ಉಕ್ರೇನ್, ಅ.19: ನಾಲ್ಕು ವರ್ಷಗಳ ವೈವಾಹಿಕ ಜೀವನದ ನಂತರ, ಟೆನಿಸ್ ಆಟಗಾರ್ತಿ ಎಲಿನಾ ಸ್ವಿಟೊಲಿನಾ ಅವರು ಗೇಲ್ ಮಾನ್ಫಿಲ್ಸ್ ಅವರಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧವು ತಮ್ಮ ಮೇಲೆ ವೈಯಕ್ತಿಕವಾಗಿ ತೀವ್ರ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದು, ತಮ್ಮ ಮಗಳು ಸ್ಕಾಯ್ ಅವರ ಯೋಗಕ್ಷೇಮವೇ ತಮ್ಮ ಮೊದಲ ಆದ್ಯತೆಯಾಗಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಭಾವನಾತ್ಮಕವಾಗಿ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಅವರು, ಗೇಲ್ ಮಾನ್ಫಿಲ್ಸ್ ಅವರೊಂದಿಗಿನ ತಮ್ಮ ವಿವಾಹ ಜೀವನವು ಅಂತ್ಯಗೊಳ್ಳುತ್ತಿದೆ. ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧ, ತಾವು ಎದುರಿಸುತ್ತಿರುವ ವೈಯಕ್ತಿಕ ಸಂಕಷ್ಟಗಳ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಪತ್ನಿ, ತಾಯಿ ಮತ್ತು ಕ್ರೀಡಾಪಟುವಾಗಿ ತಾವು ನಿರ್ವಹಿಸಿದ ಪಾತ್ರಗಳಿಂದ ಹೊರಬಂದು, ಈಗ ಮತ್ತೆ ತಮ್ಮನ್ನು ತಾವು ಕಂಡುಕೊಳ್ಳುವ ಅಗತ್ಯವಿದೆ ಎಂದು ಟೆನ್ನಿಸ್ ತಾರೆ ತಿಳಿಸಿದ್ದಾರೆ.
ಸ್ವಿಟೊಲಿನಾ ಮತ್ತು ಮಾನ್ಫಿಲ್ಸ್ 2021ರ ಜುಲೈನಲ್ಲಿ ವಿವಾಹವಾದರು. ಇವರಿಗೆ 2022ರ ಅಕ್ಟೋಬರ್ನಲ್ಲಿ ಜನಿಸಿದ 'ಸ್ಕಾ' ಎಂಬ ಮಗಳಿದ್ದಾಳೆ. ಇನ್ಸ್ಟಾಗ್ರಾಮ್ ಪೋಸ್ಟ್ ಒಂದರ ಮೂಲಕ ತಾವು ಬೇರ್ಪಡುತ್ತಿರುವುದಾಗಿ ಘೋಷಿಸಿದ ಸ್ವಿಟೊಲಿನಾ, ಯುದ್ಧವು ತನ್ನ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಬೀರಿದ ಪರಿಣಾಮದ ಬಗ್ಗೆ ಮಾತನಾಡಿದರು. ಅಲ್ಲದೆ, ಕಠಿಣ ಸಮಯಗಳಲ್ಲಿ ತಮಗೆ ಬೆಂಬಲವಾಗಿ ನಿಂತಿದ್ದಕ್ಕಾಗಿ ಮಾನ್ಫಿಲ್ಸ್ಗೆ ಧನ್ಯವಾದ ಅರ್ಪಿಸಿದರು.
ಏಷ್ಯನ್ ಪ್ಯಾರಾ ಗೇಮ್ಸ್: ಜೂಡೋದಲ್ಲಿ ಪದಕ ಖಚಿತಪಡಿಸಿದ ಕೋಕಿಲಾ
"ಉಕ್ರೇನ್ ನನಗೆ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಈ ಯುದ್ಧವು ನನ್ನ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬುದರ ಬಗ್ಗೆ ನಾನು ಬಹಳ ಅಪರೂಪವಾಗಿಯೇ ಮಾತನಾಡಿದ್ದೇನೆ. ಇದನ್ನು ಹಂಚಿಕೊಳ್ಳುವುದು ನನಗೆ ಅತ್ಯಂತ ಕಷ್ಟಕರವಾದ ಸಂಗತಿಯಾಗಿದೆ"
"ಮಾನ್ಫಿಲ್ಸ್ ಇದೆಲ್ಲವನ್ನೂ ನೋಡಿದನು. ಅವನು ನನ್ನ ಕೈಯನ್ನು ಎಂದಿಗೂ ಬಿಡಲಿಲ್ಲ. ನಾವಿಬ್ಬರೂ ನಮ್ಮಲ್ಲಿದ್ದ ಎಲ್ಲ ಶಕ್ತಿಯನ್ನೂ ಬಳಸಿ, ದೀರ್ಘಕಾಲದವರೆಗೆ ಇದರ ವಿರುದ್ಧ ಹೋರಾಡಿದೆವು. ಆದರೆ, ಕೆಲವು ಹೋರಾಟಗಳು ನಮ್ಮ ಮನಸ್ಸಿನ ಆಳದಲ್ಲಿ ನಡೆಯುತ್ತವೆ. ಅಂತಹ ಹೋರಾಟಗಳಲ್ಲಿ ಬೇರೊಬ್ಬರ ಎಷ್ಟೇ ಪ್ರೀತಿಯಿದ್ದರೂ, ಅದನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ನಮ್ಮ ವೈವಾಹಿಕ ಜೀವನ ಕೊನೆಗೊಳ್ಳಲು ನಾವಿಬ್ಬರೂ ಕಾರಣರಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಇಲ್ಲಿ ಯಾರನ್ನೂ ದೂಷಿಸಬೇಕಿಲ್ಲ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಇಲ್ಲಿರುವುದು ಪರಸ್ಪರ ಆಳವಾಗಿ ಪ್ರೀತಿಸಿದ ಇಬ್ಬರು ವ್ಯಕ್ತಿಗಳು ಮತ್ತು ಹೊಸ ರೂಪ ಪಡೆಯುತ್ತಿರುವ ಒಂದು ಕಥೆ ಅಷ್ಟೇ. ಮಗಳು ನಮಗೆ ಯಾವಾಗಲೂ ಮೊದಲ ಆದ್ಯತೆ. ನಮ್ಮ ವೈವಾಹಿಕ ಜೀವನ ಕೊನೆಗೊಳ್ಳುತ್ತಿರಬಹುದು, ಆದರೆ ನಮ್ಮ ಕುಟುಂಬವಲ್ಲ. ನಾವು ಯಾವಾಗಲೂ ಅವಳ ಪೋಷಕರಾಗಿಯೇ ಇರುತ್ತೇವೆ. ಅವಳ ಜೀವನದ ಪ್ರತಿಯೊಂದು ಹಂತದಲ್ಲೂ ನಾವು ಒಟ್ಟಿಗೆ, ಅವಳ ಜೊತೆಯಲ್ಲೇ ಇರುತ್ತೇವೆ” ಎಂದು ಸ್ವಿಟೊಲಿನಾ ಬರೆದುಕೊಂಡಿದ್ದಾರೆ.