ಕೋಲ್ಕತಾ, ಫೆ.28: ತಂದೆಯನ್ನು ಕಳೆದುಕೊಂಡ ದುಃಖದ ನಡುವೆಯೂ ರಿಂಕು ಸಿಂಗ್ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡ ಸೇರಿದ್ದಾರೆ ಎಂದು ಭಾರತೀಯ ತಂಡದ ಸಹಾಯಕ ತರಬೇತುದಾರ ರಯಾನ್ ಟೆನ್ ಡೋಸ್ಚೇಟ್ ಬಹಿರಂಗಪಡಿಸಿದ್ದಾರೆ.
"ರಿಂಕು ನಮ್ಮೊಂದಿಗೆ ಸೇರಲು ಯೋಜಿಸಿದ್ದಾರೆ, ಮತ್ತು ನಾವು ಅವರಿಗೆ ಈ ಕಷ್ಟದ ಸಮಯದಲ್ಲಿ ಸಹಾಯ ಮಾಡಬೇಕಾಗಿದೆ" ಎಂದು ರಯಾನ್ ಟೆನ್ ಡೋಸ್ಚೇಟ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಂಡೀಸ್ ವಿರುದ್ಧದ ಪಂದ್ಯದ ತಯಾರಿ ಬಗ್ಗೆ ಮಾತನಾಡಿದ ಡೋಸ್ಚೇಟ್, "ನಾವು ಬೆಂಕಿಯೊಂದಿಗೆ ಬೆಂಕಿಯನ್ನು ಎದುರಿಸಲಿದ್ದೇವೆ" ಎಂದರು.
"ಪಂದ್ಯಾವಳಿಯ ಅಂತಿಮ ಹಂತದಲ್ಲಿ, ದೊಡ್ಡ ಆಟಗಾರರು ಪ್ರಮುಖ ಪಾತ್ರ ವಹಿಸುತ್ತಾರೆ. ನಮ್ಮದು ಅನುಭವಿ ಆಟಗಾರರ ತಂಡ. ತಿಲಕ್, ಅಭಿಷೇಕ್ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಬ್ಯಾಟಿಂಗ್ ವಿಭಾಗ ಉತ್ತಮವಾಗಿ ಕಾಣುತ್ತಿದೆ" ಎಂದರು.
ಭಾರತ ಇದುವರೆಗೆ ವೆಸ್ಟ್ ಇಂಡೀಸ್ ವಿರುದ್ಧ 30 ಟಿ20 ಪಂದ್ಯಗಳನ್ನು ಎದುರಿಸಿದ್ದು, 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆಗಸ್ಟ್ 13, 2023 ರಂದು ಲಾಡರ್‌ಹಿಲ್‌ನಲ್ಲಿ ಉಭಯ ತಂಡಗಳ ನಡುವೆ ನಡೆದ ಕೊನೆಯ ಟಿ20ಐ ಪಂದ್ಯದಲ್ಲಿ, ಭಾರತ 8 ವಿಕೆಟ್‌ಗಳಿಂದ ಹೀನಾಯ ಸೋಲನ್ನು ಅನುಭವಿಸಿತ್ತು. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಬಾರಿ ಮುಖಾಮುಖಿಯಾಗಿದೆ. ಆದರೆ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ವಿರಾಟ್ ಕೊಹ್ಲಿಯ ಸಾರ್ವಕಾಲಿಕ ಟಿ20 ವಿಶ್ವಕಪ್ ದಾಖಲೆ ಮುರಿದ ಪಾಕಿಸ್ತಾನದ ಫರ್ಹಾನ್
ಭಾರತ ತಂಡವು ಮಾರ್ಚ್ 23, 2014 ರಂದು ಮಿರ್ಪುರದಲ್ಲಿ ನಡೆದ ಪಂದ್ಯದಲ್ಲಿ ಗೆದ್ದಿತು. ಆ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಗೆದ್ದಿತ್ತು. ಆದರೆ ಲಾರ್ಡ್ಸ್, ಬ್ರಿಡ್ಜ್‌ಟೌನ್ ಮತ್ತು ಮುಂಬೈ (ವಾಂಖೆಡೆ ಕ್ರೀಡಾಂಗಣ)ದಲ್ಲಿ ನಡೆದ ಇತರ ಮೂರು ಪಂದ್ಯಗಳಲ್ಲಿ ಭಾರತ ಕ್ರಮವಾಗಿ 7 ವಿಕೆಟ್‌ಗಳು, 14 ರನ್‌ಗಳು ಮತ್ತು 7 ವಿಕೆಟ್‌ಗಳಿಂದ ಸೋತಿತ್ತು.