4ನೇ ಟೆಸ್ಟ್; ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ; ಕರುಣ್‌ಗೆ ಕೊನೇ ಚಾನ್ಸ್!
IND vs ENG 4th Test: ಮೂರನೇ ಟೆಸ್ಟ್ ಪಂದ್ಯದ ವೇಳೆ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದ ರಿಷಭ್ ಪಂತ್ ಸಂಪೂರ್ಣ ಫಿಟ್ ಆಗದ ಕಾರಣ ಈ ಪಂದ್ಯದಲ್ಲಿ ಕೇವಲ ಬ್ಯಾಟರ್ ಆಗಿ ಆಡುವ ಸಾಧ್ಯತೆ ಹೆಚ್ಚಿದೆ. ಆಗ ಧ್ರುವ ಜುರೆಲ್ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಸ್ಥಾನವನ್ನು ಜುರೆಲ್ ತುಂಬುವ ನಿರೀಕ್ಷೆ ಇದೆ.


ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್(IND vs ENG 4th Test) ಪಂದ್ಯ ಬುಧವಾರ ಇಲ್ಲಿನ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ಆರಂಭವಾಗಲಿದ್ದು, 1-2 ಹಿನ್ನಡೆಯಲ್ಲಿರುವ ಶುಭಮನ್ ಗಿಲ್(Shubman Gill) ಪಡೆಗೆ ಸರಣಿ ಸೋಲು ತಪ್ಪಿಸಲು ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಈ ಒತ್ತಡದ ಮಧ್ಯೆ ಪ್ರಮುಖ ಆಟಗಾರರ ಗಾಯ ಮತ್ತು ಫಿಟ್‌ನೆಸ್ ಆತಂಕ ಇನ್ನಷು ಸಂಕಷ್ಟಕ್ಕೆ ತಳ್ಳಿದೆ. ಇನ್ನೊಂದೆಡೆ ಓಲ್ಡ್ ಟ್ರಾಫರ್ಡ್ ಅಂಗಳ ಭಾರತಕ್ಕೆ ಈ ವರೆಗೆ ಗೆಲುವಿನ ಕದ ತೆರೆದಿಲ್ಲ ಎಂಬುದಾಗಿ ಇತಿಹಾಸ ಹೇಳುತ್ತದೆ. ಆದರೆ ಸರಣಿ ಜೀವಂತವಿರಿಸಲು ಗೆಲ್ಲಲೇಬೇಕೆಂದಿಲ್ಲ, ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಂಡರೂ ಸಾಕು. ಇದೊಂದೆ ಭಾರತದ ಪಾಲಿಗೆ ಸಮಾಧಾನಕರ ಸಂಗತಿ.
ಕಳೆದ 89 ವರ್ಷಗಳಲ್ಲಿ ಇಲ್ಲಿ ಆಡರುವ 9 ಟೆಸ್ಟ್‌ಗಳಲ್ಲಿ ಭಾರತ ಒಮ್ಮೆಯೂ ಗೆದ್ದಿಲ್ಲ. 5ರಲ್ಲಿ ಡ್ರಾ ಸಾಧಿಸಿ, 4ರಲ್ಲಿ ಸೋತಿದೆ. ಲೀಡ್ಸ್‌ನಲ್ಲಿ ಮೊಲ ಪಂದ್ಯ ಸೋತ್ತಿದ್ದ ಭಾರತ ಆ ಬಳಿಕ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ತಿರುಗಿ ಬಿದ್ದು ಐತಿಹಾಸಿಕ ಗೆಲುವು ಸಾಧಿಸಿದ ನಿದರ್ಶನ ಇದೇ ಸರಣಿಯಲ್ಲಿ ಕಾಣಸಿಕ್ಕಿದೆ. ಹೀಗಾಗಿ ಭಾರತ ಓಲ್ಡ್ ಟ್ರಾಫರ್ಡ್‌ನಲ್ಲಿಯೂ ತಂಡ ಮುನ್ನಡೆಯಬಹುದು ಎಂಬ ನಂಬಿಕೆ ಅಭಿಮಾನಿಗಳದ್ದು. ಇದು ಭಾರತ ಇಲ್ಲಿ 11 ವರ್ಷಗಳ ಬಳಿಕ ಆಡುತ್ತಿರುವ ಟೆಸ್ಟ್ ಪಂದ್ಯ ಕೂಡ ಹೌದು. ಕೊನೆಯ ಬಾರಿಗೆ ಆಡಿದ್ದು 2014ರಲ್ಲಿ. ಇದಾದ ಬಳಿಕ 2021 ಮತ್ತು 2022ರಲ್ಲಿ ಇಲ್ಲಿ ಟೆಸ್ಟ್ ಪಂಯ ನಿಗದಿಯಾಗಿತ್ತಾರೂ ಕೊರೊನಾ ಕಾರಣದಿಂದ ಕೈತಪ್ಪಿತ್ತು.
ಭಾರತ ಪರ ಬದಲಾವಣೆ ಖಚಿತ
ಮ್ಯಾಂಚೆಸ್ಟರ್ ಪಂದ್ಯಕ್ಕಾಗಿ ಭಾರತದ ಆಡುವ ಬಳಗದಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಂಭವಿಸಬಹುದು. ಆಲ್‌ರೌಂಡರ್ ನಿತೀಶ್ ಕುಮಾರ್ ಗಾಯಗೊಂಡು ಸರಣಿಯಿಂದಲೇ ಹೊರಬಿದ್ದಿದ್ದಾರೆ. ಮತ್ತೋರ್ವ ವೇಗಿ ಅರ್ಶ್‌ದೀಪ್ ಸಿಂಗ್ ಕೈ ಬೆರಳಿನ ಗಾಯದಿಂದ ನಾಲ್ಕನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಆಕಾಶ್ದೀಪ್ ಇನ್ನೂ ಫಿಟ್ ಆಗಿಲ್ಲ. ಹೀಗಾಗಿ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಕಡಿಮೆ. ಅವರನ್ನು ಈ ಪಂದ್ಯದಲ್ಲಿ ಆಡಿಸುವುದು ಖಂಡಿತ. ಸೋಮವಾರ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಸಿರಾಜ್ ಅವರು ಬುಮ್ರಾ ಆಡುವ ಸುಳಿವನ್ನು ಕೊಟ್ಟಿದ್ದರು. ಬುಮ್ರಾ, ಸಿರಾಜ್ ಜತೆಗೆ 24 ವರ್ಷದ ಅಂಶುಲ್ ಕಾಂಬೋಜ್ 3ನೇ ವೇಗಿಯಾಗಿ ಟೆಸ್ಟ್ ಪದಾರ್ಪಣೆ ಮಾಡುವುದು ಈಗಾಗಲೆ ಬಹುತೇಕ ಖಚಿತವೆನಿಸಿದೆ.
ಪಂತ್ ಎಷ್ಟು ಫಿಟ್?
ಮೂರನೇ ಟೆಸ್ಟ್ ಪಂದ್ಯದ ವೇಳೆ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದ ರಿಷಭ್ ಪಂತ್ ಸಂಪೂರ್ಣ ಫಿಟ್ ಆಗದ ಕಾರಣ ಈ ಪಂದ್ಯದಲ್ಲಿ ಕೇವಲ ಬ್ಯಾಟರ್ ಆಗಿ ಆಡುವ ಸಾಧ್ಯತೆ ಹೆಚ್ಚಿದೆ. ಆಗ ಧ್ರುವ ಜುರೆಲ್ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಸ್ಥಾನವನ್ನು ಜುರೆಲ್ ತುಂಬುವ ನಿರೀಕ್ಷೆ ಇದೆ.
ಕರುಣ್‌ಗೆ ಮತ್ತೊಂದು ಅವಕಾಶ?
ಕನ್ನಡಿಗ ಕರುಣ್ ನಾಯರ್ ಸ್ಥಾನಕ್ಕೆ ಕುತ್ತು ಬರಲಿದೆಯೇ? ಈ ಪ್ರಶ್ನೆ ಕಳೆದ ಪಂದ್ಯಗಳಿಂದಲೇ ಕೇಳಿಬರತೊಡಗಿತ್ತು. ಆಡಿರುವ 6 ಇನಿಂಗ್ಸ್ಗಳಲ್ಲೂ ನಾಯರ್ ಬ್ಯಾಟ್ ಮುಷ್ಕರ ಹೂಡಿದೆ. 21.83ರ ಸರಾಸರಿಯಲ್ಲಿ 131 ರನ್ ಮಾತ್ರ ಗಳಿಸಿದ್ದಾರೆ ಮತ್ತು 40 ರನ್ ಗಳಿಸಿರುವುದೇ ಗರಿಷ್ಠವೆನಿಸಿದೆ. ಹೀಗಾಗಿ ಅವರನ್ನು ಕೈಬಿಡಬೇಕೆಂದು ಮಾಜಿ ಕ್ರಿಕೆಟಿಗರು ಒತ್ತಾಯಿಸುತ್ತಿದ್ದಾರೆ. ಆದರೆ ಟೀಮ್ ಮ್ಯಾನೇಜ್ಮೆಂಟ್, ನಾಲ್ಕನೇ ಪಂದ್ಯದಲ್ಲಿ ಅವರಿಗೆ ಕೊನೆಯ ಅವಕಾಶವೊಂದನ್ನು ನೀಡುವ ಸಾಧ್ಯತೆ ಹೆಚ್ಚಾಗಿದೆ. ಅವಕಾಶ ಸಿಕ್ಕರೆ ಅವರು ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ.
ಅಪಾಯಕಾರಿ ರೂಟ್
ಇಂಗ್ಲೆಂಡ್ ತಂಡದಲ್ಲಿ ಯಾರೇ ಆಡಲಿ, ನಾಯಕ ರೂಟ್ ಅವರ ವಿಕೆಟನ್ನು ಬೇಗ ಕಳಚಿದರೆ ಆತಿಥೇಯರ ಕತೆ ಮುಗಿದಂತೆ ಎಂಬುದು ಭಾರತಕ್ಕೆ ಚೆನ್ನಾಗಿ ಗೊತ್ತು. ಆದರೆ ಅವರ ವಿಕೆಟ್ ಕೀಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಇದು ರೂಟ್ ಅವರ ನೆಚ್ಚಿನ ಮೈದಾನವಾಗಿದೆ. ಅವರು ಇಲ್ಲಿ ಬಲಿಷ್ಠ ಆಖಲೆ ಹೊಂದಿದ್ದಾರೆ. ಇಲ್ಲಿ ಆಡಿರುವ 19 ಇನಿಂಗ್ಸ್‌ನಲ್ಲಿ 1 ಶತಕ 7 ಅರ್ಧಶತಕ ಸಹಿತ 978ರನ್ ಗಳಿಸಿದ್ದಾರೆ. 254ರನ್ ಗರಿಷ್ಠ ಗಳಿಕೆಯಾಗಿದೆ. ಒಟ್ಟಾರೆ ಭಾರತೀಯ ಬೌಲರ್‌ಗಳು ರೂಟ್ ಅವರನ್ನು ಟಾರ್ಗೆಡ್ ಮಾಡಬೇಕಿದೆ.
ಇದನ್ನೂ ಓದಿ IND vs ENG: 4ನೇ ಪಂದ್ಯದ ಪಿಚ್ ರಿಪೋರ್ಟ್; ಹವಾಮಾನ ವರದಿ ಹೀಗಿದೆ