ಅಹಮದಾಬಾದ್, ಮೇ 3: ಟೇಬಲ್ ಟಾಪರ್ ಪಂಜಾಬ್ ಕಿಂಗ್ಸ್(PBKS vs GT) ತಂಡ ಹಾಲಿ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನಲ್ಲಿ ಎರಡನೇ ಸೋಲು ಕಂಡಿದೆ. ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 4 ವಿಕೆಟ್ ಅಂತರದ ಸೋಲು ಕಂಡಿತು. ಗೆಲುವು ಕಂಡ ಗುಜರಾತ್, ಅಂಕಪಟ್ಟಿಯಲ್ಲಿ ತನ್ನ ಅಂಕವನ್ನು 12ಕ್ಕೆ ವಿಸ್ತರಿಸಿತು.
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡ ಬೌಲರ್‌ಗಳು ಪಂಜಾಬ್ ಕಿಂಗ್ಸ್ ತಂಡವನ್ನು 163ರನ್‌ಗಳಿಗೆ ನಿಯಂತ್ರಿಸಿದರು. ಬಳಿಕ ಸ್ಪರ್ಧಾತ್ಮಕ ಮೊತ್ತವನ್ನು 19.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಚೇಸಿಂಗ್ ವೇಳೆ ಗುಜರಾತ್‌ಗೆ ಆರಂಭಿಕ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಅರ್ಧಶತಕ ಬಾರಿಸಿ ನೆರವಾದರು. ಆದರೆ ಇವರ ಜತೆಗಾರ ಶುಭಮನ್ ಗಿಲ್(5) ಬೇಗನೆ ವಿಕೆಟ್ ಕಳೆದುಕೊಂಡರು. ಜಾಸ್ ಬಟ್ಲರ್ 26 ರನ್ ಬಾರಿಸಿದರು. ಸಾಯಿ ಸುದರ್ಶನ್ ವಿಕೆಟ್ ಬಿದ್ದ ಬೆನ್ನಲ್ಲೇ ಇಂಪ್ಯಾಕ್ಟ್ ಆಟಗಾರ ರಾಹುಲ್ ತೆವಾಟಿಯ(2), ಜೇಸನ್ ಹೋಲ್ಡರ್(5) ವಿಕೆಟ್ ಕೂಡ ಪತನಗೊಂಡಿತು. ಈ ವೇಳೆ ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ ವಾಷಿಂಗ್ಟನ್ ಸುಂದರ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಅಂತಿಮ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 6 ಎಸೆತದಲ್ಲಿ 11 ರನ್ ತೆಗೆಯುವ ಸವಾಲು ಎದುರಾಯಿತು. ಮಾರ್ಕಸ್ ಸ್ಟೋಯಿನಿಸ್ ಎಸೆದ ಈ ಓವರ್‌ನ ಮೊದಲ ಎಸೆತ ವೈಡ್ ಆಯಿತು. ಮುಂದಿನ ಎಸೆತದಲ್ಲಿ ಅರ್ಶದ್ ಖಾನ್ ಬೌಂಡರಿ ಬಾರಿಸಿ ಆತಂಕವನ್ನು ಕಡಿಮೆ ಮಾಡಿದರು. ಆ ಬಳಿಕ ಡಬಲ್ ಮತ್ತು ಸಿಂಗಲ್ ತೆಗೆದರು. ಒಂದು ಎಸೆತ ಡಾಟ್ ಆಯಿತು. ಅಂತಿಮ ಎರಡು ಎಸೆತದಲ್ಲಿ 3 ರನ್ ಬೇಕಿದ್ದಾಗ ವಾಷಿಂಗ್ಟನ್ ಸುಂದರ್ ಸಿಕ್ಸರ್ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಅಜೇಯರಾಗಿ ಉಳಿದ ಸುಂದರ್ 23 ಎಸೆತಗಳಲ್ಲಿ 40 ರನ್ ಬಾರಿಸಿದರು. ಪಂಜಾಬ್ ಪರ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಮತ್ತು ಅರ್ಶ್‌ದೀಪ್ ಸಿಂಗ್ ತಲಾ 2 ವಿಕೆಟ್ ಕಿತ್ತರು.
ಪಂಜಾಬ್‌ಗೆ ನೆರವಾದ ಶೆಡ್ಗೆ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡಕ್ಕೆ ವೇಗಿ ಮೊಹಮ್ಮದ್ ಸಿರಾಜ್ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಅವಳಿ ಆಘಾತವಿಕ್ಕಿದರು. ಅಪಾಯಕಾರಿ ಪ್ರಿಯಾಂಶ್ ಆರ್ಯ(2) ಮತ್ತು ಕೂಪರ್ ಕೊನೋಲಿ(0) ವಿಕೆಟ್ ಕಿತ್ತರು. ಮೊದಲ ಎಸೆತದಲ್ಲಿ ಪ್ರಿಯಾಂಶ್ ಆರ್ಯ ಒಂದು ಜೀವದಾನ ಪಡೆದರೂ ಮುಂದಿನ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಆ ಬಳಿಕ ರಬಾಡ ಪ್ರಭ್‌ಸಿಮ್ರಾನ್ ಸಿಂಗ್(15)ಗೆ ಪೆವಿಲಿಯನ್ ದಾರಿ ತೋರಿಸಿದರು. ಶ್ರೇಯಸ್ ಅಯ್ಯರ್(19) ಅವರು ಜೇಸನ್ ಹೋಲ್ಡರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು.
36 ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಪತ್ಭಾಂದವನಂತೆ ಬಂದ ಯುವ ಆಟಗಾರ ಸೂರ್ಯಾಂಶ್ ಶೆಡ್ಗೆ ಅರ್ಧಶತಕ ಬಾರಿಸಿ ನೆರವಾದರು. ನಿರ್ಭೀತಿಯಿಂದ ಬಿರುಸಿನ ಬ್ಯಾಟಿಂಗ್ ನಡೆಸಿದ ಶೆಡ್ಗೆ, 29 ಎಸೆತಗಳಲ್ಲಿ 57 ರನ್ ಗಳಿಸಿದರು. ಇದು ಅವರ ಚೊಚ್ಚಲ ಅರ್ಧಶತಕ. ಅವರ ಈ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 5 ಸಿಕ್ಸರ್ ಮತ್ತು 3 ಬೌಂಡರಿ ಸಿಡಿಯಿತು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಮಾರ್ಕಸ್ ಸ್ಟೋಯಿನಿಸ್ 40 ರನ್ ಬಾರಿಸಿದರು. ಈ ಜೋಡಿ 6ನೇ ವಿಕೆಟ್‌ಗೆ 79 ರನ್ ಕಲೆಹಾಕಿ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಕೆಳ ಕ್ರಮಾಂಕದಲ್ಲಿ ಬೌಲರ್ ಮಾರ್ಕೊ ಜಾನ್ಸೆನ್ 20 ರನ್ ಕೊಡುಗೆ ಸಲ್ಲಿಸಿದರು.
IPL 2026: ಸಂಕಷ್ಟದಲ್ಲಿ ಅರ್ಧಶತಕ ಬಾರಿಸಿ ಪಂಜಾಬ್‌ಗೆ ನೆರವಾದ ಸೂರ್ಯಾಂಶ್ ಶೆಡ್ಗೆ ಯಾರು?
ಗುಜರಾತ್ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಜೇಸನ್ ಹೋಲ್ಡರ್ ಕೇವಲ 24 ರನ್‌ಗೆ 4 ಪ್ರಮುಖ ವಿಕೆಟ್ ಕಡೆವಿದರು. ಮೊಹಮ್ಮದ್ ಸಿರಾಜ್ ಮತ್ತು ಕಗಿಸೊ ರಬಾಡ ತಲಾ ಎರಡು ವಿಕೆಟ್ ಕಿತ್ತರು. ಕನ್ನಡಿಗ ಪ್ರಸಿದ್ಧ್ ಕೃಷ್ಣ ಈ ಪಂದ್ಯದಲ್ಲಿ ಅವಕಾಶ ವಂಚಿತರಾದರು.
ಸಂಕ್ಷಿಪ್ತ ಸ್ಕೋರ್
ಪಂಜಾಬ್ ಕಿಂಗ್ಸ್- 9ಕ್ಕೆ 163( ಸೂರ್ಯಾಂಶ್ ಶೆಡ್ಗೆ 57, ಮಾರ್ಕಸ್ ಸ್ಟೋಯಿನಿಸ್ 40, ಜೇಸನ್ ಹೋಲ್ಡರ್ 24 ಕ್ಕೆ 4, ಮೊಹಮ್ಮದ್ ಸಿರಾಜ್ 28 ಕ್ಕೆ 2, ಕಗಿಸೊ ರಬಾಡ 22ಕ್ಕೆ 2. ಗುಜರಾತ್ ಟೈಟಾನ್ಸ್-6ಕ್ಕೆ 167(ಸಾಯಿ ಸುದರ್ಶನ್ 57, ವಾಷಿಂಗ್ಟನ್ ಸುಂದರ್ ಔಟಾಗದೆ 40, ಅರ್ಶ್‌ದೀಪ್ ಸಿಂಗ್ 24ಕ್ಕೆ 2, ವೈಶಾಕ್ ವಿಜಯ್ 31ಕ್ಕೆ 2)