ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

89ನೇ ವಯಸ್ಸಿನಲ್ಲಿ ವಿಧಿವಶರಾದ ಗ್ಯಾರಿ ಸೋಬರ್ಸ್‌ಗೆ ವಿಶೇಷ ಗೌರವ ಸಲ್ಲಿಸಿದ ವಿರಾಟ್‌ ಕೊಹ್ಲಿ!

ವೆಸ್ಟ್‌ ಇಂಡೀಸ್‌ ದಿಗ್ಗಜ ಹಾಗೂ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ಸರ್‌ ಗ್ಯಾರಿಫೀಲ್ಡ್‌ ಸೋಬರ್ಸ್‌ ಅವರು ಜುಲೈ 17 ರಂದು ತಮ್ಮ 89ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದರು. ಇದೀಗ ವಿಂಡೀಸ್‌ ದಿಗ್ಗಜನಿಗೆ ವಿರಾಟ್‌ ಕೊಹ್ಲಿ, ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಕ್ರಿಕೆಟ್‌ ದಿಗ್ಗಜರು ಗೌರವ ಸಲ್ಲಿಸಿದ್ದಾರೆ.

ಗ್ಯಾರಿ ಸೋಬರ್ಸ್‌ಗೆ ವಿಶೇಷ ಗೌರವ ಸಲ್ಲಿಸಿದ ವಿರಾಟ್‌ ಕೊಹ್ಲಿ.

ನವದೆಹಲಿ: ಕೊನೆಯುಸಿರೆಳೆದ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ದಿಗ್ಗಜ ಸರ್‌ ಗ್ಯಾರಿಫೀಲ್ಡ್‌ ಸೋಬರ್ಸ್‌ (Sir Garfield Sobers) ಅವರಿಗೆ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಹಲವು ಕ್ರಿಕೆಟ್‌ ಸ್ಟಾರ್‌ಗಳು ಗೌರವ ಸಲ್ಲಿಸಿದ್ದಾರೆ. ಜುಲೈ 17 ರಂದು ವಿಂಡೀಸ್‌ ದಿಗ್ಗಜ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತನ್ನ ಅಧಿಕೃತ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಈ ವಿಷಯವನ್ನು ತಿಳಿಸಿದೆ.

ವಿಂಡೀಸ್‌ ದಂತಕತೆಗೆ ಭಾವನಾತ್ಮಕ ಸಂದೇಶ ಬರೆದ ವಿರಾಟ್‌ ಕೊಹ್ಲಿ, ಕ್ರಿಕೆಟ್ ತನ್ನ ಶ್ರೇಷ್ಠ ಪ್ರತಿಭೆಗಳಲ್ಲಿ ಒಬ್ಬರನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ಅವರ ಪರಂಪರೆ ಮುಂದಿನ ಅನೇಕ ತಲೆಮಾರಿನ ಆಟಗಾರರಿಗೆ ಸ್ಫೂರ್ತಿಯಾಗಲಿದೆ ಎಂದೂ ಕೊಹ್ಲಿ ತಿಳಿಸಿದ್ದಾರೆ. 2023ರಲ್ಲಿ ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ, ಮೈದಾನದಲ್ಲೇ ಭೇಟಿಯಾಗಲು ಸೋಬರ್ಸ್ ಕಾದಿದ್ದ ಘಟನೆ ಇಬ್ಬರ ನಡುವಿನ ವಿಶೇಷ ಬಾಂಧವ್ಯಕ್ಕೆ ಸಾಕ್ಷಿಯಾಗಿತ್ತು.

"ಶ್ರೇಷ್ಠ ಆಟಗಾರನನ್ನು ಕ್ರಿಕೆಟ್‌ ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಸರ್‌ ಗ್ಯಾರಿಫೀಲ್ಡ್‌ ಸೋಬರ್ಸ್‌. ನಿಮ್ಮ ಪರಂಪರೆ ತಲೆಮಾರುಗಳಿಗೆ ಸ್ಪೂರ್ತಿಯಾಗಲಿದೆ," ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ಬರೆದುಕೊಂಡಿದ್ದಾರೆ.

89ನೇ ವಯಸ್ಸಿನಲ್ಲಿ ನಿಧನರಾದ ವಿಂಡೀಸ್‌ ದಿಗ್ಗಜ ಸರ್‌ ಗ್ಯಾರಿಫೀಲ್ಡ್‌ ಸೋಬರ್ಸ್‌!

ವಿರಾಟ್‌ ಕೊಹ್ಲಿ ಈ ಹಿಂದೆಯೇ ಸೋಬರ್ಸ್ ಅವರ ಮೇಲಿನ ತಮ್ಮ ಅಭಿಮಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. 2016ರಲ್ಲಿ ಅವರೊಂದಿಗೆ ತೆಗೆಸಿಕೊಂಡಿದ್ದ ಚಿತ್ರವನ್ನು ಹಂಚಿಕೊಂಡಿದ್ದ ಕೊಹ್ಲಿ, ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜರೊಂದಿಗೆ ಮಾತನಾಡುವ ಅವಕಾಶ ದೊರೆತಿದ್ದು ತಮ್ಮ ಜೀವನದ ಅತ್ಯಂತ ಭಾಗ್ಯಕರ ಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಿಕೊಂಡಿದ್ದರು.



ಕೊಹ್ಲಿ ಅವರ ಜೊತೆಗೆ ವೀರೇಂದ್ರ ಸೆಹ್ವಾಗ್, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಕೂಡ ಸೋಬರ್ಸ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಸಹ ದಿಗ್ಗಜ ಕ್ರಿಕೆಟಿಗನಿಗೆ ಗೌರವ ನಮನ ಸಲ್ಲಿಸಿ, ಅವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ಸ್ಮರಿಸಿದ್ದಾರೆ.



ಗ್ಯಾರಿ ಸೋಬರ್ಸ್‌ಗೆ ಕ್ರಿಕೆಟ್‌ ದೇವರು ವಿಶೇಷ ಸಂದೇಶ

"ಸರ್ ಗ್ಯಾರಿ ಇನ್ನು ನಮ್ಮೊಂದಿಗಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ. 2003ರ ವಿಶ್ವಕಪ್‌ ಟೂರ್ನಿಯಲ್ಲಿ ಅವರು ನನಗೆ 'ಟೂರ್ನಿ ಶ್ರೇಷ್ಠ ಪ್ರಶಸ್ತಿ'ಯನ್ನು ಪ್ರದಾನ ಮಾಡಿದ ಕ್ಷಣದಿಂದ ಹಿಡಿದು, ನನ್ನ ಶತಕಗಳ ಸಂದರ್ಭದಲ್ಲಿ ಅಭಿನಂದಿಸಿದ ಅವರ ಆತ್ಮೀಯ ಮಾತುಗಳವರೆಗೆ ಅನೇಕ ನೆನಪುಗಳು ಮನಸ್ಸಿನಲ್ಲಿ ಮೂಡುತ್ತಿವೆ. ಅವರು ಸದಾ ಅತ್ಯಂತ ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದರು. ಕೆಲವು ವರ್ಷಗಳ ಹಿಂದೆ ಲಂಡನ್‌ನಲ್ಲಿ ಭೇಟಿಯಾದ ಸಂದರ್ಭ ಮತ್ತೆ ಮತ್ತೆ ನೆನಪಾಗುತ್ತಿದೆ. ಆಗ ನಾವು ಕುಳಿತು ಕ್ರಿಕೆಟ್ ಬಗ್ಗೆ ಹರಟೆ ಹೊಡೆಯುತ್ತಿದ್ದೆವು. ಅದೇ ನಮ್ಮ ಕೊನೆಯ ಭೇಟಿ ಎಂದು ಈಗ ಅರಿವಾಗುತ್ತಿರುವುದು ತುಂಬಾ ನೋವುಂಟು ಮಾಡುತ್ತಿದೆ. ಅವರು ನಿಜವಾಗಿಯೂ 'ಒನ್ ಅಂಡ್ ಓನ್ಲಿ'. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆತ್ಮಕ್ಕೆ ಶಾಂತಿ ಸಿಗಲಿ, ಸರ್ ಗ್ಯಾರಿ," ಎಂದು ಸಚಿನ್‌ ತೆಂಡೂಲ್ಕರ್ ಎಕ್ಸ್‌ನಲ್ಲಿ ಬರೆದಿದ್ದಾರೆ.



ಗ್ಯಾರಿ ಸೋಬರ್ಸ್‌ ಅವರ ವೃತ್ತಿ ಜೀವನ

ಸೋಬರ್ಸ್ ಅವರನ್ನು ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆಲ್‌ರೌಂಡರ್‌ಗಳಿಗೆ ಮಾನದಂಡವೆಂದು ಪರಿಗಣಿಸಲಾಗುತ್ತಿತ್ತು. ಸೊಗಸಾದ ಎಡಗೈ ಬ್ಯಾಟರ್ ಆಗಿದ್ದ ಅವರು ವೇಗ ಹಾಗೂ ಸ್ಪಿನ್ ಎರಡರಲ್ಲೂ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲ ಬೌಲರ್ ಕೂಡ ಆಗಿದ್ದರು. ಇದಲ್ಲದೆ, ಅವರ ಅದ್ಭುತ ಫೀಲ್ಡಿಂಗ್ ಸಾಮರ್ಥ್ಯದ ಮೂಲಕ ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದರು.

ಹದಿಹರೆಯದಲ್ಲೇ ವೆಸ್ಟ್ ಇಂಡೀಸ್ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಸೋಬರ್ಸ್, 93 ಟೆಸ್ಟ್ ಪಂದ್ಯಗಳನ್ನು ಆಡಿ ಅದ್ಭುತ ವೃತ್ತಿಜೀವನ ಕಟ್ಟಿಕೊಂಡರು. ಅವರು 26 ಶತಕಗಳೊಂದಿಗೆ 57.78ರ ಸರಾಸರಿಯಲ್ಲಿ 8,032 ರನ್ ಗಳಿಸಿದ್ದು, 235 ವಿಕೆಟ್‌ಗಳನ್ನು ಕಬಳಿಸಿ, 109 ಕ್ಯಾಚ್‌ಗಳನ್ನು ಪಡೆದಿದ್ದರು. ಈ ಅಂಕಿ-ಅಂಶಗಳು ಆಟದ ಪ್ರತಿಯೊಂದು ವಿಭಾಗದಲ್ಲೂ ಅವರ ಪ್ರಭಾವವನ್ನು ಸಾರುತ್ತವೆ.

1958ರಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 365 ರನ್‌ಗಳ ಇನಿಂಗ್ಸ್ ಆಡಿದ್ದ ಸೋಬರ್ಸ್, ಆ ಸಮಯದಲ್ಲಿ ಟೆಸ್ಟ್ ಕ್ರಿಕೆಟ್‌ನ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲಿಸಿದ ಬ್ಯಾಟರ್ ಆಗಿದ್ದರು. ಅಲ್ಲದೆ, 1968ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆಯನ್ನೂ ಅವರು ಮಾಡಿದ್ದರು.