ಲಾಸ್ ಏಂಜಲೀಸ್, ಜೂ.16: ಕಳೆದ 107 ದಿನಗಳಿಂದ ಮಧ್ಯಪ್ರಾಚ್ಯ ಸೇರಿದಂತೆ ಇಡೀ ಜಗತ್ತಿನಲ್ಲಿ ತೈಲ ಅಭಾವ, ಬೆಲೆ ಏರಿಕೆ ಸೇರಿದಂತೆ ನಾನಾ ರೀತಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಅಮೆರಿಕ-ಇರಾನ್ ನಡುವಿನ ಭೀಕರ ಸಮರ ಕೊನೆಗೊಳ್ಳುತ್ತಿದ್ದಂತೆ ಲಾಸ್ ಏಂಜಲೀಸ್‌ನ ಸೋಫಿ ಕ್ರೀಡಾಂಗಣದಲ್ಲಿ ನಡೆದ 2026 ರ ಫಿಫಾ ವಿಶ್ವಕಪ್(FIFA World Cup 2026)ನ ತನ್ನ ಮೊದಲ ಗ್ರೂಪ್ ಜಿ ಪಂದ್ಯದಲ್ಲಿ ಇರಾನ್ ತಂಡ ನ್ಯೂಜಿಲೆಂಡ್ ವಿರುದ್ಧ 2-2 ಅಂತರದ ಡ್ರಾ ಸಾಧಿಸಿತು. ಅಮೆರಿಕ ಮತ್ತು ಇರಾನ್ ನಡುವೆ ಪ್ರಾಥಮಿಕ ಶಾಂತಿ ಒಪ್ಪಂದವನ್ನು ಘೋಷಿಸಿದ 24 ಗಂಟೆಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಈ ಪಂದ್ಯ ನಡೆಯಿತು.
ಪಂದ್ಯದಲ್ಲಿ ನ್ಯೂಜಿಲೆಂಡ್ ಅದ್ಭುತ ಆರಂಭ ಪಡೆದು ಏಳನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿತು. ಕ್ರಿಸ್ ವುಡ್ ಗೋಲು ಗಳಿಸಿದರು. ಇರಾನ್ ಕೂಡ ಮುನ್ನುಗ್ಗಿ 32ನೇ ನಿಮಿಷದಲ್ಲಿ ರಾಮಿನ್ ರೆಝೇಯನ್ ಬಾರಿಸಿದ ಗೋಲಿನ ನೆರವಿನಿಂದ ಸಮಬಲ ಸಾಧಿಸಿತು.
ಬಲಿಷ್ಠ ಸ್ಪೇನ್‌ಗೆ ಶಾಕ್ ನೀಡಿ ಡ್ರಾ ಸಾಧಿಸಿದ ಕೇಪ್ ವರ್ಡೆ!
54ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸುವ ಮೂಲಕ ಕಿವೀಸ್ ಮತ್ತೆ ಮುನ್ನಡೆ ಸಾಧಿಸಿತು. ವುಡ್ ಮತ್ತೊಮ್ಮೆ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಆದರೆ, 10 ನಿಮಿಷಗಳ ನಂತರ ಇರಾನ್ ಎರಡನೇ ಬಾರಿಗೆ ಪ್ರತಿದಾಳಿ ನಡೆಸಿತು. ಮೊಹಮ್ಮದ್ ಮೊಹೆಬ್ಬಿ ಹೆಡರ್ ಮೂಲಕ ಗೋಲು ಬಾರಿಸಿ 2-2 ಅಂತರವನ್ನು ಸಾಧಿಸಿದರು.
ಎರಡೂ ತಂಡಗಳು ಗೆಲುವಿಗೆ ತೀವ್ರ ಪೈಪೋಟಿ ನಡೆಸಿತು. ಆದರೆ ಪಂದ್ಯವು ಸಮಬಲದಲ್ಲಿ ಕೊನೆಗೊಂಡ ಕಾರಣ ಯಾವುದೇ ತಂಡಕ್ಕೂ ನಿರ್ಣಾಯಕ ಗೋಲು ಸಿಗಲಿಲ್ಲ. ಬೆಲ್ಜಿಯಂ ಮತ್ತು ಈಜಿಪ್ಟ್ ತಂಡಗಳು 1-1 ಗೋಲುಗಳಿಂದ ಡ್ರಾ ಮಾಡಿಕೊಂಡ ನಂತರ, ಈ ಫಲಿತಾಂಶವು ಗ್ರೂಪ್ ಜಿ ಅನ್ನು ಸಮತೋಲನದಲ್ಲಿರಿಸಿದೆ.
ಇರಾನ್ ತಂಡವು ಭಾನುವಾರ ನಡೆಯಲಿರುವ ತನ್ನ ಮುಂದಿನ ಗುಂಪು ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಲಾಸ್ ಏಂಜಲೀಸ್‌ನಲ್ಲಿ ಈ ಪಂದ್ಯ ನಡೆಯಲಿದೆ. ಆದರೆ ನ್ಯೂಜಿಲೆಂಡ್ ಈಜಿಪ್ಟ್ ತಂಡವನ್ನು ಎದುರಿಸಲು ವ್ಯಾಂಕೋವರ್‌ಗೆ ಪ್ರಯಾಣಿಸಲಿದೆ.
ಅತಿದೊಡ್ಡ ಇರಾನಿನ ಸಮುದಾಯಕ್ಕೆ ನೆಲೆಯಾಗಿರುವ ಲಾಸ್ ಏಂಜಲೀಸ್‌ನಲ್ಲಿ, ಪಂದ್ಯದ ವೇಳೆ ಕ್ರೀಡಾಂಗಣದ ಹೊರಗೆ, 300 ರಿಂದ 500 ಪ್ರತಿಭಟನಾಕಾರರು ಸರ್ಕಾರಿ ವಿರೋಧಿ ಬ್ಯಾನರ್‌ಗಳು ಮತ್ತು ಇರಾನ್ ಧ್ವಜಗಳನ್ನು ಹಿಡಿದು ಜಮಾಯಿಸಿದರು. ಅನಧಿಕೃತ ಧ್ವಜಗಳನ್ನು ಕ್ರೀಡಾಂಗಣಕ್ಕೆ ತಂದರೆ ಅಥವಾ ರಾಜಕೀಯ ಘೋಷಣೆಗಳನ್ನು ಕೂಗಿದರೆ ಪಂದ್ಯಗಳನ್ನು ನಿಲ್ಲಿಸುವುದಾಗಿ ಇರಾನ್ ಬೆದರಿಕೆ ಹಾಕಿತ್ತು. ಯಾವುದೇ ಸಮಸ್ಯೆಯಿಲ್ಲದೆ ಪಂದ್ಯವು ಯೋಜಿಸಿದಂತೆ ನಡೆಯಿತು.