ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ (M Chinnaswamy Stadium) ಕ್ರೀಡಾಂಗಣಕ್ಕೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಫೈನಲ್ ಹಾಗೂ ಪ್ಲೇಆಫ್ಸ್ ಪಂದ್ಯಗಳ ಆತಿಥ್ಯ ಕೈತಪ್ಪಿದೆ. ಆ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ. ಎಂಎಲ್‌ಎಗಳಿಗೆ ಟಿಕೆಟ್ ವಿತರಣೆ ಹಾಗೂ ಕಳೆದ ವರ್ಷ ಕಾಲ್ತುಳಿತ ಪ್ರಕರಣ ಸೇರಿದಂತೆ ಕೆಲ ಕಾರಣಗಳಿಂದ ಬೆಂಗಳೂರಿಗೆ ಫೈನಲ್ ಪಂದ್ಯದ ಆತಿಥ್ಯ ಕೈತಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivkumar) ಹಾಗೂ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪ್ರತಿಕ್ರಿಯೆ ನೀಡಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, "ಅಹಮದಾಬಾದ್‌ನಲ್ಲಿ ದೊಡ್ಡ ಕ್ರೀಡಾಂಗಣವಿದೆ, ಹೆಚ್ಚು ಜನ ಸೇರುತ್ತಾರೆ ಎಂಬ ಉದ್ದೇಶದಿಂದ ಐಪಿಎಲ್ ಫೈನಲ್ ಪಂದ್ಯವನ್ನು ಸ್ಥಳಾಂತರ ಮಾಡಿರಬೇಕು. ಶಾಸಕರಿಗೆ ಟಿಕೆಟ್ ವಿತರಣೆಗೂ ಅಂತಿಮ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ," ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಐಪಿಎಲ್ ಪ್ಲೇ-ಆಫ್ಸ್ ಆತಿಥ್ಯದಿಂದ ಬೆಂಗಳೂರು ಔಟ್! ಕೆಎಸ್‌ಸಿಎ ನಿರಾಶೆ
ಶಾಸಕರಿಗೆ ಐಪಿಎಲ್ ಟಿಕೆಟ್ ಬೇಡಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದಿಗೆ ಸ್ಥಳಾಂತರಿಸಲಾಗಿದೆ ಎಂಬ ವಿಚಾರವಾಗಿ ಕೇಳಿದಾಗ, “ಬೇರೆ ಕಡೆ ಶೇ 50 ರಷ್ಟು ಮೀಸಲಿರುತ್ತದೆ" ಎಂದರು. ಬಿಸಿಸಿಐ ಟಿಕೆಟ್ ವಿಚಾರಕ್ಕೆ ಸ್ಥಳಾಂತರ ನಿರ್ಧಾರ ಮಾಡಿದ್ದೇವೆ ಎಂದು ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, "ಅವರು ಈ ರೀತಿ ಹೇಳಿಕೆ ನೀಡಲಿ, ನಾನು ಅದಕ್ಕೆ ಸರಿಯಾದ ಉತ್ತರ ಕೊಡುತ್ತೇನೆ," ಎಂದರು.
ಕ್ರೀಡಾಂಗಣ ಅಭಿಮಾನಿಗಳಿಗಾಗಿ, ವಿಐಪಿಗಳಿಗಲ್ಲ: ನಿಖಿಲ್ ಕುಮಾರಸ್ವಾಮಿ
ವಿವಿಐಪಿ ಪಾಸ್‌ಗಳ ಹಪಾಹಪಿ ಹಾಗೂ ಶಾಸಕರ ಉಚಿತ ಟಿಕೆಟ್ ವ್ಯಾಮೋಹದಿಂದಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯ ಅಹಮದಾಬಾದ್ ಪಾಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಮ್ಮ ರಾಜ್ಯದ ನಾಯಕರಿಗೆ 'ಅಭಿನಂದನೆಗಳು'! ಕೇವಲ ತಮ್ಮ ವಿವಿಐಪಿ ಪಾಸ್‌ಗಳ ಹಪಾಹಪಿಯಿಂದಾಗಿ, ನಮ್ಮೂರಿನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಉಡುಗೊರೆಯಾಗಿ ನೀಡಿದ್ದೀರಿ, ಎಂದು ಅವರು ವ್ಯಂಗ್ಯವಾಡಿದರು.
ನಾನು ಅಂದೇ ಹೇಳಿದ್ದೆ, ಇಂದೂ ಅದನ್ನೇ ಪುನರುಚ್ಚರಿಸುತ್ತಿದ್ದೇನೆ, ಕ್ರೀಡಾಂಗಣವಿರುವುದು ಕ್ರಿಕೆಟ್ ಅಭಿಮಾನಿಗಳಿಗಾಗಿ ಹೊರತು ವಿಐಪಿಗಳಿಗಾಗಿ ಅಲ್ಲ. ನಮ್ಮ ಕೆಲವು ಶಾಸಕರ ಉಚಿತ ಟಿಕೆಟ್ ವ್ಯಾಮೋಹದಿಂದಾಗಿ ಇಂದು ಐಪಿಎಲ್ ಫೈನಲ್ ಬೆಂಗಳೂರಿನಿಂದ ಕೈತಪ್ಪಿ ಹೋಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಐಪಿಎಲ್ 2026 ಫೈನಲ್ ಸ್ಥಳಾಂತರ: ಶಾಸಕರ ಟಿಕೆಟ್ ಲಾಬಿ, ಬೆಂಗಳೂರು ಕೈ ತಪ್ಪಿದ ಆತಿಥ್ಯ!
ಬಿಸಿಸಿಐನ ನಿರ್ಧಾರವನ್ನು ಉಲ್ಲೇಖಿಸಿದ ನಿಖಿಲ್ ಕುಮಾರಸ್ವಾಮಿ ಅವರು ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರ ನಮ್ಮ ಸರ್ಕಾರಕ್ಕೆ ಒಂದು ಎಚ್ಚರಿಕೆ ಗಂಟೆಯಾಗಲಿ. ಚಿನ್ನಸ್ವಾಮಿ ಕ್ರೀಡಾಂಗಣವನ್ನು ತಮ್ಮ ವೈಯಕ್ತಿಕ ಟಿಕೆಟ್ ಕೌಂಟರ್ ಮಾಡಿಕೊಂಡವರ ಬೇಜವಾಬ್ದಾರಿ ವರ್ತನೆಯಿಂದಾಗಿ, ಇಂದು ನಾವು ಕೇವಲ ಒಂದು ಪಂದ್ಯವನ್ನಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಘನತೆಯನ್ನೂ ಕಳೆದುಕೊಂಡಿದ್ದೇವೆ, ಎಂದು ಆಕ್ರೋಶ ಹೊರಹಾಕಿದರು.
ಕ್ರಿಕೆಟ್ ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿರುವ ಸರ್ಕಾರದ ನಡೆಯನ್ನು ನಿಖಿಲ್ ಕುಮಾರಸ್ವಾಮಿ ಅವರು ತೀವ್ರವಾಗಿ ಖಂಡಿಸಿದ್ದಾರೆ.