ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೋಹಿತ್‌ ಶರ್ಮಾ ನಿವೃತ್ತಿ ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ!

ರೋಹಿತ್‌ ಶರ್ಮಾ ಅವರ ಏಕದಿನ ಕ್ರಿಕೆಟ್‌ ನಿವೃತ್ತಿಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ತೆರೆ ಎಳೆದಿದ್ದಾರೆ. ರೋಹಿತ್‌ ಶರ್ಮಾ ಅವರು ಭಾರತ ತಂಡದ ಭಾಗವಾಗಿ ಉಳಿಯಲಿದ್ದಾರೆ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವುದನ್ನು ಮುಂದುವರಿಸಲಿದ್ದಾರೆಂದು ಅವರು ತಿಳಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯೇ ರೋಹಿತ್‌ ಪಾಲಿಗೆ ಕೊನೆ ಎಂದು ಹೇಳಲಾಗುತ್ತಿತ್ತು. ಆದರೆ, ಅವರು ಆ ಪಂದ್ಯದಲ್ಲಿ ಶತಕ ಸಿಡಿಸಿ ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿದ್ದರು.

ರೋಹಿತ್‌ ಶರ್ಮಾಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಬೆಂಬಲ.

ನವದೆಹಲಿ: ಲಾರ್ಡ್ಸ್‌ನಲ್ಲಿ ಐತಿಹಾಸಿಕ ಶತಕ ಸಿಡಿಸಿ ನಿವೃತ್ತಿ ಕುರಿತ ಊಹಾಪೋಹಗಳಿಗೆ ತಕ್ಕ ಉತ್ತರ ನೀಡಿದ ಕೆಲವೇ ದಿನಗಳ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಅವರು ಮತ್ತೊಮ್ಮೆ ರೋಹಿತ್ ಶರ್ಮಾ (Rohit Sharma) ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಕುರಿತು ಹರಿದಾಡುತ್ತಿರುವ ವದಂತಿಗಳನ್ನು ತಳ್ಳಿಹಾಕಿದ್ದಾರೆ. ರೋಹಿತ್ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಅವರ ದೀರ್ಘಕಾಲದ ಕಳಪೆ ಫಾರ್ಮ್ ಹಿನ್ನೆಲೆ, ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯವೇ ಭಾರತ ತಂಡದ ಪರ ಅವರ ಕೊನೆಯ ಪಂದ್ಯವಾಗಬಹುದು ಎಂಬ ವರದಿಗಳೂ ಹರಿದಾಡಿದ್ದವು.

ಆದರೆ 39 ವರ್ಷದ ಅನುಭವಿ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ, 110 ಎಸೆತಗಳಲ್ಲಿ ಭರ್ಜರಿ 138 ರನ್‌ಗಳ ಇನಿಂಗ್ಸ್‌ ಆಡಿ ಎಲ್ಲ ಟೀಕೆಗಳಿಗೆ ಬ್ಯಾಟ್‌ನಿಂದಲೇ ಉತ್ತರ ನೀಡಿದರು. ಈ ಮೂಲಕ ಲಾರ್ಡ್ಸ್ ಅಂಗಣದಲ್ಲಿ ಏಕದಿನ ಕ್ರಿಕೆಟ್ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಐತಿಹಾಸಿಕ ಸಾಧನೆಯನ್ನೂ ತಮ್ಮದಾಗಿಸಿಕೊಂಡರು.‌

ಇಬ್ಬರು ಹೊಸಬರಿಗೆ ಚೊಚ್ಚಲ ಸ್ಥಾನ? ಶ್ರೀಲಂಕಾ ಟೆಸ್ಟ್‌ ಸರಣಿಗೆ ಭಾರತ ಸಂಭಾವ್ಯ ಆಟಗಾರರ ತಂಡ!

ನನ್ನ ಕೆಲಸ ಬ್ಯಾಟ್‌ನಿಂದ ಉತ್ತರ ನೀಡುವುದು: ರೋಹಿತ್‌ ಶರ್ಮಾ

ಮೂರನೇ ಏಕದಿನ ಪಂದ್ಯದ ಬಳಿಕ ಮಾತನಾಡಿದ್ದ ರೋಹಿತ್‌ ಶರ್ಮಾ, "ನನ್ನ ಕೆಲಸ ಬ್ಯಾಟ್‌ನಿಂದ ಉತ್ತರಿಸುವುದು. ಮೈದಾನಕ್ಕಿಳಿದು ದೇಶವನ್ನು ಪ್ರತಿನಿಧಿಸುವುದೇ ನನ್ನ ಗುರಿ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಿಂದಲೇ ಇಂತಹ ಚರ್ಚೆಗಳು, ಊಹಾಪೋಹಗಳು ನಡೆಯುತ್ತಿವೆ. ನಾನು ಆಡುವವರೆಗೂ ಇವು ಇದ್ದೇ ಇರುತ್ತವೆ. ಅದರಿಂದ ನನಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ನನಗೆ ಮುಖ್ಯವಾದುದು ಮೈದಾನದಲ್ಲಿ ನಾನು ಏನು ಮಾಡುತ್ತೇನೆ ಎಂಬುದಷ್ಟೇ," ಎಂದು ಹೇಳಿದ್ದರು.

ರೋಹಿತ್‌ ನಿವೃತ್ತಿಯ ವದಂತಿಗಳನ್ನು ತಳ್ಳಿ ಹಾಕಿದ ರಾಜೀವ್‌ ಶುಕ್ಲಾ

ಶುಕ್ರವಾರ ಉತ್ತರ ಪ್ರದೇಶ ಟಿ20 ಲೀಗ್‌ನ ನಾಲ್ಕನೇ ಆವೃತ್ತಿಯ ಮಿನಿ ಹರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ರೋಹಿತ್ ಶರ್ಮಾ ಅವರ ನಿವೃತ್ತಿ ಕುರಿತ ವದಂತಿಗಳಿಗೆ ಮತ್ತೊಮ್ಮೆ ತೆರೆ ಎಳೆದರು.

"ರೋಹಿತ್ ಶರ್ಮಾ ನಮ್ಮ ತಂಡದ ಪ್ರಮುಖ ಸದಸ್ಯರಾಗಿದ್ದು, ಅವರು ಇನ್ನೂ ಭಾರತ ತಂಡದ ಪರ ಆಡುತ್ತಿದ್ದಾರೆ. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಯಾವುದೇ ಅರ್ಥವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಅವರ ನಿವೃತ್ತಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ," ಎಂದು ರಾಜೀವ್ ಶುಕ್ಲಾ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.

IND vs ZIM: ಮಯಾಂಕ್‌ ಯಾದವ್‌, ಅಶೋಕ ಶರ್ಮಾ ಬಗ್ಗೆ ದೊಡ್ಡ ಭವಿಷ್ಯ ನುಡಿದ ಸುನೀಲ್‌ ಜೋಶಿ!

ಗಂಭೀರ್‌-ಗಿಲ್‌ ಜೋಡಿಗೆ ರಾಜೀವ್‌ ಶುಕ್ಲಾ ಬೆಂಬಲ

ರಾಜೀವ್‌ ಶುಕ್ಲಾ ಅವರು ಭಾರತದ ಪ್ರಸ್ತುತ ನಾಯಕತ್ವಕ್ಕೂ ಬೆಂಬಲ ವ್ಯಕ್ತಪಡಿಸಿದ್ದು, ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶುಭಮನ್‌ ಗಿಲ್ ಅವರ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆಯೂ ತಂಡದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

"ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆದರೆ ತಂಡದಲ್ಲಿ ಯಾರು ಉಳಿಯಬೇಕು, ಯಾರು ಹೊರಗೊಳ್ಳಬೇಕು ಎಂಬ ನಿರ್ಧಾರವನ್ನು ಆಯ್ಕೆ ಸಮಿತಿಯೇ ತೆಗೆದುಕೊಳ್ಳುತ್ತದೆ. ಭಾರತೀಯ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪಂದ್ಯಗಳನ್ನು ಗೆಲ್ಲುತ್ತಿದೆ. ಆದ್ದರಿಂದ ಈ ಸಂದರ್ಭದಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ," ಎಂದು ಅವರು ಹೇಳಿದರು.