ಡಲ್ಲಾಸ್, ಜೂ.15: ಕಳೆದ ಎರಡು ಫಿಫಾ ವಿಶ್ವಕಪ್(FIFA World Cup 2026) ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿದ್ದ 4 ಬಾರಿಯ ಚಾಂಪಿಯನ್ ಜರ್ಮನಿ ತಂಡ ಈ ಬಾರಿ ಗೋಲುಗಳ ಸುರಿಮಳೆಗೈದು ಭರ್ಜರಿ ಗೆಲುವಿನ ಶುಭಾರಂಭ ಮಾಡಿದೆ. ಸೋಮವಾರ ನಡೆದ ಪಂದ್ಯದಲ್ಲಿ ಕುರಾಕಾವೊ ತಂಡವನ್ನು 7-1 ಅಂತರದಿಂದ ಪರಾಭವಗೊಳಿಸಿತು.
ಜರ್ಮನಿ ಪರ ಕೈ ಹ್ಯಾವರ್ಟ್ಜ್ ಅವರ ಎರಡು ಗೋಲುಗಳು ಮತ್ತು ಫೆಲಿಕ್ಸ್ ನ್ಮೆಚಾ, ನಿಕೊ ಶ್ಲೋಟರ್ಬೆಕ್, ಜಮಾಲ್ ಮುಸಿಯಾಲಾ, ನಥಾನಿಯಲ್ ಬ್ರೌನ್ ಮತ್ತು ಡೆನಿಜ್ ಉಂಡಾವ್ ಗೋಲು ಬಾರಿಸಿದ ಆಟಗಾರರು.
ಪಾಕ್ ವಿರುದ್ಧ 5 ವಿಕೆಟ್ ಕಿತ್ತು ಹಲವು ದಾಖಲೆ ಬರೆದ ದೀಪ್ತಿ ಶರ್ಮಾ
ಬಲಿಷ್ಠ ಜರ್ಮನ್ ತಂಡದ ವಿರುದ್ಧ ಗೆಲ್ಲುವುದು ಕಠಿಣ ಸವಾಲು ಎಂದು ಕುರಾಕಾವೊ ತಂಡಕ್ಕೆ ಮೊದಲೇ ತಿಳಿದಿದ್ದರೂ ಕೂಡ ಮೊದಲಾರ್ಧದಲ್ಲಿ ತೀವ್ರ ಪೈಪೋಟಿ ನೀಡಿತು. ಲಿವಾನೊ ಕೊಮೆನೆನ್ಸಿಯಾ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಸರಿ ಸುಮಾರು ಮೊದಲ ಅವಧಿಯ ಆಟ ಮುಕ್ತಾಯದವರೆಗೂ ಸಮಬಲ ಸಾಧಿಸಿತು. ಆದರೆ ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿ ಆಟವಾಡಿದ ಜರ್ಮನಿ ಆಟಗಾರರು ಗೋಲುಗಳ ಮಳೆಯನ್ನೇ ಸುರಿಸಿದರು.
ಕೇವಲ 158,000 ಜನಸಂಖ್ಯೆಯನ್ನು ಹೊಂದಿರುವ ಕುರಾಕಾವೊ ರಾಷ್ಟ್ರವು ವಿಶ್ವಕಪ್‌ನಲ್ಲಿ ಆಡುತ್ತಿರುವುದೇ ದೊಡ್ಡ ಸಾಧನೆ. 2018 ರಲ್ಲಿ ಮೆಕ್ಸಿಕೊ ಮತ್ತು 2022 ರಲ್ಲಿ ಜಪಾನ್ ವಿರುದ್ಧ ತಮ್ಮ ಆರಂಭಿಕ ಪಂದ್ಯದಲ್ಲಿ ಸೋತಿದ್ದ ಜರ್ಮನಿಯು ಈ ಬಾರಿ ಗೆಲುವಿನ ಶುಭಾರಂಭ ಕಂಡಿದೆ.
ಜಪಾನ್–ನೆದರ್‌ಲೆಂಡ್ಸ್ ಪಂದ್ಯ ಡ್ರಾ
ದಿನದ ಮತ್ತೊಂದು ಪಂದ್ಯವಾದ ಜಪಾನ್–ನೆದರ್‌ಲೆಂಡ್ಸ್ ನಡುವಣ ಮುಖಾಮುಖಿ 2-2 ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು. ತೀವ್ರ ಪೈಪೋಟಿಯಿಂದ ಸಾಗಿದ ಈ ಪಂದ್ಯದಲ್ಲಿ ಮೊದಲ ಗೋಲು ದಾಖಲಾದದ್ದು 50ನೇ ನಿಮಿಷದಲ್ಲಿ. ನೆದರ್‌ಲೆಂಡ್ಸ್ ತಂಡದ ವಿರ್ಜಿಲ್ ವ್ಯಾನ್ ಡಿಜ್ ಆ ಗೋಲನ್ನು ಬಾರಿಸಿದರು. ಇದೇ ವೇಳೆ ತಿರುಗಿಬಿದ್ದ ಜಪಾನ್ ಕೇವಲ 7 ನಿಮಿಷದ ಅಂತರದಲ್ಲಿ ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಕೀಟೊ ಮಕಮುರಾ ಅವರು 57ನೇ ನಿಮಿಷದಲ್ಲಿ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು.
ಇದಾದ 64ನೇ ನಿಮಿಷದಲ್ಲಿ ಕ್ರಿಸೆನ್ಸಿಯೊ ಸಮ್ಮರ್‌ವಿಲ್ಲೆ ಅವರು ಗೋಲ ಬಾರಿಸಿ, ನೆದರ್‌ಲೆಂಡ್ಸ್‌ಗೆ 2–1 ಅಂತರದ ಮುನ್ನಡೆ ತಂದುಕೊಟ್ಟರು. ಆದರೆ, ಸೆಣಸಾಟ ಮುಗಿಯಲು ಕೆಲವೇ ನಿಮಿಷಗಳಿದ್ದಾಗ ಜಪಾನ್‌ನ ಡೈಚಿ ಕಮಡ (88) ಗೋಲು ಬಾರಿಸಿದರು. ಅಂತಿಮವಾಗಿ ಹೋರಾಟ ಸಮಗೊಂಡಿತು.