ನವದೆಹಲಿ: ಮುಂದಿನ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಟೂರ್ನಿಯ ನಿಮಿತ್ತ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ತೊರೆದು ರಿಷಭ್ ಪಂತ್ (Rishabh Pant) ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಲಿದ್ದಾರೆಂದು ವರದಿಗಳು ಪ್ರಕಟವಾಗುತ್ತಿದ್ದಂತೆ ಭಾರತ ತಂಡದ ಮಾಜಿ ಆಟಗಾರ ದೊಡ್ಡ ಗಣೇಶ್ (Dodda Ganesh) ಅವರು, ಕನ್ನಡಿಗ ಕೆಎಲ್ ರಾಹುಲ್‌ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಒಂದು ವೇಳೆ ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಟ್ರೇಡ್ ಡೀಲ್ ಮೂಲಕ ಬಂದರೆ, ನೀವು ಮಿನಿ ಹರಾಜಿಗೆ ಬನ್ನಿ ಎಂದು ಅವರು ತಿಳಿಸಿದ್ದಾರೆ.
ರಿಷಭ್ ಪಂತ್ ಅವರು 2025ರ ಐಪಿಎಲ್ ಮೆಗಾ ಆಕ್ಷನ್‌ನಲ್ಲಿ 27 ಕೋಟಿ ರು. ಗಳಿಗೆ ದಾಖಲೆಯ ಮೊತ್ತಕ್ಕೆ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಆ ಮೂಲಕ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ, ಅವರ ನಾಯಕತ್ವದಲ್ಲಿ ಕಳೆದ ಎರಡೂ ಸೀಸನ್‌ನಲ್ಲಿ ಎಲ್‌ಎಸ್‌ಜಿ ತಂಡ ಪ್ಲೇಆಫ್ಸ್‌ಗೆ ಅರ್ಹತೆ ಪಡಯುವಲ್ಲಿ ವಿಫಲವಾಗಿತ್ತು. ಅದರ ಜೊತೆಗೆ ಅವರು ಬ್ಯಾಟಿಂಗ್‌ನಲ್ಲಿಯೂ ವಿಫಲರಾಗಿದ್ದರು. ಇದರಿಂದಾಗಿ ಅವರು ಈ ಹಿಂದೆ ಲಖನೌ ತಂಡದ ನಾಯಕತ್ವವನ್ನು ತೊರೆದಿದ್ದರು.
ಇದೀಗ ಪಂತ್ ಅವರು ಟ್ರೇಡ್ ಡೀಲ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದರೆ, ಅಲ್ಲಿಂದ ಕುಲ್ದೀಪ್ ಯಾದವ್ ಅವರು ಲಖನೌ ಫ್ರಾಂಚೈಸಿಗೆ ಮರಳಲಿದ್ದಾರೆಂದು ವರದಿಯಾಗಿದೆ. ಈ ವರದಿಗಳು ಕಾಣಿಸಿಕೊಳ್ಳುತ್ತಿದ್ದಂತೆ ಭಾರತ ತಂಡದ ಮಾಜಿ ಆಟಗಾರ ದೊಡ್ಡ ಗಣೇಶ್, ತಮ್ಮ ಎಕ್ಸ್ ಖಾತೆಯಲ್ಲಿ ಕೆಎಲ್ ರಾಹುಲ್ ಬಗ್ಗೆ ಪೋಸ್ಟ್ ಹಾಕಿದ್ದಾರೆ.
IPL 2027: ಎಲ್‌ಎಸ್‌ಜಿ ತೊರೆದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಲು ಮುಂದಾದ ರಿಷಭ್ ಪಂತ್?
"ರಿಷಭ್ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದರೆ, ಕೆಎಲ್ ರಾಹುಲ್ ಅವರು ಮಿನಿ ಹರಾಜಿಗೆ ರಿಲೀಸ್ ಮಾಡಬೇಕೆಂದು ಕೇಳಬೇಕು," ಎಂದು ದೊಡ್ಡ ಗಣೇಶ್ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಇಬ್ಬರೂ ಲಖನೌ ಫ್ರಾಂಚೈಸಿಗಳಿಗೆ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಈ ಇಬ್ಬರೂ ಕೂಡ ಅಸಮಾಧಾನದೊಂದಿಗೆ ಹೊರಗಡೆ ಬಂದಿದ್ದಾರೆ. 2024ರ ಐಪಿಎಲ್ ನಂತರ ಕೆಎಲ್ ರಾಹುಲ್, ಇದೀಗ ರಿಷಭ್ ಪಂತ್. ಎಡಗೈ ಬ್ಯಾಟ್ಸ್‌ಮನ್ 2026ರ ಟೂರ್ನಿಯಲ್ಲಿ ಗಳಿಸಿದ್ದು ಕೇವಲ 312 ರನ್‌ಗಳು ಮಾತ್ರ. ಇದೀಗ ಅವರು ತಮ್ಮ ಹಳೆ ತಂಡ ಡೆಲ್ಲಿಗೆ ಮರಳಲು ಬಯಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಮತ್ತೊಂದು ಕಡೆ ಕೆಎಲ್ ರಾಹುಲ್ ಅವರು, ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದರೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಆಡಿದ್ದ 14 ಪಂದ್ಯಗಳಿಂದ 174.41ರ ಸ್ಟ್ರೈಕ್ ರೇಟ್‌ನಲ್ಲಿ 593 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಅವರು ಪಂಜಾಬ್ ಕಿಂಗ್ಸ್ ಎದುರು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 152 ರನ್‌ಗಳು ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಐಪಿಎಲ್ ಕೋಚಿಂಗ್ ನಡೆಸಲು ಮುಂದಾದ ಯುವರಾಜ್ ಸಿಂಗ್; ಯಾವ ತಂಡ?
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೋಚಿಂಗ್ ವಿಭಾಗದಲ್ಲಿಯೂ ಮಹತ್ವದ ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ. ಭಾರತದ ಕ್ರಿಕೆಟ್ ದಿಗ್ಗಜ ಯುವರಾಜ್ ಸಿಂಗ್ ತಂಡದ ಮೆಂಟರ್ ಆಗುವ ಸಾಧ್ಯತೆ ಇದೆ. ವಿಶೇಷವೆಂದರೆ, ರಿಷಭ್ ಪಂತ್ ಅವರು 2026ರ ಐಪಿಎಲ್‌ಗೂ ಮುನ್ನ ಯುವರಾಜ್ ಸಿಂಗ್ ಅವರೊಂದಿಗೆ ವ್ಯಾಪಕವಾಗಿ ತರಬೇತಿ ಮತ್ತು ಮಾರ್ಗದರ್ಶನ ಪಡೆದಿದ್ದರು. 2016ರಿಂದ 2024ರವರೆಗೆ ಡೆಲ್ಲಿ ಪರ 111 ಪಂದ್ಯಗಳನ್ನು ಆಡಿದ್ದ ಪಂತ್, ಮೂರು ಸೀಸನ್‌ಗಳ ಕಾಲ ತಂಡದ ನಾಯಕತ್ವ ವಹಿಸಿದ್ದರು. ಇಂದಿಗೂ ಅವರು ಫ್ರಾಂಚೈಸಿಯ ಅತ್ಯಂತ ಪ್ರಮುಖ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುತ್ತಾರೆ.
ಇದೇ ವೇಳೆ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಕ್ರಿಕೆಟ್ ವ್ಯವಹಾರಗಳ ಮುಖ್ಯಸ್ಥರಾಗಿ ಮತ್ತೆ ತಂಡದ ಆಡಳಿತ ವಿಭಾಗಕ್ಕೆ ಮರಳುವ ಸಾಧ್ಯತೆ ಇದೆ ಎಂಬ ವರದಿಗಳು ಕೇಳಿಬಂದಿವೆ. ಮತ್ತೊಂದೆಡೆ, ಪ್ರಸ್ತುತ ಮುಖ್ಯ ಕೋಚ್ ಹೇಮಾಂಗ್ ಬದಾನಿ ಅವರ ಭವಿಷ್ಯ ಪ್ರಶ್ನಾರ್ಥಕವಾಗಿದೆ. ಏಕೆಂದರೆ 2026ರ ಐಪಿಎಲ್ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು, ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟ ತಲುಪಿರಲಿಲ್ಲ.