ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಾಕಿಸ್ಥಾನದ ವಿಶ್ವ ದಾಖಲೆ ಮುರಿದ ಭಾರತ

IND vs NZ: ಸೂರ್ಯಕುಮಾರ್‌ ಯಾದವ್‌, ಈ ಪಂದ್ಯದಲ್ಲಿ ಸ್ಪೋಟಕ ಇನಿಂಗ್ಸ್‌ ಆಡುವ ಮೂಲಕ ತಮ್ಮ ಲಯಕ್ಕೆ ಮರಳಿದರು. ಅವರು ಆಡಿದ 37 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 82 ರನ್‌ಗಳನ್ನು ಬಾರಿಸಿದರು. ಆ ಮೂಲಕ ಭಾರತ ತಂಡದ ಗೆಲುವಿಗೆ ನೆರವು ನೀಡಿದರು.

Team india

ರಾಯ್ಪುರ, ಜ.24: ರಾಯ್‌ಪುರ ಕ್ರೀಡಾಂಗಣದಲ್ಲಿ ಶುಕ್ರವಾರ ನೆಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ದೊಡ್ಡ ಮೊತ್ತದ ಮೇಲಾಟದಲ್ಲಿ ಭಾರತ ತಂಡ ಅಮೋಘ ಗೆಲುವು ಸಾಧಿಸಿ ಬದ್ಧ ಎದುರಾಳಿ ಪಾಕಿಸ್ತಾನದ ವಿಶ್ವ ದಾಖಲೆಯನ್ನು ಮುರಿದಿದೆ. ನ್ಯೂಜಿಲ್ಯಾಂಡ್‌ನ 209 ರನ್‌ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 15.2 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಗುರಿಯನ್ನು ತಲುಪುವ ಮೂಲಕ ಅತಿ ವೇಗವಾಗಿ 200 ಪ್ಲಸ್‌ ಮೊತ್ತವನ್ನು ಚೇಸ್‌ ಮಾಡಿದ ವಿಶ್ವ ದಾಖಲೆ ತನ್ನದಾಗಿಸಿಕೊಂಡಿತು.

ಪಾಕಿಸ್ತಾನ 2025 ರಲ್ಲಿ ಆಕ್ಲೆಂಡ್‌ನಲ್ಲಿ ನಡೆದ ಟಿ20ಐನಲ್ಲಿ 24 ಎಸೆತಗಳು ಬಾಕಿ ಇರುವಾಗ 205 ರನ್‌ಗಳನ್ನು ಬೆನ್ನಟ್ಟಿತ್ತು. ರಾಯ್‌ಪುರದಲ್ಲಿ ಭಾರತದ ಪ್ರಯತ್ನ ಆ ದಾಖಲೆಯನ್ನು ಮೀರಿಸಿತು ಮತ್ತು ಹೊಸ ಇತಿಹಾಸ ನಿರ್ಮಿಸಿತು.

ಶುಕ್ರವಾರ ಇಲ್ಲಿನ ಸಹೀದ್‌ ವೀರ್‌ ನಾರಾಯಣ್‌ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ನೀಡಿದ್ದ 209 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಇಶಾನ್‌ ಕಿಶನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಅವರ ಅರ್ಧಶತಕಗಳ ಬಲದಿಂದ ಕೇವಲ 15.2 ಓವರ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು 209 ರನ್‌ ಗಳಿಸಿ ಗೆಲುವಿನ ದಡ ಸೇರಿತು. ಆ ಮೂಲಕ ಈ ಸರಣಿಯಲ್ಲಿ ಆತಿಥೇಯರು ಸತತ ಎರಡನೇ ಗೆಲುವು ದಾಖಲಿಸಿದರು.

ಚೇಸಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 6 ರನ್‌ ಇರುವಾಗಲೇ ಭಾರತ ತಂಡ, ಸಂಜು ಸ್ಯಾಮ್ಸನ್‌ ಮತ್ತು ಅಭಿಷೇಕ್‌ ಶರ್ಮಾ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಮೂರನೇ ವಿಕೆಟ್‌ಗೆ ಇಶಾನ್‌ ಕಿಶನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಸ್ಪೋಟಕ ಬ್ಯಾಟಿಂಗ್‌ ಮೂಲಕ ಕೇವಲ 48 ಎಸೆತಗಳಲ್ಲಿ 122 ರನ್‌ಗಳ ಜೊತೆಯಾಟವನ್ನು ಆಡಿ ತಂಡವನ್ನು ಗೆಲುವಿನ ಸನಿಹಕೆ ತಂದಿತು. ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಇಶಾನ್‌ ಕಿಶನ್‌ ಈ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ 76 ರನ್‌ಗಳನ್ನು ಚಚ್ಚಿದರು.

ಇದನ್ನೂ ಓದಿ ‌IND vs NZ: ಮೊದಲ ಓವರ್‌ನಲ್ಲಿಯೇ 18 ರನ್‌ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಅರ್ಷದೀಪ್‌ ಸಿಂಗ್!

ಸೂರ್ಯಕುಮಾರ್‌ ಯಾದವ್‌, ಈ ಪಂದ್ಯದಲ್ಲಿ ಸ್ಪೋಟಕ ಇನಿಂಗ್ಸ್‌ ಆಡುವ ಮೂಲಕ ತಮ್ಮ ಲಯಕ್ಕೆ ಮರಳಿದರು. ಅವರು ಆಡಿದ 37 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 82 ರನ್‌ಗಳನ್ನು ಬಾರಿಸಿದರು. ಆ ಮೂಲಕ ಭಾರತ ತಂಡದ ಗೆಲುವಿಗೆ ನೆರವು ನೀಡಿದರು. ಇವರ ಜೊತೆ ನಾಲ್ಕನೇ ವಿಕೆಟ್‌ಗೆ 81 ರನ್‌ ಗಳಿಸಿದ್ದ ಶಿವಂ ದುಬೆ 18 ಎಸೆತಗಳಲ್ಲಿ ಅಜೇಯ 36 ರನ್‌ ಸಿಡಿಸಿದರು.