ನವದೆಹಲಿ: ಗುಜರಾತ್ ಟೈಟನ್ಸ್ ವಿರುದ್ಧ ಕೇವಲ ಒಂದು ರನ್ ಸೋಲಿನ ಆಘಾತ ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ (DC vs GT Match Highlights) ತಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನಿಂದ ತಪ್ಪಿಸಿಕೊಂಡಿತು. ಈ ಪಂದ್ಯದ ಬಳಿಕ ಮಾತನಾಡಿದ ಡೆಲ್ಲಿ ಕಪ್ತಾನ ಅಕ್ಷರ್ ಪಟೇಲ್ (Axar Patel), ಎರಡೂ ತಂಡಗಳು ಕೂಡ ಉತ್ತಮ ಕ್ರಿಕೆಟ್ ಆಡಿವೆ, ಆದರೆ ನಾವು ಸ್ವಲ್ಪ ಸ್ಮಾರ್ಟ್ ಕ್ರಿಕೆಟ್ ಆಡಬೇಕಾಗಿತ್ತು ಎಂದು ತಿಳಿಸಿದ್ದಾರೆ. ನಿರ್ನಾಯಕ ಸನ್ನಿವೇಶದಲ್ಲಿ ನಾವು ಕೆಲ ವಿಕೆಟ್‌ಗಳನ್ನು ಕಳೆದುಕೊಂಡಿದ್ದೆವು, ಇಲ್ಲವಾದಲ್ಲಿ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದಿದ್ದಾರೆ.
ಬುಧವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಋತುವಿನ 14ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಗುಜರಾತ್ ಟೈಟನ್ಸ್ ವಿರುದ್ಧ ಕೇವಲ ಒಂದು ರನ್ ಅಂತರದ ಸೋಲನ್ನು ಅನುಭವಿಸಿತು. ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಒಟ್ಟು 210 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಪರ ಕೆಎಲ್ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ ಗೆಲುವಿನ ಸನಿಹ ತಂದಿದ್ದರು ಹಾಗೂ ತಂಡಕ್ಕೆ ಕೊನೆಯ ಒಂದು ಎಸೆತದಲ್ಲಿ ಕೇವಲ ಎರಡು ರನ್‌ಗಳು ಬೇಕಿತ್ತು, ಉತ್ತಮ ಬ್ಯಾಟ್ ಮಾಡುತ್ತಿದ್ದ ಡೇವಿಡ್ ಮಿಲ್ಲರ್ ಕೊನೆಯಲ್ಲಿ ಪ್ರಸಿಧ್ ಕೃಷ್ಣ ಬೌಲಿಂಗ್ ಬೀಟ್ ಆದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಶರಣಾಯಿತು.
ರಾಹುಲ್, ಮಿಲ್ಲರ್ ಹೋರಾಟ ವ್ಯರ್ಥ; ಗುಜರಾತ್‌ಗೆ ರೋಚಕ ಒಂದು ರನ್ ಗೆಲುವು
ಡಿಸಿ ಸೋಲಿನ ಬಗ್ಗೆ ಅಕ್ಷರ್ ಪಟೇಲ್ ಏನು ಹೇಳಿದರು?
ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ನಂತರ, ಎರಡೂ ತಂಡಗಳು ಉತ್ತಮ ಕ್ರಿಕೆಟ್ ಆಡಿದವು ಎಂದು ಅಕ್ಷರ್ ಪಟೇಲ್ ಶ್ಲಾಘಿಸಿದರು. ಪ್ರಸಾರಕರೊಂದಿಗಿನ ಪಂದ್ಯದ ನಂತರದ ಸಂದರ್ಶನದಲ್ಲಿ ಅವರು, "ನಾವು ಆಡುತ್ತಿರುವ ರೀತಿಯನ್ನು ಗಮನಿಸಿದರೆ, ಎರಡೂ ತಂಡಗಳು ಉತ್ತಮ - ಅತ್ಯುತ್ತಮ - ಕ್ರಿಕೆಟ್ ಆಡಿದವು ಎಂದು ನಾನು ಭಾವಿಸುತ್ತೇನೆ. ಅಂತಹ ನಿಕಟ ಸ್ಪರ್ಧೆಯಲ್ಲಿ, ನೀವು ಯಾವುದನ್ನಾದರೂ ಬೆರಳು ತೋರಿಸಬಹುದು ಎಂದು ನಾನು ನಂಬುತ್ತೇನೆ. ಆದ್ದರಿಂದ, ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದ್ದಾರೆ.
"ಈ ಹಿಂದೆ ಹೇಳಿದಂತೆ ಇದು ತೀವ್ರ ಪೈಪೋಟಿಯಿಂದ ಕೂಡಿದ್ದ ಚೇಸ್ ಹಾಗೂ ಪಂದ್ಯವಾಗಿತ್ತು. ನೀವು ಇದರಲ್ಲಿ ಸಾಕಷ್ಟು ಅಂಶಗಳನ್ನು ಬೆಟ್ಟು ಮಾಡಿ ತೋರಿಸಬಹುದು. ಆದರೆ, ಈ ಚೇಸಿಂಗ್‌ನಲ್ಲಿ ನಾವು ಬುದ್ದಿವಂತಿಕೆಯ ಕ್ರಿಕೆಟ್ ಆಡಬೇಕಾಗಿತ್ತು ಎಂದು ನಾನು ಭಾವಿಸುತ್ತೇನೆ. ಪಂದ್ಯದ ನಿರ್ಣಾಯಕ ಸನ್ನಿವೇಶದಲ್ಲಿ ನಾವು ಕೆಲ ವಿಕೆಟ್‌ಗಳನ್ನು ಕಲೆದುಕೊಂಡಿದ್ದೇವೆ. ಇದು ಸಂಭವಿಸದೇ ಇದ್ದಿದ್ದರೆ, ನಾವು ಪಂದ್ಯವನ್ನು ಬೇಗ ಮುಗಿಸುತ್ತಿದ್ದೆವು," ಎಂದು ಅಕ್ಷರ್ ಪಟೇಲ್ ತಿಳಿಸಿದ್ದಾರೆ.
IPL 2026: ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತ, ಮತ್ತಷ್ಟು ಪಂದ್ಯಗಳಿಗೆ ಮಿಚೆಲ್ ಸ್ಟಾರ್ಕ್ ಅಲಭ್ಯ!
ಕೆಎಲ್ ರಾಹುಲ್‌ಗೆ ಅಕ್ಷರ್ ಪಟೇಲ್ ಮೆಚ್ಚುಗೆ
ಡಿಸಿ ಪರ 92 ರನ್‌ಗಳ ಇನಿಂಗ್ಸ್ ಆಡಿದ ಕೆಎಲ್ ರಾಹುಲ್‌ಗೆ ಅಕ್ಷರ್ ಪಟೇಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯಿಸಿ, "ರಾಹುಲ್ ಅದ್ಭುತ ಇನಿಂಗ್ಸ್ ಆಡಿದರು. ನಿಮಗೆ ತಿಳಿದಿರುವಂತೆ, ಪವರ್‌ಪ್ಲೇ ಹೇಗೆ ತೆರೆದುಕೊಂಡಿತು ಎಂಬುದನ್ನು ಪರಿಗಣಿಸಿ, ಅದು ಮುಗಿದ ನಂತರವೂ ಅವರು ಆ ಆವೇಗವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಉರುಳುತ್ತಿದ್ದರೂ, ಅವರು ದೃಢವಾಗಿ ನಿಂತು ತಮ್ಮ ತುದಿಯಿಂದ ಆ ವೇಗವನ್ನು ಕಾಯ್ದುಕೊಂಡರು. ಅವರು ರನ್-ರೇಟ್ ಕುಸಿಯಲು ಬಿಡಲಿಲ್ಲ. ಆದ್ದರಿಂದ, ಇದು ನಿಜವಾಗಿಯೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಎಂದು ನಾನು ಪರಿಗಣಿಸುತ್ತೇನೆ. ನಾವು ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ ಮತ್ತು ಮುಂದಿನ ಪಂದ್ಯದಲ್ಲಿ ನಾವು ಅದನ್ನು ನೋಡುತ್ತೇವೆ," ಎಂದು ಹೇಳಿದ್ದಾರೆ.