ಹೈದರಾಬಾದ್, ಎ.14: ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2026) ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ಪ್ರಫುಲ್ ಹಿಂಗೆ (Praful hinge) ತಮ್ಮ ಮಾರಕ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದರು. ಸನ್‌ರೈಸರ್ಸ್ ಹೈದರಾಬಾದ್ (SRH vs RR) ವೇಗಿ ಪಂದ್ಯದ ಮೊಟ್ಟ ಮೊದಲ ಓವರ್‌ನಲ್ಲಿಯೇ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಎರಡನೇ ಎಸೆತದಲ್ಲಿ ವೈಭವ್ ಸೂರ್ಯವಂಶಿ, ನಾಲ್ಕನೇ ಎಸೆತದಲ್ಲಿ ಧ್ರುವ್ ಜುರೆಲ್ ಮತ್ತು ಕೊನೆಯ ಎಸೆತದಲ್ಲಿ ಲುವಾನ್-ಡ್ರೆ ಪ್ರಿಟೋರಿಯಸ್ ಅವರನ್ನು ಔಟ್ ಮಾಡಿದರು.
ಐಪಿಎಲ್ ಇತಿಹಾಸದಲ್ಲಿ ಇನಿಂಗ್ಸ್‌ನ ಆರಂಭಿಕ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ ಮೊದಲ ಬೌಲರ್ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ. ತಮ್ಮ ಎರಡನೇ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಅವರ ವಿಕೆಟ್ ಪಡೆದರು. ತಮ್ಮ ಐಪಿಎಲ್ ವೃತ್ತಿ ಜೀವನದ ಚೊಚ್ಚಲ ಸ್ಪೆಲ್‌ನಲ್ಲಿ ಅವರು ನಾಲ್ಕು ಓವರ್‌ಗಳಿಗೆ 34 ರನ್‌ಗಳನ್ನು ಬಿಟ್ಟುಕೊಟ್ಟು 4 ವಿಕೆಟ್‌ಗಳನ್ನು ಪಡೆದರು.
ಆರ್‌ಆರ್ ನಿದ್ರೆ ಕೆಡಿಸಿದ ಪ್ರಫುಲ್ ಹಿಂಗೆ ಯಾರು?
ಬಲಗೈ ವೇಗಿ ಪ್ರಫುಲ್ ಹಿಂಗೆ ದೇಶಿ ಕ್ರಿಕೆಟ್‌ನಲ್ಲಿ ವಿದರ್ಭ ಪರ ಆಡುತ್ತಾರೆ. ಅವರಿಗೆ 24 ವರ್ಷ ಮತ್ತು ನಾಗ್ಪುರದಲ್ಲಿ ನೆಲೆಸಿದ್ದಾರೆ. ದೇಶೊ ಕ್ರಿಕೆಟ್‌ನಲ್ಲಿ ಅವರ ಅದ್ಭುತ ಪ್ರದರ್ಶನದ ನಂತರ, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ - ಸನ್‌ರೈಸರ್ಸ್ ಹೈದರಾಬಾದ್ ಜೊತೆಗೆ ಹರಾಜಿನ ಮೊದಲು ಅವರನ್ನು ಟ್ರಯಲ್ಸ್‌ಗೆ ಆಹ್ವಾನಿಸಿದ್ದವು. ಮಿನಿ ಹರಾಜಿನಲ್ಲಿ ಹೈದರಾಬಾದ್ ಫ್ರಾಂಚೈಸಿ ಅವರನ್ನು ಮೂಲಬೆಲೆ 30 ಲಕ್ಷ ರು. ಗಳಿಗೆ ಖರೀದಿಸಿತ್ತು.
2024ರಲ್ಲಿ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ
2024ರಲ್ಲಿ ಪ್ರಫುಲ್ ಹಿಂಗೆ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ, ಅವರು 10 ಪ್ರಥಮ ದರ್ಜೆ ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 6 ಲಿಸ್ಟ್ ಎ ಪಂದ್ಯಗಳಲ್ಲಿ ಅವರು 5 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ. ಈ ಪಂದ್ಯಕ್ಕೂ ಮೊದಲು, ಅವರು ಕೇವಲ ಒಂದು ಟಿ20 ಪಂದ್ಯವನ್ನು ಆಡಿದ್ದರು, ಅದರಲ್ಲಿ ಅವರು ಒಂದು ವಿಕೆಟ್ ಪಡೆದಿದ್ದರು. ಪ್ರಫುಲ್ ಹಿಂಗೆ ಚೆನ್ನೈನಲ್ಲಿರುವ ಎಂಆರ್‌ಎಫ್ ಪೇಸ್ ಫೌಂಡೇಶನ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು 2024ರಲ್ಲಿ ತರಬೇತಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು ಜಾಶ್ ಹೇಳಲ್‌ವುಡ್‌ನಂತಹ ಬೌಲರ್‌ಗಳೊಂದಿಗೆ ಅಭ್ಯಾಸ ಮಾಡಲು ಅವಕಾಶವನ್ನು ಪಡೆದರು.
ಪಂಜಾಬ್ ಕಿಂಗ್ಸ್ ಎದುರು ಆಡಬೇಕಿತ್ತು
ಸನ್‌ರೈಸರ್ಸ್ ಹೈದರಾಬಾದ್ ತಮ್ಮ ಹಿಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಿತ್ತು. ಆ ಪಂದ್ಯದ ಸಮಯದಲ್ಲಿ, ಟಾಸ್‌ನಲ್ಲಿ ನಾಯಕ ಇಶಾನ್ ಕಿಶನ್ ಪ್ರಫುಲ್ ಹಿಂಗೆ ತಮ್ಮ ಚೊಚ್ಚಲ ಪಂದ್ಯವನ್ನು ಆಡುತ್ತಿದ್ದಾರೆ ಎಂದು ಘೋಷಿಸಿದರು. ಆದರೆ ಅವರ ಹೆಸರನ್ನು ಇಂಪ್ಯಾಕ್ಟ್ ಆಟಗಾರರ ಪಟ್ಟಿಯಲ್ಲಿ ಸೇರಿಸಲಾಯಿತು. ಹೈದರಾಬಾದ್ ಮೊದಲು ಬ್ಯಾಟ್ ಮಾಡಿತು. ಎರಡನೇ ಇನಿಂಗ್ಸ್‌ನಲ್ಲಿ ಜಯದೇವ್ ಉನಾದ್ಕಟ್ ಅವರನ್ನು ಇಂಪ್ಯಾಕ್ಟ್ ಆಟಗಾರನಾಗಿ ಕರೆತರಲಾಯಿತು. ಪರಿಣಾಮವಾಗಿ, ಹಿಂಗೆ ಅವರಿಗೆ ಚೊಚ್ಚಲ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ.
IPL 2026: ಪ್ರಫುಲ್- ಸಾಕಿಬ್ ಪವರ್‌ಫುಲ್ ಬೌಲಿಂಗ್‌ಗೆ ಶರಣಾದ ರಾಜಸ್ಥಾನ್, ಹೈದರಾಬಾದ್‌ಗೆ ಎರಡನೇ ಜಯ!
ಸಾಕಿಬ್ ಹುಸೇನ್‌ಗೂ 4 ವಿಕೆಟ್
ಪ್ರಫ್ರುಲ್ ಹಿಂಗೆ ಜೊತೆಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಮತ್ತೊರ್ವ ವೇಗಿ ಸಾಕಿಬ್ ಹುಸೇನ್ ಕೂಡ ಚೊಚ್ಚಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಸಾಧನೆ ಮಾಡಿದರು. ಅವರು ಬೌಲ್ ಮಾಡಿದ ನಾಲ್ಕು ಓವರ್‌ಗಳಿಗೆ ಕೇವಲ 24 ರನ್ ನೀಡಿ ಯಶಸ್ವಿ ಜೈಸ್ವಾಲ್, ಡೊನೊವಾನ್ ಫೆರೆರಾ, ಜೋಫ್ರಾ ಆರ್ಚರ್ ಹಾಗೂ ರವಿ ಬಿಷ್ಣೋಯ್ ಅವರ ವಿಕೆಟ್‌ಗಳನ್ನು ಕಿತ್ತು ಸನ್‌ರೈಸರ್ಸ್ ಹೈದರಾಬಾದ್ ಗೆಲುವಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದರು.