ರಾಯ್ಪುರ, ಮೇ 14: ಮೊದಲ ಆರು ಪಂದ್ಯಗಳ ಸೋಲಿನ ಬಳಿಕ ಸತತ 4 ಪಂದ್ಯಗಳನ್ನು ಗೆದ್ದುಕೊಂಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್(KKR Playoff Scenario 2026) ತಂಡವು ಬುಧವಾರದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs KKR) ವಿರುದ್ಧ, ಸೋಲು ಕಂಡಿತು. ಈ ಸೋಲು ತಂಡದ ಪ್ಲೇಆಫ್ ಪ್ರವೇಶದ ಹಾದಿಯನ್ನು ದುರ್ಗಮಗೊಳಿಸಿದೆ. ಆದರೂ ತಂಡಕ್ಕೆ ಅಗ್ರ 4 ಸ್ಥಾನಕ್ಕೇರುವ ಅವಕಾಶ ಜೀವಂತವಾಗಿದೆ.
ಆರ್‌ಸಿಬಿ ವಿರುದ್ಧದ ಸೋಲಿನ ನಂತರ, ಕೆಕೆಆರ್ 11 ಪಂದ್ಯಗಳಲ್ಲಿ ಒಂಬತ್ತು ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಮುಂದಿನ ಸುತ್ತಿಗೆ ಮುನ್ನಡೆಯಲು, ತಂಡವು ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಉಳಿದ ಮೂರು ಪಂದ್ಯಗಳನ್ನು ಗೆಲ್ಲಬೇಕು ಮತ್ತು ನಂತರ ಲೀಗ್‌ನಲ್ಲಿ ಇತರ ತಂಡಗಳು ಹೇಗೆ ಪ್ರದರ್ಶನ ನೀಡಿವೆ ಎಂಬುದರ ಮೇಲೆ ಅವಲಂಬಿತವಾಗಬೇಕು.
ಉಳಿದಿರುವ ಮೂರು ಪಂದ್ಯಗಳನ್ನು ಗೆದ್ದರೆ, ಗರಿಷ್ಠ 15 ಅಂಕಗಳನ್ನು ತಲುಪಬಹುದು. ಆದರೆ ಪ್ಲೇ ಆಫ್ ಟಿಕೆಟ್ ಖಚಿತಪಡಿಸಿಕೊಳ್ಳಲು ಇದು ಸಾಕಾಗುವುದಿಲ್ಲ. ಕೆಕೆಆರ್‌ಗೆ ಅವಕಾಶ ಸಿಗಬೇಕಿದ್ದರೆ, ಪಂಜಾಬ್ ಕಿಂಗ್ಸ್ ಲೀಗ್‌ನಲ್ಲಿ ಉಳಿದಿರುವ ಮೂರು ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲ ಬಾರದು.
KKR vs RCB: ಚೇಸಿಂಗ್ ವೇಳೆ ಕೊಹ್ಲಿ ಡೇಂಜರಸ್; ಕ್ಯಾಚ್ ಬಿಟ್ಟದ್ದು ಸೋಲಿಗೆ ಕಾರಣ: ರಹಾನೆ
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಮುಂಬೈ, ಬೆಂಗಳೂರು ಮತ್ತು ಲಕ್ನೋ ವಿರುದ್ಧ ಆಡಲಿದ್ದು, ಈ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದರೆ, ಅವರು ಮುನ್ನಡೆ ಸಾಧಿಸುತ್ತಾರೆ. ಆಗ ಸನ್‌ರೈಸರ್ಸ್ ಹೈದರಾಬಾದ್ ಸೋಲುವವರೆಗೆ ಕೆಕೆಆರ್ ಕಾಯಬೇಕು. ಪ್ಯಾಟ್ ಕಮ್ಮಿನ್ಸ್ ನೇತೃತ್ವದ ತಂಡವು ಲೀಗ್‌ನಲ್ಲಿ ಎರಡು ಪಂದ್ಯಗಳನ್ನು ಬಾಕಿ ಉಳಿಸಿಕೊಂಡಿದೆ ಮತ್ತು ಅವರು ಸಿಎಸ್‌ಕೆ ಮತ್ತು ಆರ್‌ಸಿಬಿ ವಿರುದ್ಧ ತಮ್ಮ ಎರಡೂ ಪಂದ್ಯಗಳನ್ನು ಸೋತರೆ ಆಗ ಕೆಕೆಆರ್ ಪ್ಲೇ ಆಫ್ ಪ್ರವೇಶ ಪಡೆಯಲಿದೆ. ಅದು ಕೂಡ ಕೆಕೆಆರ್ ತನ್ನ ಎಲ್ಲ ಪಂದ್ಯ ಗೆದ್ದರೆ ಮಾತ್ರ. ಉಳಿದ ಪಂದ್ಯಗಳ ಪೈಕಿ ಒಂದು ಪಂದ್ಯ ಸೋತರೂ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
ಕೆಕೆಆರ್ ತಂಡವು ತನ್ನ ಉಳಿದ ಮೂರು ಪಂದ್ಯಗಳನ್ನು ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಡಲಿದೆ ಎಂಬುದು ಕೆಕೆಆರ್ ತಂಡದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ತಂಡವು ತವರಿನ ಪರಿಸ್ಥಿತಿಗಳಲ್ಲಿ ಅದ್ಭುತ ದಾಖಲೆಯನ್ನು ಹೊಂದಿರುವುದರಿಂದ ಇದು ಅವರಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ.