ಅಬುಧಾಬಿ, ಡಿ.16: ಹಾಲಿ ಚಾಂಪಿಯನ್ ಆರ್‌ಸಿಬಿ(RCB) ತಂಡ ಐಪಿಎಲ್ 2026ರ ಮಿನಿ ಹರಾಜಿ(IPL Auction 2026 Live)ನಲ್ಲಿ ಎಡಗೈ ಸ್ಫೋಟಕ ಬ್ಯಾಟರ್ ವೆಂಕಟೇಶ್ ಅಯ್ಯರ್(Venkatesh Iyer) ಅವರನ್ನು 7 ಕೋಟಿಗೆ ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ. 2 ಕೋಟಿ ಮೂಲ ಬೆಲೆ ಹೊಂದಿದ್ದ ಅವರನ್ನು ಖರೀದಿಸಲು ಕೆಕೆಆರ್, ಲಕ್ನೋ ಮತ್ತು ಗುಜರಾತ್ ಪೈಪೋಟಿ ನಡೆಸಿತ್ತಾದರೂ ಅಂತಿಮವಾಗಿ ಆರ್‌ಸಿಬಿ ಕೈ ಮೇಲಾಯಿತು.
ಕಳೆದ ಆವೃತ್ತಿಯಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಕೆಕೆಆರ್ ತಂಡ 23.75 ಕೋಟಿ ರು. ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಿತ್ತು. ಆ ಮೂಲಕ ಐಪಿಎಲ್ ಟೂರ್ನಿಯ ಕೆಕೆಆರ್‌ನ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ ಟೂರ್ನಿಯಲ್ಲಿ ಅವರು ಸಂಪೂರ್ಣ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಆಡಿದ್ದ 11 ಪಂದ್ಯಗಳಿಂದ ಕೇವಲ 142 ರನ್‌ಗಳನ್ನು ಕಲೆ ಹಾಕಿದ್ದರು.
ಇದೇ ಕಾರಣಕ್ಕೆ ಅವರನ್ನು ಕೋಲ್ಕತಾ ಫ್ರಾಂಚೈಸಿ ತಂಡದಲ್ಲಿ ಉಳಿಸಿಕೊಳ್ಳದೆ ಹರಾಜಿಗೆ ಬಿಟ್ಟುಕೊಟ್ಟಿತ್ತು. ಕಳೆದ ಬಾರಿಯೂ ವೆಂಕಟೇಶ್ ಅಯ್ಯರ್ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂತಿಮ ಹಂತದ ತನಕ ಬಿಡ್ ಮಾಡಿತ್ತು. ಆದರೆ ತನ್ನ ಬಳಿ ದೊಡ್ಡ ಮೊತ್ತ ಇಲ್ಲದ ಕಾರಣ ಹಿಂದೆ ಸರಿದಿತ್ತು. ಈ ಬಾರಿ 16 ಕೋಟಿಯೊಂದಿಗೆ ಹರಾಜಿಗಿಳಿದ ಆರ್‌ಸಿಬಿ 7 ಕೋಟಿ ಖರ್ಚು ಮಾಡಿ ವೆಂಕಟೇಶ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು.
Cameron Green: 25 ಕೋಟಿ ಪಡೆದರೂ ಗ್ರೀನ್‌ಗೆ ಸಿಗುವುದು 18 ಕೋಟಿ ಮಾತ್ರ!
ಭಾರೀ ನಿರೀಕ್ಷೆಯಲ್ಲಿದ್ದ ಮುಂಬೈ ಬ್ಯಾಟರ್‌ಗಳಾದ ಸರ್ಫರಾಜ್ ಖಾನ್ ಮತ್ತು ಪೃಥ್ವಿ ಶಾ ಆರಂಭಿಕ ಸುತ್ತಿನಲ್ಲಿ ಅನ್‌ಸೋಲ್ಡ್ ಆದರು. ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ನಿರೀಕ್ಷೆಯಂತೆ 25.20 ಕೋಟಿ ಮೊತ್ತಕ್ಕೆ ಕೆಕೆಆರ್ ತಂಡ ಸೇರಿದರು. ಡೇವಿಡ್ ಮಿಲ್ಲರ್ 2 ಕೋಟಿ ಮೂಲ ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು.
ಹರಾಜಿಗೂ ಮುನ್ನ ಆರ್‌ಸಿಬಿ ಉಳಿಸಿಕೊಂಡಿದ್ದ ಆಟಗಾರರು
ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ಸಿಂಗ್ ತುಷಾರ, ರಸಿಖ್ನಾ ಸಲಾಂ.