ಮುಂಬಯಿ: ಬಹುನಿರೀಕ್ಷಿತ 2025ರ ಏಷ್ಯಾಕಪ್(Asia Cup 2025) ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. 15 ಸದಸ್ಯರ ತಂಡವನ್ನು ಬಿಸಿಸಿಐ ಮತ್ತು ಆಯ್ಕೆ ಸಮಿತಿ ಮಂಗಳವಾರ ಸಭೆ ನಡೆಸಿ ಪ್ರಕಟಿಸಿತು. ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದು, ಅಚ್ಚರಿ ಎಂಬಂತೆ ಶುಭಮನ್ ಗಿಲ್‌ಗೆ ಉಪನಾಯಕನ ಸ್ಥಾನವನ್ನು ನೀಡಲಾಗಿದೆ. ಶ್ರೇಯಸ್ ಅಯ್ಯರ್ ಮತ್ತು ಸಿರಾಜ್ ಅವರನ್ನು ಕೈಬಿಡಲಾಗಿದೆ.
ಶುಭಮನ್ ಗಿಲ್ ಅವರಿಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗಿತ್ತು. ಆದರೆ ಅವರಿಗೆ ಉಪನಾಯಕ ಸ್ಥಾನವನ್ನು ನೀಡಲಾಗಿದೆ. ಈ ಹಿಂದೆ ಟಿ20 ತಂಡಕ್ಕೆ ಅಕ್ಷರ್ ಪಟೇಲ್ ಉಪನಾಯನಾಗಿದ್ದರು. ಸಂಜು ಸ್ಯಾಮ್ಸನ್ ಜತೆ ಎರಡನೇ ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾ ಸ್ಥಾನಗಿಟ್ಟಿಸಿಕೊಂಡರು. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕೆಳಕ್ರಮಾಂಕದಲ್ಲಿ ಆಡಿದ್ದ ಜಿತೇಶ್, ಕೆಲವು ಪಂದ್ಯಗಳಲ್ಲಿ ಫಿನಿಷರ್ ಪಾತ್ರದಲ್ಲಿ ಮಿಂಚಿದ್ದರು. ಹೀಗಾಗಿ ಅವರಿಗೆ ಅವಕಾಶ ಸಿಕ್ಕಿದೆ.
ಭಾರತ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಜಸ್‌ಪ್ರೀತ್ ಬುಮ್ರಾ ನಿರ್ವಹಿಸಲಿದ್ದಾರೆ. ಅವರೊಂದಿಗೆ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಕಾಣಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ ಆಡಿದ್ದ ಶಿವಂ ದುಬೆಗೂ ಅವಕಾಶ ನೀಡಲಾಗಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ.
ಕನ್ನಡಿಗ ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಸ್ಟ್ಯಾಂಡ್‌ಬೈ ಆಟಗಾರರಾಗಿ ಆಯ್ಕೆ ಮಾಡಲಾಗಿದೆ. ಏಷ್ಯಾ ಕಪ್ ಟೂರ್ನಿ ಯುಎಇಯಲ್ಲಿ ಸೆ. 9 ರಿಂದ 28ರವರೆಗೆ ನಡೆಯಲಿದೆ.
ಭಾರತ ತಂಡ
ಸೂರ್ಯ ಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿ.ಕೀ.), ಜಸ್‌ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್ (ವಿ.ಕೀ.), ಹರ್ಷಿತ್ ರಾಣಾ, ರಿಂಕು ಸಿಂಗ್.
ಸ್ಟ್ಯಾಂಡ್‌ಬೈ ಆಟಗಾರರು: ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್.