ಬೆಂಗಳೂರು, ಫೆ.13: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್-2026 (IPL 2026) ಪಂದ್ಯಾವಳಿಗಳು ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ಎಂ.ಚಿನ್ನಸ್ವಾಮಿ ಕ್ರೀಡಾಂಗಣ(Chinnaswamy stadium)ದಲ್ಲಿ ಆಯೋಜಿಸಲು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. 2025ರ ಜೂ.4ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಚಟುವಟಿಕೆ ನಿಂತು ಹೋಗಿತ್ತು.
ಇದೀಗ ಮೈಕಲ್ ಡಿ ಕುನ್ಹಾ ನೇತೃತ್ವದ ಸಮಿತಿ ಹಾಗೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಷರತ್ತು ಮೇರೆಗೆ ಮಾ.26ರಿಂದ ಶುರುವಾಗಲಿರುವ ಐಪಿಎಲ್-2026 ಪಂದ್ಯಾವಳಿಗಳಿಗೆ ಅನುಮತಿ ನೀಡಲಾಗಿದೆ. ತಜ್ಞರ ಸಮಿತಿಯು ಶಿಫಾರಸು ಮಾಡಿರುವ ಮೊದಲ ಹಂತದ ಮುನ್ನೆಚ್ಚರಿಕಾ ಕ್ರಮಗಳನ್ನು ಮಾ.15ರ ಒಳಗಾಗಿ ಮಾಡಿರಬೇಕು ಎಂಬ ಷರತ್ತು ವಿಧಿಸಲಾಗಿದೆ. ಅಗ್ನಿಸುರಕ್ಷತೆ, ಜನದಟ್ಟಣೆ ನಿಯಂತ್ರಣ, ತುರ್ತು ಪ್ರತಿಕ್ರಿಯಾ ವ್ಯವಸ್ಥೆ, ಆ್ಯಂಬುಲೆನ್ಸ್ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ವ್ಯವಸ್ಥೆ ಕುರಿತು ಸಮಿತಿಯು ಹಲವು ಶಿಫಾರಸು ಮಾಡಿತ್ತು.
ಮುಖ್ಯವಾಗಿ ಗೇಟ್ ಸಂಖ್ಯೆ 4, 8, 12 ಹಾಗೂ 21ರ ಬಳಿ ಹೃದಯ ಆರೈಕೆ ವ್ಯವಸ್ಥೆ, ಪ್ರತಿ ಗೇಟ್ ಕನಿಷ್ಠ 6 ಮೀಟರ್ ವಿಶಾಲವಾಗಿರುವಂತೆ ವಿಸ್ತರಣೆ, ಒಟ್ಟು ಸಾಮರ್ಥ್ಯದ ಶೇ.5ರಿಂದ 10ರಷ್ಟು ಮಂದಿಯನ್ನು ಮಾತ್ರ ಒಂದು ಗೇಟ್‌ನಲ್ಲಿ ಒಳ ಬಿಡಬೇಕು. ಸೇಂಟ್ ಜೋಸೆಫ್ ಹೈಸ್ಕೂಲ್, ಯುಬಿ ಸಿಟಿ, ಕಂಠೀರವ ಕ್ರೀಡಾಂಗಣದ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು.
ಜೈಲಿನಿಂದಲೇ ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಬಿಡ್ ಸಲ್ಲಿಸಿದ ಸುಕೇಶ್; ನಟಿ ಜಾಕ್ವೆಲಿನ್‌ಗೆ ಉಡುಗೊರೆ ನೀಡಲು ನಿರ್ಧಾರ
ಅಗ್ನಿ ಸುರಕ್ಷತೆ ಕ್ರಮಗಳನ್ನು ಫೆಬ್ರುವರಿ ತಿಂಗಳಲ್ಲೇ ಪೂರ್ಣಗೊಳಿಸಬೇಕು. ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸಲು ಐಪಿಎಲ್ ಟಿಕೆಟ್ ಹೊಂದಿರುವ ವೀಕ್ಷಕರಿಗೆ ಮೆಟ್ರೋ, ಬಿಎಂಟಿಸಿಯಲ್ಲಿ ಉಚಿತ ಟಿಕೆಟ್ ನೀಡಬೇಕು ಎಂಬುದು ಸೇರಿದಂತೆ ಹಲವು ಶಿಫಾರಸು ಮಾಡಲಾಗಿದೆ.
ಪರಂ ಎಚ್ಚರಿಕೆ
ಕ್ರಿಕೆಟ್ ಪಂದ್ಯ ನಡೆಸಲು ಅನುಮತಿಸಿದರೂ ಕ್ರೀಡಾಂಗಣದಲ್ಲಿ ಎಷ್ಟು ಜನರು ಕೂರಲು ವ್ಯವಸ್ಥೆಯಿದೆಯೋ ಅಷ್ಟು ಜನರನ್ನು ಮಾತ್ರ ಸೇರಿಸಬೇಕು. ಜತೆಗೆ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣ ಸುತ್ತಮುತ್ತ ಹೆಚ್ಚಿನ ಜನಸಂದಣಿ ಸೇರದಂತೆ ನೋಡಿಕೊಳ್ಳಬೇಕು. ಪೊಲೀಸರು ಎಲ್ಲ ಸಹಕಾರ ನೀಡುತ್ತಾರಾದರೂ, ಜನರ ನಿಯಂತ್ರಣ ಆಯೋಜಕರದ್ದಾಗಿರುತ್ತದೆ. ಜತೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು. ಕ್ರಿಕೆಟ್ ಪಂದ್ಯ ನಡೆಸಲು ಅನುಮತಿಸಿದರೂ ಕ್ರೀಡಾಂಗಣದಲ್ಲಿ ಎಷ್ಟು ಜನರು ಕೂರಲು ವ್ಯವಸ್ಥೆಯಿದೆಯೋ ಅಷ್ಟು ಜನರನ್ನು ಮಾತ್ರ ಸೇರಿಸಬೇಕು. ಜತೆಗೆ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣ ಸುತ್ತಮುತ್ತ ಹೆಚ್ಚಿನ ಜನಸಂದಣಿ ಸೇರದಂತೆ ನೋಡಿಕೊಳ್ಳಬೇಕು. ಪೊಲೀಸರು ಎಲ್ಲ ಸಹಕಾರ ನೀಡುತ್ತಾರಾದರೂ, ಜನರ ನಿಯಂತ್ರಣ ಆಯೋಜಕರದ್ದಾಗಿರುತ್ತದೆ. ಜತೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದರು.