ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಹೆನ್ರಿಚ್‌ ಕ್ಲಾಸೆನ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ನ್ಯೂಜಿಲೆಂಡ್‌ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸುವ ಮೂಲಕ ಭಾರತ ತಂಡದ ಆರಂಭಿಕ ಅಭಿಷೇಕ್‌ ಶರ್ಮಾ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಚುಟುಕು ವಿಶ್ವಕಪ್‌ ಫೈನಲ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ.

ಅರ್ಧಶತಕ ಬಾರಿಸಿ ಹೆನ್ರಿಚ್‌ ಕ್ಲಾಸೆನ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ಅರ್ಧಶತಕ ಬಾರಿಸಿ ಹೆನ್ರಿಚ್‌ ಕ್ಲಾಸೆನ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ. -

Profile
Ramesh Kote Mar 8, 2026 8:10 PM

ಅಹಮದಾಬಾದ್‌: ನ್ಯೂಜಿಲೆಂಡ್‌ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ (ICC t20 World Cup 2026) ಟೂರ್ನಿಯಲ್ಲಿ ಫೈನಲ್‌ ಪಂದ್ಯದಲ್ಲಿ (IND vs NZ) ಭಾರತ ತಂಡದ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ (Abhishek Sharma) ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಆದರೆ, ಕಳೆದ ಪಂದ್ಯಗಳಿಂದ ಕೇವಲ 89 ರನ್‌ಗಳಿಗೆ ಸೀಮಿತವಾಗುವ ಮೂಲಕ ಭಾರಿ ಟೀಕೆಗಳಿಗೆ ಗುರಿಯಾಗಿದ್ದರು. ಇದರ ಹೊರತಾಗಿಯೂ ಫೈನಲ್‌ನಲ್ಲಿ ಆಡಲು ಅವಕಾಶ ಪಡೆದುಕೊಂಡ ಅಭಿಷೇಕ್‌, ಸ್ಪೋಟಕ ಅರ್ಧಶತಕವನ್ನು ಬಾರಿಸುವ ಮೂಲಕ ಟೀಮ್‌ ಮ್ಯಾನೇಜ್‌ಮೆಂಟ್‌ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು. ಈ ಅರ್ಧಶತಕದ ಮೂಲಕ ಎಡಗೈ ಬ್ಯಾಟ್ಸ್‌ಮನ್‌ ಚುಟುಕು ವಿಶ್ವಕಪ್‌ ಫೈನಲ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ.

ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ವಿಭಿನ್ನವಾಗಿ ಕಂಡರು. ಕಿವೀಸ್‌ ಬೌಲರ್‌ಗಳ ಎದುರು ಅವರು ತಮ್ಮ ನೈಜ ಆಟವನ್ನು ಪ್ರದರ್ಶಿಸಿದರು. ಅವರು ಆಡಿದ 18 ಎಸೆತಗಳಲ್ಲಿಯೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎಂಬ ನೂತನ ದಾಖಲೆಯನ್ನು ಅಭಿಷೇಕ್‌ ಶರ್ಮಾ ಬರೆದರು. ಆ ಮೂಲಕ ದಕ್ಷಿಣ ಆಫ್ರಿಕಾದ ಹೆನ್ರಿಚ್‌ ಕ್ಲಾಸೆನ್‌ ಅವರ ದಾಖಲೆಯನ್ನು ಮುರಿದರು. ಕ್ಲಾಸೆನ್‌, 2024ರ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತದ ಎದುರು 23 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದರು.

IND vs NZ T20 World Cup Final: ನ್ಯೂಜಿಲೆಂಡ್‌ ಎದುರು ಟಾಸ್‌ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್‌!

ಫೈನಲ್‌ ಪಂದ್ಯದಲ್ಲಿಅಭಿಷೇಕ್‌ ಶರ್ಮಾ ತಮ್ಮ ಸ್ಪೋಟಕ ಅರ್ಧಶತಕದ ಮೂಲಕ ಭಾರತ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟರು. ಅವರು ಒಟ್ಟಾರೆ ಇನಿಂಗ್ಸ್‌ನಲ್ಲಿ ಆಡಿದ 20 ಎಸೆತಗಳಲ್ಲಿ247.62ರ ಸ್ಟ್ರೈಕ್‌ ರೇಟ್‌ನಲ್ಲಿ ಮೂರು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 51 ರನ್‌ಗಳನ್ನು ಸಿಡಿಸಿದ ಬಳಿಕ ರಚಿನ್‌ ರವೀಂದ್ರ ಅವರ ವೈಡ್‌ ಬಾಲ್‌ ಎಸೆತವನ್ನು ಆಡಲು ಹೋಗಿ ವಿಕೆಟ್‌ ಕೀಪರ್‌ ಟಿಮ್‌ ಸೈಫರ್ಟ್‌ಗೆ ಕ್ಯಾಚ್‌ ಕೊಟ್ಟರು. ಆ ಮೂಲಕ ತಮ್ಮ ದಾಖಲೆಯ ಇನಿಂಗ್ಸ್‌ ಅನ್ನು ಮುಗಿಸಿದರು.



ಸಂಜು ಸ್ಯಾಮ್ಸನ್‌-ಅಭಿಷೇಕ್‌ ಶರ್ಮಾ ಜುಗಲ್‌ಬಂದಿ

ಅಭಿಷೇಕ್‌ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಸಂಜು ಸ್ಯಾಮ್ಸನ್‌ ಕೂಡ ಸತತ ಮೂರನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅವರು ಒಂದು ತುದಿಯಲ್ಲಿ ದೀರ್ಘಾವಧಿ ನಿಂತು ಬ್ಯಾಟ್‌ ಮಾಡಿದರು. ಅವರು ಆಡಿದ 46 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್‌ಹಾಗೂ 5 ಬೌಂಡರಿಗಳೊಂದಿಗೆ 89 ರನ್‌ಗಳನ್ನು ಸಿಡಿಸಿದರು. ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಮುರಿಯದ ಮೊದಲನೇ ವಿಕೆಟ್‌ಗೆ 98 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಟೀಮ್‌ ಇಂಡಿಯಾ ಭರ್ಜರಿ ಆರಂಭವನ್ನು ತಂದುಕೊಟ್ಟರು.