಕೊಂಡ ಭಾರತ!

ದಕ್ಷಿಣ ಆಫ್ರಿಕಾ ವಿರುದ್ದ ಒಡಿಐ ಸರಣಿ ಗೆದ್ದ ಭಾರತ. -

Profile
Ramesh Kote Dec 6, 2025 9:10 PM

ವಿಶಾಖಪಟ್ಟಣಂ: ಯಶಸ್ವಿ ಜೈಸ್ವಾಲ್‌ (Yashasvi jaiswal) ಚೊಚ್ಚಲ ಶತಕ ಹಾಗೂ ವಿರಾಟ್‌ ಕೊಹ್ಲಿ (Virat Kohli) ಮತ್ತು ರೋಹಿತ್‌ ಶರ್ಮಾ (Rohit Sharma) ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ, ಮೂರನೇ ಏಕದಿನ ಪಂದ್ಯದಲ್ಲಿ (IND vs SA) ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಮ್‌ ಇಂಡಿಯಾ 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಆ ಮೂಲಕ ಟೆಸ್ಟ್‌ ಸರಣಿಯ ಸೋಲಿನ ಸೇಡನ್ನು ಭಾರತ ತಂಡ ತೀರಿಸಿಕೊಂಡಿತು.

ಶನಿವಾರ ಇಲ್ಲಿನ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಣದಲ್ಲಿ ದಕ್ಷಿಣ ಆಫ್ರಿಕಾ ತಂಡ ನೀಡಿದ್ದ 271 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳ ಅಬ್ಬರದ ಬ್ಯಾಟಿಂಗ್‌ ಬಲದಿಂದ 39.5 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ ಗೆಲುವಿನ ದಡ ಸೇರಿತು. ಕಳೆದ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಯಶಸ್ವಿ ಜೈಸ್ವಾಲ್‌, ಈ ಪಂದ್ಯದಲ್ಲಿ ಭರ್ಜರಿ ಕಮ್‌ಬ್ಯಾಕ್‌ ಮಾಡಿದರು. ಅವರು ಆಡಿದ 121 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ ಅಜೇಯ 116 ರನ್‌ಗಳನ್ನು ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

IND vs SA: 20000 ರನ್‌ಗಳಿಂದ ವಿರಾಟ್‌ ಕೊಹ್ಲಿ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ರೋಹಿತ್‌ ಶರ್ಮಾ!

ರೋಹಿತ್‌-ಜೈಸ್ವಾಲ್‌ ಜುಗಲ್‌ಬಂದಿ

ಚೇಸಿಂಗ್‌ ಆರಂಭಿಸಿದ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ಹರಿಣ ಪಡೆಯ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ರೋಹಿತ್‌ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್‌ ಮುರಿಯದ ಮೊದಲನೇ ವಿಕೆಟ್‌ಗೆ 155 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು. ಸ್ಪೋಟಕ ಬ್ಯಾಟ್‌ ಮಾಡಿದ ರೋಹಿತ್‌ ಶರ್ಮಾ 73 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 75 ರನ್‌ಗಳನ್ನು ಗಳಿಸಿ ಶತಕದ ಹಾದಿಯಲ್ಲಿದ್ದರು. ಕೇಶವ್‌ ಮಹಾರಾಜ್‌ ಎಸೆತದಲ್ಲಿ ಸಿಕ್ಸರ್‌ ಹೊಡೆಯಲು ಹೋಗಿ ಕ್ಯಾಚ್‌ ಕೊಟ್ಟರು.



ಅಬ್ಬರಿಸಿದ ವಿರಾಟ್‌ ಕೊಹ್ಲಿ

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿಯೂ ಅಬ್ಬರಿಸಿದರು. ಕಳೆದ ಎರಡು ಪಂದ್ಯಗಳಲ್ಲಿ ಸತತ ಶತಕಗಳನ್ನು ಬಾರಿಸಿದ್ದ ಮಾಜಿ ನಾಯಕ, ವಿಶಾಖಪಟ್ಟಣಂ ಪಂದ್ಯದಲ್ಲಿಯೂ ಅಜೇಯ ಅರ್ಧಶತಕವನ್ನು ಬಾರಿಸಿದರು. ಇದು ಕೊಹ್ಲಿಯ 76ನೇ ಒಡಿಐ ಅರ್ಧಶತಕವಾಗಿದೆ. ಆಡಿದ 45 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 65 ರನ್‌ಗಳನ್ನು ಬಾರಿಸಿದರು. ಅಲ್ಲದೆ ಈ ಸರಣಿಯಲ್ಲಿ ಅವರು 151ರ ಸರಾಸರಿಯಲ್ಲಿ 302 ರನ್‌ಗಳನ್ನು ದಾಖಲಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



ಕ್ವಿಂಟನ್‌ ಡಿ ಕಾಕ್‌ ಶತಕ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕ ಕ್ವಿಂಟನ್‌ ಡಿ ಕಾಕ್‌ (106 ರನ್‌) ಹಾಗೂ ತೆಂಬಾ ಬವೂಮ (48 ರನ್‌) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ಕ್ವಿಂಟನ್‌ ಡಿ ಕಾಕ್‌, 89 ಎಸೆತಗಳಿಗೆ 6 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 106 ರನ್‌ಗಳನ್ನು ಸಿಡಿಸಿದರು. ಇವರು ಹಾಗೂ ತೆಂಬಾ ಬವೂಮ 113 ರನ್‌ಗಳ ಜೊತೆಯಾಟವನ್ನು ಆಡಿದ್ದು, ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳಿಂದ ದೊಡ್ಡ ಜೊತೆಯಾಟ ಮೂಡಿ ಬರಲಿಲ್ಲ.



ಭಾರತದ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಪ್ರಸಿಧ್‌ ಕೃಷ್ಣ ಹಾಗೂ ಕುಲ್ದೀಪ್‌ ಯಾದವ್‌ ಅವರು ಕ್ರಮವಾಗಿ 66 ಮತ್ತು 41 ರನ್‌ಗಳನ್ನು ನೀಡಿದರೂ ತಲಾ 4 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು 270 ರನ್‌ಗಳಿಗೆ (47.5 ಓವರ್‌ಗಳಿಗೆ) ಕಟ್ಟಿ ಹಾಕಲು ಭಾರತಕ್ಕೆ ನೆರವು ನೀಡಿದ್ದರು. ಅರ್ಷದೀಪ್‌ ಸಿಂಗ್‌ ಹಾಗೂ ರವೀಂದ್ರ ಜಡೇಜಾ ಕೂಡ ತಲಾ ಒಂದೊಂದು ವಿಕೆಟ್‌ ಪಡೆದರು.