ಕೊಲಂಬೊ, ಫೆ.15: ‘ಬದ್ಧ ಪ್ರತಿಸ್ಪರ್ಧಿ’ಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಇಂದು ಕೊಲಂಬೊದ ಆರ್. ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ ಪಂದ್ಯವನ್ನಾಡಲು ಸಜ್ಜಾಗಿದೆ. ಪಂದ್ಯದ ಮುನ್ನಾದಿನ ಅಭ್ಯಾಸದ ಸಮಯದಲ್ಲಿ ಪಾಕಿಸ್ತಾನದ ಡಗೌಟ್ ಒಳಗೆ ಹಾವು ಕಾಣಿಸಿಕೊಂಡಾಗ ವಿಚಿತ್ರ ಕ್ಷಣವೊಂದು ಕಂಡುಬಂತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾವನ್ನು ಸುರಕ್ಷಿತವಾಗಿ ರಕ್ಷಿಸುತ್ತಿರುವುದು ಕಾಣಬಹುದು.
ಭಾರತ ತಂಡ ಪ್ರೇಮದಾಸ ಕ್ರೀಡಾಂಗಣದಲ್ಲಿ ಉತ್ತಮ ಟಿ20 ದಾಖಲೆ ಹೊಂದಿದ್ದರೂ ಕೂಡ ಈ ಬಾರಿ ಎಚ್ಚರಿಕೆಯಿಂದ ಆಡಬೇಕು. ಮೇಲ್ಮೈನಲ್ಲಿ ಚೆಂಡು ನಿಧಾನಗತಿಯಿಂದ ಸಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ತಂತ್ರಗಾರಿಕೆಯನ್ನು ರೂಪಿಸಬೇಕಿದೆ. ತಂಡದಲ್ಲಿ ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ಅರ್ಷದೀಪ್ ಸಿಂಗ್ ಹಾಗೂ ಬ್ಯಾಟರ್ ರಿಂಕು ಸಿಂಗ್ ವಿಶ್ರಾಂತಿ ಪಡೆಯಬಹುದು.
ವೈರಲ್ ವಿಡಿಯೊ ಇಲ್ಲಿದೆ
ಪಾಕ್ ತಂಡವು ತನ್ನ ಸ್ಪಿನ್ ಬೌಲರ್‌ಗಳಾದ ಅಬ್ರಾರ್ ಅಹಮದ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್ ಮತ್ತು ಉಸ್ಮಾನ್ ತಾರೀಕ್ ಅವರ ಮೇಲೆ ವಿಶ್ವಾಸವಿಟ್ಟಿದೆ. ಉಭಯ ತಂಡಗಳು ಇಲ್ಲಿಯವರೆಗೆ ಟಿ20 ವಿಶ್ವಕಪ್‌ಗಳಲ್ಲಿ ಎಂಟು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಭಾರತ ಏಳು ಬಾರಿ ಗೆದ್ದಿದೆ. ಪಾಕಿಸ್ತಾನ ಒಮ್ಮೆ ಮಾತ್ರ ಗೆದ್ದಿದೆ.
ಶನಿವಾರ ನಡೆದ ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಲ್ಮಾನ್ ಅಘಾ, ಪಂದ್ಯವನ್ನು ಸರಿಯಾದ ಮನೋಭಾವದಿಂದ ಆಡಬೇಕು. ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ಗೆ ತಮ್ಮ ತಂಡವು ಮುಕ್ತವಾಗಿದೆ ಎಂದು ಹೇಳಿದ್ದರು. ಭಾರತದ ನಾಯಕ ಸೂರ್ಯಕುಮಾರ್ ಹಸ್ತಲಾಘವದ ವಿಚಾರವನ್ನು ನಾಳೆಗೆ ಬಿಡಿ. ಇಂದು ರಾತ್ರಿ ಚೆನ್ನಾಗಿ ನಿದ್ದೆ ಮಾಡಿ, ನಾಳೆ ಏನಾಗುತ್ತದೆ ಎಂದು ಕಾದು ನೋಡಿ ಎಂದು ಹೇಳಿದ್ದರು. ಹೀಗಾಗಿ ಪಂದ್ಯದ ಕುತೂಹಲ ಜತೆಗೆ ಶೇಕ್‌ಹ್ಯಾಂಡ್ ವಿಚಾರವೂ ಭಾರೀ ಕೂತೂಹಲ ಮೂಡಿಸಿದೆ.
IND vs PAK: ಇಂದಿನ ಭಾರತ-ಪಾಕ್ ಪಂದ್ಯಕ್ಕೆ ಶೇ.50ರಿಂದ 70ರಷ್ಟು ಮಳೆ ಸಾಧ್ಯತೆ!
ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾ ಕಪ್‌ಗೂ ಮುನ್ನ ನಡೆದ ಪಹಲ್ಗಾಮ್ ಘಟನೆ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ನಂತರ, ಭಾರತ ಮತ್ತು ಪಾಕಿಸ್ತಾನ ಆಟಗಾರರು ಮೈದಾನದಲ್ಲಿ ಹಸ್ತಲಾಘವ ಮಾಡುವುದನ್ನು ನಿಲ್ಲಿಸಿದ್ದಾರೆ.