ಜೈಪುರ: ಸೋಮವಾರ ನಡೆದಿದ್ದ ಐಪಿಎಲ್(IPL 2025)ನ ಬೃಹತ್ ಮೊತ್ತದ ಮೇಲಾಟದಲ್ಲಿ ರಾಜಸ್ಥಾನ್ ರಾಯಲ್ಸ್( GT vs RR) ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 8 ವಿಕೆಟ್ ಅಂತರದ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿಯೂ(IPL 2025 Points Table) ಪ್ರಗತಿ ಸಾಧಿಸಿದೆ. ಒಂದು ಸ್ಥಾನದ ಜಿಗಿತ ಕಂಡು 8ನೇ ಸ್ಥಾನ ಪಡೆದಿದೆ. ಸೋಲು ಕಂಡ ಗುಜರಾತ್ ಒಂದು ಸ್ಥಾನದ ನಷ್ಟದೊಂದಿಗೆ ಮೂರನೇ ಸ್ಥಾನಕ್ಕೆ ಜಾರಿತು. ಮೂರನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ದ್ವಿತೀಯ ಸ್ಥಾನಕ್ಕೇರಿದೆ. ಆರ್‌ಸಿಬಿ ಹಿಂದಿನಂತೆ ಅಗ್ರಸ್ಥಾನದಲ್ಲೇ ಮುಂದುವರಿದಿದೆ.
ಇಂದು ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ಮುಖಾಮುಖಿಯಾಗಲಿವೆ. 7 ಅಂಕದೊಂದಿಗೆ 7ನೇ ಸ್ಥಾನದಲ್ಲಿರುವ ಅಜಿಂಕ್ಯ ರಹಾನೆ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಸೋತರೆ ಪ್ಲೇ ಆಫ್ ಹಾದಿ ಬಹುತೇಕ ಕೊನೆಗೊಳ್ಳಲಿದೆ. ಡೆಲ್ಲಿ ತಂಡ ನಾಲ್ಕನೇ ಸ್ಥಾನದಲ್ಲಿದೆ. ಉಳಿದಂತೆ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿದೆ.
ಆರೆಂಜ್ ಕ್ಯಾಪ್ ಪಡೆದ ಸಾಯಿ ಸುದರ್ಶನ್
ರಾಜಸ್ಥಾನ್ ವಿರುದ್ಧ 39 ರನ್ ಬಾರಿಸಿದ ಸಾಯಿ ಸುದರ್ಶನ್ ಅವರು ವಿರಾಟ್ ಕೊಹ್ಲಿ(443) ಯನ್ನು ಹಿಂದಿಕ್ಕಿ ಮತ್ತೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಪರ್ಪಲ್ ಕ್ಯಾಪ್ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. 18 ವಿಕೆಟ್ ಕಿತ್ತಿರುವ ಜೋಶ್ ಹ್ಯಾಜಲ್‌ವುಡ್ ಪರ್ಪಲ್ ಕ್ಯಾಪ್ ಹೊಂದಿದ್ದಾರೆ.
ಅಂಕಪಟ್ಟಿ ಹೀಗಿದೆ
ಇಲ್ಲಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಸೋಮವಾರ ನಡೆದಿದ್ದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್ 4 ವಿಕೆಟ್ ನಷ್ಟಕ್ಕೆ 209 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ 15.5 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗೆ 212 ರನ್ ಬಾರಿಸಿ ಅಧಿಕಾರಯುತ ಗೆಲುವು ದಾಖಲಿಸಿತು. ಗುಜರಾತ್ ಬೌಲಿಂಗ್ ವಿಚಾರದಲ್ಲಿ ಹಿಂದುಳಿದ ಕಾರಣ ರಾಜಸ್ಥಾನದ ಪಾಲಿಗೆ ಈ ಮೊತ್ತ ಅಷ್ಟು ದೊಡ್ಡ ಸವಾಲು ಆಗಿ ಪರಿಣಮಿಸಲಿಲ್ಲ.