ವಡೋದರಾ, ಜ.21: ಮುಂಬೈ ಇಂಡಿಯನ್ಸ್(DC vs MI) ವಿರುದ್ಧದ ಪಂದ್ಯದ ವೇಳೆ ಡಬ್ಲ್ಯೂಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್-ಬ್ಯಾಟರ್ ಲಿಜೆಲ್ಲೆ ಲೀ ಅವರಿಗೆ ಬುಧವಾರ ಪಂದ್ಯ ಶುಲ್ಕದ ಶೇಕಡಾ 10 ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ.
"ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳ ದುರುಪಯೋಗಕ್ಕೆ ಸಂಬಂಧಿಸಿದ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಲೀ ಒಪ್ಪಿಕೊಂಡಿದ್ದಾರೆ. ಲೆವೆಲ್ 1 ಉಲ್ಲಂಘನೆಗಳಿಗೆ, ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ" ಎಂದು WPL ಪ್ರಕಟಣೆ ತಿಳಿಸಿದೆ.
ಕ್ಯಾಪಿಟಲ್ಸ್ ತಂಡದ 155 ರನ್ ಗಳ ಗುರಿ ಬೆನ್ನಟ್ಟುವಿಕೆಯ 11 ನೇ ಓವರ್ ನಲ್ಲಿ ಈ ಘಟನೆ ಸಂಭವಿಸಿತು. ಬ್ಯಾಟ್ಸ್ ಮನ್ ಲೀ 46 ರನ್ ಗಳಿಸಿ ಸ್ಟಂಪ್ಡ್ ಔಟ್ ಆದರು. ಮೂರನೇ ಅಂಪೈರ್ ಸುದೀರ್ಘ ಪರಿಶೀಲನೆಯ ನಂತರ ಔಟ್ ಎಂದು ಘೋಷಿಸಿದರು. ಈ ನಿರ್ಧಾರದಿಂದ ಅತೃಪ್ತಿಗೊಂಡ ಲೀ, ಪಂದ್ಯದ ಬಳಿಕ ಮಾತನಾಡುವ ವೇಳೆ "ನೋಡಿ, ಇದು ಕೀಪರ್ ನಿಂದ ಉತ್ತಮ ನಿರ್ಧಾರವಾಗಿತ್ತು. ಆದರೆ ಅದರ ಬಗ್ಗೆ ನಾನು ಹೇಳಲು ಬಯಸಿದ್ದು ಇಷ್ಟೇ" ಎಂದು ಹೇಳಿದರು. ಅಂಪೈರ್ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ ಕಾರಣ ಅವರಿಗೆ ದಂಡ ವಿಧಿಸಲಾಗಿದೆ.
ಪಂದ್ಯದಲ್ಲಿ ನಾಯಕಿ ಜೆಮಿಮಾ ರಾಡ್ರಿಗಸ್ ಅವರ ಅಜೇಯ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಏಳು ವಿಕೆಟ್‌ಗಳಿಂದ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಮಣಿಸಿತು. ಮೊದಲು ಬ್ಯಾಟಿಂಗ್ ನೆಡೆಸಿದ ಮುಂಬೈ, ನಥಾಲಿಯಾ ಶಿವರ್ ಬ್ರಂಟ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಜೊತೆಯಾಟದ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 154 ರನ್ ಗಳಿಸಿತು. ಡೆಲ್ಲಿ ತಂಡವು 19 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು. ಹರ್ಮನ್ ಬಳಗವು ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಬೇಕಾಯಿತು.
ಸಂಕ್ಷಿಪ್ತ ಸ್ಕೋರು
ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 5ಕ್ಕೆ154 (ನಾಟ್ ಶಿವರ್ ಬ್ರಂಟ್ ಔಟಾಗದೇ 65, ಹರ್ಮನ್‌ಪ್ರೀತ್ ಕೌರ್ 41, ನಿಕೊಲಾ ಕ್ಯಾರಿ 12, ಶ್ರೀಚರಣಿ 33ಕ್ಕೆ3). ಡೆಲ್ಲಿ ಕ್ಯಾಪಿಟಲ್ಸ್: 19 ಓವರ್‌ಗಳಲ್ಲಿ 3 ವಿಕೆಟ್‌ಗೆ 155(ಜೆಮಿಮಾ ರಾಡ್ರಿಗಸ್ ಔಟಾಗದೇ 51, ಜೆಲ್ ಲೀ 46, ಶಫಾಲಿ ವರ್ಮಾ 29; ವೈಷ್ಣವಿ ಶರ್ಮಾ 20ಕ್ಕೆ1).