ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಭಾರತ ತಂಡದ ಆಯ್ಕೆಗೆ ಜಸ್‌ಪ್ರೀತ್‌ ಬುಮ್ರಾ ಲಭ್ಯ! ವರದಿ

ಮುಂಬರುವ 2025ರ ಏಷ್ಯಾ ಕಪ್‌ ಟೂರ್ನಿಯು ಸೆಪ್ಟಂಬರ್‌ 9 ರಂದು ಆರಂಭವಾಗಲಿದೆ. ಈ ಟೂರ್ನಿಗೆ ಭಾರತ ತಂಡವನ್ನು ಆಗಸ್ಟ್‌ 19 ರಂದು ಮಂಗಳವಾರ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸುವ ನಿರೀಕ್ಷೆ ಇದೆ. ಇದರ ನಡುವೆ ವೇಗದ ಬೌಲಿಂಗ್‌ ಜಸ್‌ಪ್ರೀತ್‌ ಬುಮ್ರಾ ಅವರು ಕೂಡ ಆಯ್ಕೆಗೆ ಲಭ್ಯರಿದ್ದಾರೆಂದು ವರದಿಯಾಗಿದೆ.

ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದ ಆಯ್ಕೆಗೆ ಜಸ್‌ಪ್ರೀತ್‌ ಬುಮ್ರಾ ಲಭ್ಯ.

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯ ಭಾರತ ತಂಡದ ಆಯ್ಕೆಗೆ ಹಿರಿಯ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಲಭ್ಯರಿದ್ದಾರೆಂದು ಮೂಲಗಳು ತಿಳಿಸಿವೆ. ಆ ಮೂಲಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ನಾಯಕತ್ವದ ಭಾರತ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ಬಲ ಬಂದಂತಾಗಿದೆ. ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ತಾನು ಸಂಪೂರ್ಣ ಫಿಟ್‌ ಆಗಿದ್ದು ಏಷ್ಯಾ ಕಪ್‌ ಟೂರ್ನಿಯಲ್ಲಿ ಆಡಲು ಬಯಸುತ್ತಿದ್ದೇನೆಂದು 31ರ ವಯಸ್ಸಿನ ಜಸ್‌ಪ್ರೀತ್‌ ಬುಮ್ರಾ ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ಗೆ ತಿಳಿಸಿದ್ದಾರೆ. ಏಷ್ಯಾ ಕಪ್‌ ಟೂರ್ನಿಯು ಸೆಪ್ಟಂಬರ್‌ 9 ರಂದು ಯುಎಇಯಲ್ಲಿ ಆರಂಭವಾಗಲಿದೆ.

ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಆಗಸ್ಟ್‌ 19 ರಂದು ಮುಂಬೈನ ಕಛೇರಿಯಲ್ಲಿ ಸಬೆ ನಡೆಸಲಿದ್ದು, ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. "ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದ ಆಯ್ಕೆಗೆ ಲಭ್ಯರಿರುವುದಾಗಿ ಜಸ್‌ಪ್ರೀತ್‌ ಬುಮ್ರಾ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ಗೆ ತಿಳಿಸಿದ್ದಾರೆ. ಮುಂದಿನ ವಾರ ಭಾರತ ತಂಡದ ಆಯ್ಕೆಯ ಬಗ್ಗೆ ಆಯ್ಕೆದಾರರು ಚರ್ಚೆ ನಡೆಸಿದ್ದಾರೆ," ಎಂದು ತಿಳಿಸಿದ್ದಾರೆ.

Asia Cup: ಶುಭಮನ್‌ ಗಿಲ್‌ರನ್ನು ಹಿಂದಿಕ್ಕಬಲ್ಲ ಕಿಲಾಡಿ ಆಟಗಾರನನ್ನು ಆರಿಸಿದ ಆಕಾಶ್‌ ಚೋಪ್ರಾ!

ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ಜಸ್‌ಪ್ರೀತ್‌ ಬುಮ್ರಾ ಭಾರತ ವೈಟ್‌ಬಾಲ್‌ ತಂಡದಿಂದ ದೂರ ಉಳಿದಿದ್ದಾರೆ. ಇವರು ಭಾರತ ತಂಡದ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಾರ್ಬಡೋಸ್‌ನ ಬ್ರಿಡ್ಜ್‌ಸ್ಟೋನ್‌ನಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಜಸ್‌ಪ್ರೀತ್‌ ಬುಮ್ರಾ 18 ರನ್‌ ನೀಡಿ ಎರಡು ವಿಕೆಟ್‌ ಕಿತ್ತಿದ್ದರು. ಆ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇತ್ತೀಚೆಗೆ ಕೆನಿಂಗ್ಟನ್‌ ಓವಲ್‌ನಲ್ಲಿ ನಡೆದಿದ್ದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ನಿರ್ಣಾಯಕ ಐದನೇ ಪಂದ್ಯಕ್ಕೂ ಮುನ್ನ ಜಸ್‌ಪ್ರೀತ್‌ ಬುಮ್ರಾ ಅವರನ್ನು ಟೆಸ್ಟ್ ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಆ ಮೂಲಕ ಟೀಮ್‌ ಮ್ಯಾನೇಜ್‌ಮೆಂಟ್‌ ವೇಗಿಯ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಅನ್ನು ಆಯ್ಕೆ ಮಾಡಿಕೊಂಡಿತ್ತು. ಹಿರಿಯ ವೇಗಿ ಮೊದಲ ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ಮೂರರಲ್ಲಿ ಆಡಿದ್ದರು, ಇದರಲ್ಲಿ ಅವರು ಎರಡು ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದರು ಮತ್ತು ಸರಣಿಯಾದ್ಯಂತ ಒಟ್ಟು 119.4 ಓವರ್‌ಗಳನ್ನು ಬೌಲ್‌ ಮಾಡಿದ್ದರು. ಆದಾಗ್ಯೂ, ಅಂತಿಮ ಟೆಸ್ಟ್‌ನಲ್ಲಿ ಅವರ ಅನುಪಸ್ಥಿತಿಯು ಅವರ ಫಿಟ್‌ನೆಸ್ ಬಗ್ಗೆ ಚರ್ಚೆಯನ್ನು ಮತ್ತೆ ಹುಟ್ಟುಹಾಕಿತು, ವಿಶೇಷವಾಗಿ ಈ ವರ್ಷದ ಆರಂಭದಲ್ಲಿ ಬೆನ್ನುನೋವಿನ ಕಾರಣದಿಂದಾಗಿ ಅವರು ನಾಲ್ಕು ತಿಂಗಳ ಕಾಲ ಆಟದಿಂದ ಹೊರಗುಳಿದಿದ್ದರು.

Asia Cup 2025: ಫಿಟ್‌ನೆಸ್‌ ಟೆಸ್ಟ್‌ ಪಾಸ್‌ ಮಾಡಿದ ಸೂರ್ಯಕುಮಾರ್‌ ಯಾದವ್‌!

ಈ ಬಾರಿ ಏಷ್ಯಾಕಪ್ ಟೂರ್ನಿಯು ಟಿ20 ಮಾದರಿಯಲ್ಲಿ ನಡೆಯುವುದರಿಂದ ಜಸ್‌ಪ್ರೀತ್‌ ಬುಮ್ರಾ ಮೇಲೆ ಹೆಚ್ಚಿನ ಒತ್ತಡವಿಲ್ಲ. ಬುಮ್ರಾ ಪ್ರತಿ ಪಂದ್ಯಕ್ಕೆ ಗರಿಷ್ಠ ನಾಲ್ಕು ಓವರ್‌ಗಳನ್ನು ಮಾತ್ರ ಬೌಲ್ ಮಾಡಬೇಕಾಗುತ್ತದೆ ಮತ್ತು ಗುಂಪು ಹಂತದಲ್ಲಿ ಪಂದ್ಯಗಳ ನಡುವೆ ಮೂರರಿಂದ ನಾಲ್ಕು ದಿನಗಳ ವಿಶ್ರಾಂತಿ ಇರುವುದರಿಂದ ಅವರ ಕೆಲಸದ ಹೊರೆ ಸಮಸ್ಯೆಯಾಗುವ ಸಾಧ್ಯತೆಯಿಲ್ಲ. ಮುಖ್ಯವಾಗಿ, ಇಂಗ್ಲೆಂಡ್‌ನಲ್ಲಿ ಅವರ ಕೊನೆಯ ಟೆಸ್ಟ್ ಪಂದ್ಯ ಮತ್ತು ಭಾರತದ ಆರಂಭಿಕ ಪಂದ್ಯದ ನಡುವೆ ಅವರು ಸುಮಾರು 40 ದಿನಗಳ ವಿರಾಮವನ್ನು ಪಡೆದಿದ್ದಾರೆ.

ಈ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮೂರು ಬಾರಿ ಎದುರಿಸಬಹುದಾದ ಭಾರತ, ಯುಎಇಗೆ ಬೇಗನೆ ಪ್ರಯಾಣಿಸುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಪೂರ್ವಸಿದ್ಧತಾ ಶಿಬಿರದ ಕಲ್ಪನೆಯನ್ನು ಬಿಸಿಸಿಐ ಮುಂದಿಟ್ಟಿದ್ದರೂ, ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಆಡಳಿತ ಮಂಡಳಿಯು ಕೆಲವು ದಿನಗಳಿಗೂ ಮುನ್ನ ಎಮಿರೇಟ್ಸ್‌ಗೆ ಆಗಮಿಸಲು ಆದ್ಯತೆ ನೀಡಿತು.

Asia Cup ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ಗೆ ಅವಕಾಶ ನೀಡಲು ಪ್ರಮುಖ 3 ಕಾರಣಗಳು!

"ಇಲ್ಲಿ ಶಿಬಿರ ನಡೆಸುವ ಬದಲು, ತಂಡ ಮೂರರಿಂದ ನಾಲ್ಕು ದಿನಗಳ ಮುಂಚಿತವಾಗಿ ಯುಎಇಗೆ ಹಾರಾಟ ನಡೆಸಲಿದೆ, ಇದರಿಂದಾಗಿ ಟೂರ್ನಿಯು ಪ್ರಾರಂಭವಾಗುವ ಮೊದಲು ಅವರಿಗೆ ಉತ್ತಮ ಅಭ್ಯಾಸ ಸಿಗುತ್ತದೆ," ಎಂದು ಮೂಲವೊಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.