ನವದೆಹಲಿ: ಇಂಗ್ಲೆಂಡ್ ಟೆಸ್ಟ್ ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಕೋಚ್ ಗೌತಮ್ ಗಂಭೀರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ʼನಾನು ಆಯ್ಕೆದಾರನಲ್ಲʼ ಎಂದು ಹೇಳಿದ್ದಾರೆ. ಕಳೆದ ವಾರ 18 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿತ್ತು. ಬಹುತೇಕ ಯುವ ಆಟಗಾರರೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶುಭಮನ್ ಗಿಲ್ ತಂಡ ಮುನ್ನಡೆಸಲಿದರೆ, ರಿಷಭ್ ಪಂತ್ ಉಪನಾಯಕರಾಗಿದ್ದಾರೆ.
ಕೋಚ್ ಗಂಭೀರ್ ಮತ್ತು ನಾಯಕ ಗಿಲ್ ಮಧ್ಯೆ ತಂಡ ಆಯ್ಕೆಯ ಬಗ್ಗೆ ಮನಸ್ತಾಪ ಇದೆ ಎನ್ನಲಾಗಿದೆ. ಗಂಭೀರ್‌ಗೆ ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಒಲವಿತ್ತು. ಆದರೆ ಸಾಯಿ ಸುದರ್ಶನ್ ಆಯ್ಕೆಯಿಂದ ಸಾಧ್ಯವಾದಲಿಲ್ಲ. ಹೀಗಾಗಿ ಗಂಭೀರ್ ಅವರು ಗಿಲ್ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸಾಯಿ ಸುದರ್ಶನ್‌ಗೆ ಸ್ಥಾನ ನೀಡುವುದಕ್ಕೆ ಗಂಭೀರ್ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಗಿಲ್ ತಂಡ ಪ್ರಕಟಕ್ಕೂ ಮುನ್ನ ಗೌತಮ್ ಗಂಭೀರ್‌ಗೆ ಕರೆ ಮಾಡಿ ಸಾಯಿ ಸುದರ್ಶನ್‌ಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು ಎನ್ನಲಾಗಿದೆ. ಇದೀಗ ಅವರು ಗಂಭೀರ್ ʼನಾನು ಆಯ್ಕೆದಾರನಲ್ಲʼ ಎಂದು ಹೇಳಿರುವುದನ್ನು ನೋಡುವಾಗ ಅವರು ಅಯ್ಯರ್‌ಗೆ ಸ್ಥಾನ ನೀಡದ ಬಗ್ಗೆ ಮುನಿಸಿಕೊಂಡಿರುವುದು ಖಚಿತ ಎನ್ನುವಂತಿದೆ.
ಇದೇ ವೇಳೆ ಐಪಿಎಲ್ ಪ್ರಶಸ್ತಿ ಪಂದ್ಯಕ್ಕೆ ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದು ನಿಜಕ್ಕೂ ಖುಷಿಯ ವಿಚಾರ. ನಾವು ಕೆಲವೊಮ್ಮೆ ಬಿಸಿಸಿಐ ಮತ್ತು ಅದರ ನಿರ್ಧಾರಗಳ ಕುರಿತಂತೆ ಟೀಕಿಸುತ್ತಿರುತ್ತೇವೆ. ಈಗ ಅದು ಕೈಗೊಂಡಿರುವ ನಿರ್ಧಾರ ಹೆಮ್ಮೆಪಡುವಂತೆ ಮಾಡಿದೆ ಎಂದು ಗಂಭೀರ್ ಹೇಳಿದ್ದಾರೆ.
ಆಪರೇಷನ್ ಸಿಂದೂರ ಯಶಸ್ಸಿಗಾಗಿ ಅಭಿನಂದಿಸಲು, ಭೂಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಮತ್ತು ವಾಯುಪಡೆ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಹಾಗೂ ಕೆಲ ಹಿರಿಯ ಅಧಿಕಾರಿಗಳನ್ನು ಐಪಿಎಲ್ ಫೈನಲ್ ಪಂದ್ಯಕ್ಕೆ ಆಹ್ವಾನಿಸಲಾಗಿದೆ.