ಲಂಡನ್, ಜೂ.27: ಮಹಿಳಾ ಟಿ20 ವಿಶ್ವಕಪ್(Women’s T20 World Cup 2026) ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯುವ ಗುರಿಯೊಂದಿಗೆ, ಭಾನುವಾರ ನಡೆಯಲಿರುವ ತನ್ನ ಕೊನೆಯ ಗ್ರೂಪ್ ಎ ಪಂದ್ಯದಲ್ಲಿ ಭಾರತ ತಂಡ ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇದೇ ದಿನ ದಕ್ಷಿಣ ಆಫ್ರಿಕಾ ಲಾರ್ಡ್ಸ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ದಿನದ ಎರಡು ಪಂದ್ಯಗಳು ಸೆಮಿಫೈನಲ್ ಭವಿಷ್ಯವನ್ನು ನಿರ್ಧರಿಸಲಿದೆ.
ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಸಮಸ್ಯೆಗಳನ್ನು ಬಗೆಹರಿಸದೇ ಇದ್ದರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹಲವು ಕ್ಯಾಚ್ ಕೈಬಿಟ್ಟು ಸೋಲಿಗೆ ತುತ್ತಾಗಿದ್ದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗೆದ್ದರೂ 6 ಕ್ಯಾಚ್‌ಗಳನ್ನು ಬಿಟ್ಟಿದ್ದರು. ಹೀಗಾಗಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧವೂ ಇದೇ ತಪ್ಪು ಮರುಕಳಿಸಿದರೆ ಸೋಲು ಕಟ್ಟಿಟ್ಟ ಬುತ್ತಿ.
ಆರಂಭಿಕ ಎರಡು ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಸ್ಮೃತಿ ಮಂಧಾನ ಅವರ ಬ್ಯಾಟಿಂಗ್ ಆ ಬಳಿಕ ಮಂಕಾಗಿದೆ. ಶಫಾಲಿ ಮಾತ್ರ ಬ್ಯಾಟಿಂಗ್ ಜತೆಗೆ ಬೌಲಿಂಗ್‌ನಲ್ಲಿಯೂ ತಂಡಕ್ಕೆ ನೆರವಾಗುತ್ತಿದ್ದಾರೆ. ಶ್ರೀ ಶರಣಿ ನಿರೀಕ್ಷಿತ ಪ್ರದರ್ಶನ ತೋರುತ್ತಿದ್ದಾರೆ. ಅವರ ಮೇಲೆ ತಂಡ ಹೆಚ್ಚಿನ ಭರವಸೆ ಇರಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರೊಡ್ರಿಗಸ್ ಮತ್ತು ಯಸ್ತಿಕಾ ಭಾಟಿಯಾ ಕಳಪೆ ಫಾರ್ಮ್‌ನಿಂದ ಹೊರಬರಬೇಕಿದೆ. ಫಿನಿಶರ್‌ಗಳಾದ ರಿಚಾ ಘೋಷ್ ಮತ್ತು ದೀಪ್ತಿ ಶರ್ಮಾ ಹೆಚ್ಚಿನ ಕೊಡುಗೆ ಕೊಡಬೇಕಾಗಿದೆ.
19 ಎಸೆತದಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದ ಅಭಿಷೇಕ್ ಶರ್ಮಾ; ವಿಶ್ವದ ಮೊದಲ ಆಟಗಾರ
ತಂಡದ ಪ್ರದರ್ಶನ ನೋಡುವುದಾದರೆ ಆಸ್ಟ್ರೇಲಿಯಾವೇ ಗೆಲುವಿನ ಫೇವರಿಟ್ ಎನಿಸಿದೆ. ಎಲ್ಲಿಸ್ ಪೆರ್ರಿ, ಬೆತ್ ಮೂನಿ, ಆಶ್ಲಿ ಗಾರ್ಡನ್, ಜಾರ್ಜಿಯಾ ವೋಲ್ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಇವರಲ್ಲಿ ಒಬ್ಬರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಂತರೂ ಪಂದ್ಯದ ಗತಿಯೇ ಬದಲಾಗಬಹುದು. ಅದರಲ್ಲೂ ಟಾಸ್ ಗೆದ್ದರೆ ತಪ್ಪಿಯೂ ಬ್ಯಾಟಿಂಗ್ ಆಹ್ವಾನ ನೀಡಬಾರದು. ಏಕೆಂದರೆ ಆಸ್ಟ್ರೇಲಿಯಾ ಪ್ರಮುಖ ಗೇಮ್ ಪ್ಲ್ಯಾನ್ ದೊಡ್ಡ ಮೊತ್ತ ಪೇರಿಸಿ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸುವುದು.
ಮುಖಾಮುಖಿ
ಇತ್ತಂಡಗಳ ಮುಖಾಮುಖಿ ದಾಖಲೆ ನೋಡುವುದಾದರೆ ಈವರೆಗೆ 38 ಪಂದ್ಯಗಳನ್ನಾಡಿದ್ದು, ಆಸ್ಟ್ರೇಲಿಯಾ ಗರಿಷ್ಠ 27 ಪಂದ್ಯಗಳನ್ನು ಗೆದ್ದಿದೆ. ಭಾರತ ಕೇವಲ 9 ಪಂದ್ಯಗಳನ್ನು ಜಯಿಸಿದೆ. ಒಂದು ಪಂದ್ಯ ಟೈ ಮತ್ತು ರದ್ದುಗೊಂಡಿದೆ.
ಸಂಭಾವ್ಯ ತಂಡಗಳು
ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್(ಸಿ), ರಿಚಾ ಘೋಷ್(ಪ), ದೀಪ್ತಿ ಶರ್ಮಾ, ರಾಧಾ ಯಾದವ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್, ನಂದನಿ ಶರ್ಮಾ.
ಆಸ್ಟ್ರೇಲಿಯಾ: ಬೆತ್ ಮೂನಿ (ವಿ.ಕೀ.), ಜಾರ್ಜಿಯಾ ವೋಲ್, ಎಲ್ಲಿಸ್ ಪೆರ್ರಿ, ಆಶ್ಲೀಗ್ ಗಾರ್ಡ್ನರ್, ಜಾರ್ಜಿಯಾ ವೇರ್ಹ್ಯಾಮ್, ಅನ್ನಾಬೆಲ್ ಸದರ್ಲ್ಯಾಂಡ್, ನಿಕೋಲಾ ಕ್ಯಾರಿ, ಸೋಫಿ ಮೊಲಿನೆಕ್ಸ್ (ನಾಯಕ), ಅಲಾನಾ ಕಿಂಗ್, ಕಿಮ್ ಗಾರ್ತ್, ಲೂಸಿ ಹ್ಯಾಮಿಲ್ಟನ್.