ಕೋಲ್ಕತಾ, ಮಾ.5: ಬುಧವಾರ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್(T20 World Cup 2026) ಸೆಮಿಫೈನಲ್ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿ 33 ಎಸೆತಕ್ಕೆ ಶತಕ ಪೂರ್ಣಗೊಳಿಸಿದ್ದ ನ್ಯೂಜಿಲ್ಯಾಂಡ್ ಬ್ಯಾಟರ್ ಫಿನ್ ಆ್ಯಲೆನ್(Finn Allen Creates History) ಹಲವು ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಈ ಪೈಕಿ ಟಿ20 ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯಗಳಲ್ಲಿ ಗರಿಷ್ಠ ಮೊತ್ತ ಕಲೆಹಾಕಿದ ವಿಶ್ವದ ಮೊದಲ ಆಟಗಾರ ಎನಿಸಿದರು.
ಇದುವರೆಗೂ ಈ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ತಿಲಕರತ್ನೆ ದಿಲ್ಶಾನ್ ಅವರ ಹೆಸರಿನಲ್ಲಿತ್ತು, ಅವರು 2009ರ ಟೂರ್ನಿಯ ಸೆಮಿಫೈನಲ್‌ನಲ್ಲಿ ಅಜೇಯ 96 ರನ್ ಗಳಿಸಿದ್ದರು. ಭಾರತದ ವಿರಾಟ್ ಕೊಹ್ಲಿ ಅವರು, 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸೆಮಿ ಹಣಾಹಣಿಯಲ್ಲಿ ಅಜೇಯ 89 ರನ್ ಗಳಿಸಿದ್ದರು. ಇದೀಗ ದಾಖಲೆ ಆ್ಯಲೆನ್(100*) ಹೆಸರಿಗೆ ಸೇರಿದೆ.
33 ಎಸೆತಕ್ಕೆ ಶತಕ ಪೂರ್ಣಗೊಳಿಸಿದ ಆ್ಯಲೆನ್ ಟಿ20 ವಿಶ್ವಕಪ್‌ನಲ್ಲೇ ಅತಿ ವೇಗದ ಶತಕ ಬಾರಿಸಿದ ಆಟಗಾರನಾದರು. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಿಸ್ ಗೇಲ್ 47 ಎಸೆತಕ್ಕೆ ಶತಕ ಬಾರಿಸಿದ್ದು ಈವರೆಗೆ ದಾಖಲೆಯಾಗಿತ್ತು. ಇನ್ನು, ಅಂ.ರಾ. ಟಿ20ಯಲ್ಲಿ ಕಿವೀಸ್ ಪರ ಈವರೆಗೂ ಅತಿ ವೇಗದ ಶತಕದ ದಾಖಲೆ ಇದ್ದಿದ್ದು ಗ್ಲೆನ್ ಫಿಲಿಪ್ಸ್ ಹೆಸರಿನಲ್ಲಿ. ಅವರು 2020ರಲ್ಲಿ ವಿಂಡೀಸ್ ವಿರುದ್ಧ 46 ಎಸೆತಕ್ಕೆ ಶತಕ ಸಿಡಿಸಿದ್ದರು.
ಇಂದಿನ ಇಂಗ್ಲೆಂಡ್ ವಿರುದ್ಧದ ಸೆಮಿ ಪಂದ್ಯದಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಬುಮ್ರಾ
ಟಿ20 ವಿಶ್ವಕಪ್‌ನಲ್ಲಿ ಸಿಡಿಸಿದ ನ್ಯೂಜಿಲೆಂಡ್‌ನ ಮೂರನೇ ಆಟಗಾರ ಎನಿಸಿದರು. ಇದಕ್ಕೂ ಮೊದಲು ಬ್ರೆಂಡನ್ ಮೆಕಲಂ (2012ರಲ್ಲಿ ಬಾಂಗ್ಲಾದೇಶ ವಿರುದ್ಧ 123 ರನ್) ಹಾಗೂ ಗ್ಲೆನ್ ಫಿಲಿಪ್ಸ್ (2022ರಲ್ಲಿ ಶ್ರೀಲಂಕಾ ವಿರುದ್ಧ 104 ರನ್) ಈ ಸಾಧನೆ ಮಾಡಿದ್ದರು.
ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ದ.ಆಫ್ರಿಕಾ ಆರಂಭಿಕ ಕುಸಿತದ ಹೊರತಾಗಿಯೂ 8 ವಿಕೆಟ್‌ಗೆ 169 ರನ್ ಗಳಿಸಿತು. 170 ರನ್‌ಗಳ ಸಾಧಾರಣ ಗುರಿಯನ್ನು ಎದುರಿಸಿದ ನ್ಯೂಜಿಲೆಂಡ್ ಆ ಮೊತ್ತ ಲೆಕ್ಕಕ್ಕೇ ಇಲ್ಲದಂತೆ ಆಡಿ ಕೇವಲ 12.5 ಓವರುಗಳಲ್ಲಿ 1 ವಿಕೆಟ್‌ಗೆ 173 ರನ್ ಹೊಡೆಯಿತು.
ಏಕಪಕ್ಷೀಯವಾಗಿದ್ದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್‌ಗಳು ಶಿಸ್ತಿನ ದಾಳಿಯೊಡನೆ ಹರಿಣಗಳ ಪಡೆಯನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು. ಬಳಿಕ ಬ್ಯಾಟರ್‌ಗಳು ಪ್ರಾಬಲ್ಯ ಮೆರೆದರು. 9 ವಿಕೆಟ್‌ಗಳಿಂದ ಗೆದ್ದ ಕಿವೀಸ್ ಪಡೆ ಫೈನಲ್‌ಗೆ ಲಗ್ಗೆಯಿಟ್ಟಿತು .