ಐಪಿಎಲ್ ಪ್ಲೇ-ಆಫ್ಸ್ ಆತಿಥ್ಯದಿಂದ ಬೆಂಗಳೂರು ಔಟ್! ಕೆಎಸ್‌ಸಿಎ ನಿರಾಶೆ
ಐಪಿಎಲ್ 2026 ಟೂರ್ನಿಯ ಪ್ಲೇ-ಆಫ್ಸ್ ಪಂದ್ಯಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಿಗದಿದ್ದರೂ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ತನ್ನ ಸಂಘಟನಾ ಸಾಮರ್ಥ್ಯವನ್ನು ಮತ್ತೊಮ್ಮೆ ಒತ್ತಿ ಹೇಳಿದೆ. ಬಿಸಿಸಿಐ ನಿರ್ಧಾರಕ್ಕೆ ಗೌರವ ನೀಡಿ, ಮುಂದಿನ ದಿನಗಳಲ್ಲಿ ಮತ್ತೆ ದೊಡ್ಡ ಪಂದ್ಯಗಳನ್ನು ಆತಿಥ್ಯ ವಹಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ಕೆಎಸ್‌ಸಿಎ ಪ್ರೆಸಿಡೆಂಟ್ ವೆಂಕಟೇಶ್ ಪ್ರಸಾದ್ -
ಬೆಂಗಳೂರು: ಐಪಿಎಲ್ 2026 ಟೂರ್ನಿಯ ಪ್ಲೇ-ಆಫ್ಸ್ ಮತ್ತು ಫೈನಲ್ ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಯೋಜಿಸುವ ಅವಕಾಶ ಕಳೆದುಕೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನಿರಾಶೆ ವ್ಯಕ್ತಪಡಿಸಿದೆ. ಆದರೆ, ಈ ಕುರಿತು ಭಾರತೀಯ ಕ್ರಿಕೆಟ್‌ನಿಯಂತ್ರಣ ಮಂಡಳಿ (ಬಿಸಿಸಿಐ) ತೆಗೆದುಕೊಂಡಿರುವ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಕೆಎಸ್‌ಸಿಎ ಇದೇ ವೇಳೆ ಸ್ಪಷ್ಟಪಡಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಗೆ ಸಿದ್ಧತೆ ಇತ್ತು
ಕೆಎಸ್‌ಸಿಎ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಈ ಸಂಬಂಧ ಬಿಸಿಸಿಐ ಜೊತೆ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ಲೇ-ಆಫ್ಸ್ ಪಂದ್ಯಗಳನ್ನು ಆಯೋಜಿಸಲು ಕೆಎಸ್‌ಸಿಎ ಬಳಿ ಎಲ್ಲ ಸಿದ್ಧತೆ, ಆಸಕ್ತಿ ಹಾಗೂ ಸಾಮರ್ಥ್ಯವಿದೆ ಎಂದು ಅಧಿಕೃತವಾಗಿ ತಿಳಿಸಿದ್ದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ವಿವಾದ; ಸ್ಪಷ್ಟನೆ ನೀಡಿದ ಕೆಎಸ್‌ಸಿಎ
ಬೆಂಗಳೂರಿನ ಪಂದ್ಯಗಳಿಗೆ ಮೆಚ್ಚುಗೆ
ಇಂಡಿಯನ್ ಪ್ರೀಮಿಯರ್ ಲೀಗ್‌ನ 2026ರ ಸೀಸನ್‌ನಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎಲ್ಲ 5 ಪಂದ್ಯಗಳು ಸುಗಮ ನಿರ್ವಹಣೆ, ಉತ್ತಮ ಜನಸಂದಣಿ ನಿಯಂತ್ರಣ ಹಾಗೂ ಪ್ರೇಕ್ಷಕರಿಗೆ ಒಳ್ಳೆಯ ಅನುಭವ ಒದಗಿಸಿದ ಹಿನ್ನೆಲೆಯಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಇದು ದೊಡ್ಡ ಮಟ್ಟದ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಕೆಎಸ್‌ಸಿಎ ಸಾಮರ್ಥ್ಯವನ್ನು ಮತ್ತೊಮ್ಮೆ ದೃಢಪಡಿಸಿದೆ.
ಬಿಸಿಸಿಐಗೆ ವಿವರವಾದ ಪತ್ರ
ಈ ಕುರಿತು ಕೆಎಸ್‌ಸಿಎ ಬಿಸಿಸಿಐಗೆ ವಿವರವಾದ ಪತ್ರವನ್ನು ಕಳುಹಿಸಿತ್ತು. ಅದರಲ್ಲಿ ಆಯೋಜನಾ ವ್ಯವಸ್ಥೆಗಳು, ಲಾಜಿಸ್ಟಿಕ್ಸ್ ಹಾಗೂ ವಿವಿಧ ಪಾಲುದಾರರ (stakeholders) ಅವಶ್ಯಕತೆಗಳನ್ನು ವಿವರವಾಗಿ ಸ್ಪಷ್ಟಪಡಿಸಲಾಗಿತ್ತು. ಈ ಕ್ರಮಗಳು ಐಪಿಎಲ್ ಆರಂಭವಾದ 2008ರಿಂದಲೂ ಅನುಸರಿಸಲಾಗುತ್ತಿದ್ದು, ಈ ಸೀಸನ್‌ನಲ್ಲಿಯೂ ಅದೇ ರೀತಿಯಲ್ಲಿ ಜಾರಿಗೊಂಡಿವೆ ಎಂದು ಕೆಎಸ್‌ಸಿಎ ತಿಳಿಸಿದೆ.
IPL 2026: 'ಇಲ್ಲಿ ಆಡುವುದೇ ಒಂದು ವಿಶೇಷ'; ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಕೊಹ್ಲಿ ಮನದಾಳದ ಮಾತು
ಸ್ಥಳಾಂತರದ ಕಾರಣ ಸ್ಪಷ್ಟವಿಲ್ಲ
ಪ್ಲೇ-ಆಫ್ ಪಂದ್ಯಗಳನ್ನು ಬೇರೆ ಕೇಂದ್ರಗಳಿಗೆ ನೀಡಿರುವ ಕುರಿತು ಬಿಸಿಸಿಐ ಯಾವುದೇ ಅಧಿಕೃತ ಕಾರಣ ತಿಳಿಸಿಲ್ಲ ಎಂದು ಕೆಎಸ್‌ಸಿಎ ಹೇಳಿದೆ. ಆದರೂ, ಬಿಸಿಸಿಐಗೆ ಈ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರವಿದ್ದು, ಅದನ್ನು ನಾವು ಗೌರವಿಸುತ್ತೇವೆ ಎಂದು ಸ್ಪಷ್ಟಪಡಿಸಿದೆ.
ಮುಂದಿನ ದಿನಗಳಿಗೂ ಸಿದ್ಧತೆ
ಕೆಎಸ್‌ಸಿಎ ಮುಂದೆಯೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಯೋಜಿಸಲು ಸಂಪೂರ್ಣ ಸಿದ್ಧವಾಗಿದ್ದು, ಬಿಸಿಸಿಐ, ಫ್ರಾಂಚೈಸಿಗಳು, ಸರ್ಕಾರ ಮತ್ತು ಇತರ ಎಲ್ಲಾ ಪಾಲುದಾರರೊಂದಿಗೆ ಸಹಕಾರ ನೀಡುವುದಾಗಿ ತಿಳಿಸಿದೆ.
ಇನ್ನು ವರದಿಗಳ ಪ್ರಕಾರ ಐಪಿಎಲ್ 2026 ಟೂರ್ನಿಯ ಫೈನಲ್ ಅಹ್ಮದಾಬಾದ್‌ಮ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜನೆ ಆದರೆ, ಕ್ವಾಲಿಫೈಯರ್ 1 ಪಂದ್ಯವು ಹಿಮಾಚಲ ಪ್ರದೇಶದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ವಾಲಿಫೈಯರ್ 2 ಮತ್ತು ಎಲಿಮಿನೇಟರ್ ಪಂದ್ಯಗಳು ಚಂಡೀಗಢ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಸಲು ಬಿಸಿಸಿಐ ಮುಂದಾಗಿದೆ.