ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಗೆ ಹೆಚ್ಚಿನ ಆದಾಯವನ್ನು ತಂದುಕೊಡುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ(IPL) ಮಹತ್ವದ ಬದಲಾವಣೆಯನ್ನು ತರಲು ಚರ್ಚೆಗಳು ನಡೆಯುತ್ತಿವೆ. ಸದ್ಯ 10 ಪಂದ್ಯಗಳಿಂದ ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳನ್ನು ಆಡಿಸಲಾಗುತ್ತಿದೆ. ಆ ಮೂಲಕ ತವರು ಹಾಗೂ ಹೊರಗಿನ ಪಂದ್ಯಗಳನ್ನು ಸರಿ ಸಮನಾಗಿ ಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬಿಸಿಸಿಐ ಈ ಟೂರ್ನಿಯಲ್ಲಿ ಪಂದ್ಯಗಳ ಸಂಖ್ಯೆಯನ್ನು 94 ಕ್ಕೆ ಏರಿಸಲು ಯೋಜನೆಯನ್ನು ರೂಪಿಸುತ್ತಿದೆ. ಇದರ ಸಲುವಾಗಿ ಅಂತಾರಾಷ್ಟ್ರೀಯ ದ್ವಿಪಕ್ಷೀಯ ಸರಣಿಗಳ ಸಂಖ್ಯೆಯನ್ನು ಇಳಿಸಿ, ಐಪಿಎಲ್ ಟೂರ್ನಿಯನ್ನು ಮಾರ್ಚ್‌ಮೊದಲ ವಾರದಿಂದಲೇ ಆರಂಭಿಸುವ ಪ್ರಸ್ತಾವನೆ ಬಿಸಿಸಿಐ ಮುಂದೆ ಬಂದಿದೆ.
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 10 ತಂಡಗಳು ತವರು ಹಾಗೂ ಹೊರಗಿನ ಸಂಪೂರ್ಣ ಪಂದ್ಯಗಳನ್ನು ಆಡುತ್ತಿಲ್ಲ. ಅಂದರೆ, ನಾಲ್ಕು ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯವನ್ನು ಮಾತ್ರ ಆಡಿಸಲಾಗುತ್ತಿದೆ. ಇದೀಗ ಎಲ್ಲಾ ತಂಡಗಳ ಎದುರು ತಲಾ ಎರಡೆರಡು ಪಂದ್ಯಗಳನ್ನು ಆಡಿಸಿದಾಗ ಆಗ ಟೂರ್ನಿಯಲ್ಲಿನ ಲೀಗ್ ಪಂದ್ಯಗಳ ಸಂಖ್ಯೆ ಹೆಚ್ಚಾಗುತ್ತವೆ. ಆ ಮೂಲಕ ಟೂರ್ನಿಯಲ್ಲಿನ ಪಂದ್ಯಗಳ ಸಂಖ್ಯೆ 94ಕ್ಕೆ ಏರಿಕೆಯಾಗುತ್ತದೆ. ಹಾಗಾಗಿ ಟಿವಿ ಪ್ರಸಾರದ ಹಕ್ಕುಗಳನ್ನು ಖರೀದಿಸಲು ನಿರಾಕರಿಸುತ್ತಿರುವ ದ್ವಿಪಕ್ಷೀಯ ಸರಣಿಗಳ ಸಂಖ್ಯೆಯನ್ನು ಇಳಿಸಿ ಮುಂಗಾರು ಮಳೆಗೂ ಮುಂಚೆ ಐಪಿಎಲ್ ಟೂರ್ನಿಯನ್ನು ಮುಗಿಸಲು ಸೂಕ್ತ ಯೋಜನೆಯನ್ನು ರೂಪಿಸುತ್ತಿದೆ.
IPL 2026ರ ಟೂರ್ನಿಯ ಟಾಪ್ 5 ಕ್ಯಾಚ್‌ಗಳನ್ನು ಪಡೆದ ಐವರು ಆಟಗಾರರು!
ಈ ವಿಷಯದ ಬಗ್ಗೆ ಮಾತನಾಡಿದ ಬಿಸಿಸಿಐ ಮೂಲವೊಂದು, ದ್ವಿಪಕ್ಷೀಯ ಸರಣಿಗಳ ಬಗ್ಗೆ ಪ್ರೇಕ್ಷಕರಲ್ಲಿ ಬೇಸರ ಹೆಚ್ಚಾಗುತ್ತಿರುವ ಕಾರಣ ಪ್ರಸಾರ ಸಂಸ್ಥೆಗಳು ಕೂಡ ಆಸಕ್ತಿ ಕಳೆದುಕೊಳ್ಳುತ್ತಿವೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೆಲವು ದ್ವಿಪಕ್ಷೀಯ ಸರಣಿಗಳ ಸಂಖ್ಯೆಯನ್ನು ಕಡಿತಗೊಳಿಸುವ ಆಯ್ಕೆಗಳನ್ನು ಮಂಡಳಿ ಪರಿಶೀಲಿಸುತ್ತಿದೆ ಎಂದು ಮೂಲವೊಂದು ತಿಳಿಸಿದೆ.
2028ರಿಂದ ಐಪಿಎಲ್ ಟೂರ್ನಿಯು ಮಾರ್ಚ್ ತಿಂಗಳ ಆರಂಭದಲ್ಲೇ ಶುರುವಾಗುವ ಸಾಧ್ಯತೆ ಇದೆ. ಆದರೆ ಈ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಹೆಚ್ಚುತ್ತಿರುವ ಪಂದ್ಯಗಳ ಒತ್ತಡ, ಆಟಗಾರರ ಕೆಲಸದ ಭಾರ ಹಾಗೂ ಪ್ರಸಾರ ಹಕ್ಕುಗಳ ವಾಣಿಜ್ಯ ಅಂಶಗಳನ್ನು ಪರಿಗಣಿಸಿ, ಭವಿಷ್ಯದ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳು ಆಗುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸಿವೆ.
“ಮಳೆಗಾಲವು ಮೇ ತಿಂಗಳ ನಂತರ ಆರಂಭವಾಗುವುದರಿಂದ ಪ್ರಸ್ತುತ ವೇಳಾಪಟ್ಟಿಯಲ್ಲಿ 94 ಪಂದ್ಯಗಳನ್ನು ಆಯೋಜಿಸುವುದು ಸಾಧ್ಯವಿಲ್ಲ. ಆದ್ದರಿಂದ ಟೂರ್ನಿಯನ್ನು ಎರಡು ಹಂತಗಳಲ್ಲಿ ನಡೆಸಬೇಕಾಗಬಹುದು ಅಥವಾ ಮಾರ್ಚ್ ಮೊದಲ ವಾರದಿಂದ ಆರಂಭಿಸಿ ಮೇ 15ರೊಳಗೆ ಮುಗಿಸಬೇಕಾಗಬಹುದು. 94 ಪಂದ್ಯಗಳ ಟೂರ್ನಿಗೆ ಅದು ಅತ್ಯುತ್ತಮ ಅವಧಿಯಾಗಿದೆ."
ಸಚಿನ್-ಗಂಗೂಲಿ ಜೋಡಿ ಅಲ್ಲ; ಭಾರತ ತಂಡಕ್ಕೆ ಬೆಸ್ಟ್ ಓಪನರ್ಸ್ ಹೆಸರಿಸಿದ ಆಕಾಶ್ ಚೋಪ್ರಾ!
"ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸರಣಿಗಳ ಕಾರ್ಯಸಾಧ್ಯತೆಯ ಬಗ್ಗೆಯೂ ನಾವು ಪರಿಶೀಲನೆ ನಡೆಸಬೇಕಿದೆ. ಈಗ ಪ್ರತಿಯೊಂದು ದೇಶವೂ ತನ್ನದೇ ಆದ ಲೀಗ್‌ಗಳನ್ನು ಹೊಂದಿದೆ. ಭಾರತ ವಿರುದ್ಧದ ಸರಣಿಗಳನ್ನು ಆಯೋಜಿಸುವುದರ ಮೇಲೆಯೇ ಅವು ಸಂಪೂರ್ಣವಾಗಿ ಅವಲಂಬಿತವಾಗಿಲ್ಲ. ಹೀಗಾಗಿ ಭವಿಷ್ಯದಲ್ಲಿ ದ್ವಿಪಕ್ಷೀಯ ಸರಣಿಗಳ ಅಗತ್ಯತೆ ಮತ್ತು ಸಾಧ್ಯತೆಗಳನ್ನು ಮರುಪರಿಶೀಲಿಸಬೇಕಾಗಿದೆ," ಎಂದು ಮೂಲಗಳು ತಿಳಿಸಿವೆ.
"ಈಗಾಗಲೇ ಕೆಲವು ದ್ವಿಪಕ್ಷೀಯ ಸರಣಿಗಳಲ್ಲಿ ಪ್ರಸಾರ ಸಂಸ್ಥೆಗಳು ನಿರೀಕ್ಷಿತ ಮೌಲ್ಯವನ್ನು ಕಾಣುತ್ತಿಲ್ಲ. ಕ್ರಿಕೆಟ್ ಕೂಡ ಫುಟ್‌ಬಾಲ್ ಮಾದರಿಯತ್ತ ಸಾಗಬೇಕಾದರೆ, ಎಲ್ಲ ಕ್ರಿಕೆಟ್ ಮಂಡಳಿಗಳೂ ಅದಕ್ಕೆ ಒಪ್ಪಿಗೆ ನೀಡಬೇಕು ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು,” ಎಂದು ಬಿಸಿಸಿಐ ಮೂಲವು ತಿಳಿಸಿದೆ.
ಈ ಹೇಳಿಕೆಯು ಭವಿಷ್ಯದಲ್ಲಿ ಐಪಿಎಲ್ ಟೂರ್ನಿಯ ವಿಸ್ತರಣೆ, ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ ಹಾಗೂ ದ್ವಿಪಕ್ಷೀಯ ಸರಣಿಗಳ ಮಹತ್ವದ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ಮತ್ತಷ್ಟು ವೇಗ ನೀಡಿದೆ.