ನವದೆಹಲಿ: ಕಳೆದ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯಲ್ಲಿ ನನ್ನ ಹಾಗೂ ಅಭಿಷೇಕ್ ಶರ್ಮಾ (Abhishek Sharma) ಅವರ ಓಪನಿಂಗ್ ಜೊತೆಯಾಟವನ್ನು “ಐಸ್ ಮತ್ತು ಫೈಯರ್” ಕಥೆ ಎಂದು ಕರೆಯುವುದಕ್ಕಿಂತ “ಫೈಯರ್ ಮತ್ತು ಫೈಯರ್” ಕಥೆ ಎಂದು ಹೇಳಬಹುದು ಎಂದು ಟೀಮ್ ಇಂಡಿಯಾ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (Sanju samson) ಹಾಸ್ಯಭರಿತವಾಗಿ ತಿಳಿಸಿದ್ದಾರೆ. ಅಭಿಷೇಕ್ ಶರ್ಮಾ ಈ ಟೂರ್ನಿಯಲ್ಲಿ ಎರಡು ಅರ್ಧಶತಕವನ್ನು ಮಾತ್ರ ಗಳಿಸಿದ್ದರು. ಅದರಲ್ಲಿಯೂ ಫೈನಲ್‌ನಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿದ್ದರು ಹಾಗೂ ಸಂಜು ಸ್ಯಾಮ್ಸನ್ ಜೊತೆಗೆ 98 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆದರೆ, ಸಂಜು ಹ್ಯಾಟ್ರಿಕ್ ಅರ್ಧಶತಕದ ಮೂಲಕ ಭಾರತ ತಂಡ ಮೂರನೇ ಬಾರಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಳ್ಳುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದ್ದರು ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
2026ರ ಇಂಡಿಯಾ ಟುಡೇ ಕಾನ್ಲೇವ್ ಕಾರ್ಯಕ್ರಮದಲ್ಲಿ ವಿಕ್ರಾಂತ್ ಗುಪ್ತಾ ಹಾಗೂ ನಿಖಿಲ್ ನಾಜ್ ಅವರ ಜೊತೆ ಸಂಭಾಷಣೆಯ ವೇಳೆ ಅಭಿಷೇಕ್ ಶರ್ಮಾ ಅವರ ಜೊತೆಗಿನ ಹೊಂದಾಣಿಕೆ ಬಗ್ಗೆ ಸಂಜು ಸ್ಯಾಮ್ಸನ್ ವಿವರಿಸಿದರು. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ 98 ರನ್‌ಗಳ ಓಪನಿಂಗ್ ಜೊತೆಯಾಟವಾಡಿ ಭಾರತ ತಂಡಕ್ಕೆ ಪವರ್‌ಪ್ಲೇನಲ್ಲಿ ಭರ್ಜರಿ ಆರಂಭ ತಂದುಕೊಟ್ಟಿದ್ದರು. ಈ ಉತ್ತಮ ಆರಂಭದ ಮೇಲೆ ಭಾರತ ತಂಡ ಮುಂದುವರಿದು ಒಟ್ಟು 255 ರನ್‌ಗಳ ಭಾರಿ ಮೊತ್ತವನ್ನು ಕಲೆ ಹಾಕಿತ್ತು.
ಸಂಜು ಸ್ಯಾಮ್ಸನ್‌ಗೆ ಸ್ಥಾನ; T20 World Cup ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್ಸ್!
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಜು, 2024ರಿಂದಲೇ ಅಭಿಷೇಕ್ ಜೊತೆ ಬ್ಯಾಟಿಂಗ್ ಅನ್ನು ಆನಂದಿಸುತ್ತಿದ್ದು, ನಾವಿಬ್ಬರೂ ಏನು ಮಾಡಬಹುದು ಎಂಬುದು ಚೆನ್ನಾಗಿ ತಿಳಿದಿದೆ. ಸಂದರ್ಶನದಲ್ಲಿ ಅವರು ಮೈದಾನದಲ್ಲೂ ಮತ್ತು ಮೈದಾನದ ಹೊರಗೆಯೂ ಇಬ್ಬರ ನಡುವೆ ಉತ್ತಮ ಸ್ನೇಹವಿದೆ ಎಂದು ಹೇಳಿದರು. ಇದೇ ಕಾರಣದಿಂದ ಪಂದ್ಯಗಳ ವೇಳೆ ಅವರ ನಡುವೆ ಎಲ್ಲವೂ ಬಹಳ ಸರಳವಾಗಿರುತ್ತದೆ ಎಂದು ಸ್ಯಾಮ್ಸನ್ ವಿವರಿಸಿದ್ದಾರೆ.
ನಾವು ಫೈಯರ್ ಅಂಡ್ ಫೈಯರ್: ಸಂಜು
“ನಾವು ಐಸ್ ಮತ್ತು ಫೈಯರ್ ಅಲ್ಲ, ನಾವು ʻಫೈಯರ್ ಮತ್ತು ಫೈಯರ್ʼ. ಕೆಲವೊಮ್ಮೆ ಅವರು ದಾಳಿ ಮಾಡುತ್ತಾರೆ, ಕೆಲವೊಮ್ಮೆ ನಾನು ಮಾಡುತ್ತೇನೆ. ನಮ್ಮ ನಡುವೆ ಅಂಥಾ ಕಾಂಬಿನೇಶನ್ ಇದೆ. 2024ರಿಂದಲೇ ನಾವು ಹೀಗೆ ಆಡುತ್ತಾ ಬಂದಿದ್ದೇವೆ. ಮೈದಾನದಲ್ಲಿ ಒಂದು ಕೇರಳ–ಪಂಜಾಬಿ ಸ್ನೇಹ ಇದೆ. ನಮ್ಮ ನಡುವೆ ಎಲ್ಲವೂ ಸಹಜವಾಗಿ ನಡೆಯುತ್ತದೆ, ಅದಕ್ಕಾಗಿ ನಾವು ವಿಷಯಗಳನ್ನು ಕಠಿಣಗೊಳಿಸುವುದಿಲ್ಲ. ಅವರು ನನಗೆ ‘ಬಾಲ್ ಹೇಗೆ ಬರುತ್ತಿದೆ?’ ಎಂದು ಕೇಳುತ್ತಾರೆ. ನಾನು ‘ಬಾಲ್ ಸಾಮಾನ್ಯವಾಗಿ ಬರುತ್ತಿದೆ, ಸಿಕ್ಸ್ ಹೊಡಿ’ ಎಂದು ಹೇಳುತ್ತೇನೆ. ಅರ ಜೊತೆ ಆಟ ಆಡುವುದು ತುಂಬಾ ಸರಳ. ಅಭಿಷೇಕ್ ತುಂಬಾ ಧೈರ್ಯಶಾಲಿ ಮತ್ತು ಶಾಂತ ಸ್ವಭಾವದ ಆಟಗಾರ. ಮೈದಾನದಲ್ಲೂ ಹಾಗೂ ಮೈದಾನದ ಹೊರಗೆಯೂ ಅರ ಜೊತೆಗಿನ ಈ ಜೊತೆಯಾಟ ನನಗೆ ತುಂಬಾ ಇಷ್ಟ,” ಎಂದು ಸ್ಯಾಮ್ಸನ್ ಹೇಳಿದ್ದಾರೆ.
IND vs NZ: 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಹೆನ್ರಿಚ್ ಕ್ಲಾಸೆನ್ ದಾಖಲೆ ಮುರಿದ ಅಭಿಷೇಕ್ ಶರ್ಮಾ!
ಸ್ಯಾಮ್ಸನ್ ಟೂರ್ನಿ ಆರಂಭಕ್ಕೂ ಮುನ್ನ ಫಾರ್ಮ್ ಕಳೆದುಕೊಂಡಿದ್ದರಿಂದ ಆರಂಭಿಕ ಪ್ಲೇಯಿಂಗ್ XIಯಿಂದ ಹೊರಗಿದ್ದರು. ಮತ್ತೊಂದೆಡೆ, ಅಭಿಷೇಕ್ ಮೊದಲ ಕೆಲವು ಪಂದ್ಯಗಳ ಸಮಯದಲ್ಲಿ ಅನಾರೋಗ್ಯಕ್ಕೊಳಗಾಗಿ ಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನಂತರ ಸಂಜುಗೆ ಭಾರತದ ಕೊನೆಯ ನಾಲ್ಕು ಪಂದ್ಯಗಳಲ್ಲಿ ಅವಕಾಶ ದೊರೆತಿದ್ದು, ಅದನ್ನು ಅವರು ಅತ್ಯುತ್ತಮವಾಗಿ ಬಳಸಿಕೊಂಡು ತಂಡದ ಗೆಲುವುಗಳಲ್ಲಿ ಮಹತ್ವದ ಕೊಡುಗೆ ನೀಡಿದರು. ಫಾರ್ಮ್ ಸಮಸ್ಯೆಯನ್ನು ಎದುರಿಸುತ್ತಿದ್ದ ಅಭಿಷೇಕ್ ಕೂಡ ಟೂರ್ನಿಯ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸ್ಪೋಟಕ ಅರ್ಧಶತಕವನ್ನು ಬಾರಿಸಿದರು.