ಕೋಲ್ಕತಾ: 9ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಜೋಶ್ ಮೊನ್ನೆಯಷ್ಟೇ ಕೊನೆಗೊಂಡಿದೆ. ಆದರೆ ಕ್ರಿಕೆಟಿಗರಿಗೆ, ಕ್ರಿಕೆಟಿಗೆ ವಿಶ್ರಾಂತಿ ಇಲ್ಲ. ಅಷ್ಟರಲ್ಲೇ ಐಪಿಎಲ್ ಟಿ20 ಕ್ರಿಕೆಟ್(IPL 2025) ಪಂದ್ಯಾವಳಿಯ ಗಂಟೆ ಕೋಲ್ಕತಾದಲ್ಲಿ ಮೊಳಗಲಾರಂಭಿಸಿದೆ. ಇಂದು ನಡೆಯುವ 18ನೇ ಆವೃತ್ತಿಯ ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ(KKR vs RCB) ಮತ್ತು ಹಾಲಿ ಚಾಂಪಿಯನ್ ಕೆಕೆಆರ್ ಸೆಣಸಾಟ ನಡೆಸಲಿವೆ. ಆದರೆ ಪಂದ್ಯಕ್ಕೆ ಭಾರೀ ಮಳೆ(kkr vs rcb weather forecast) ಭೀತಿ ಇದ್ದು ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ.
ಶೇ. 74ರಷ್ಟು ಮಳೆಯ ಸಾಧ್ಯತೆ
ಹವಾಮಾನ ಇಲಾಖೆಯು ಶನಿವಾರ ಕೋಲ್ಕತಾದಲ್ಲಿ 'ಆರೆಂಜ್ ಅಲರ್ಟ್' ಘೋಷಿಸಿದೆ. ಗುಡುಗು, ಮಿಂಚು ಸಹಿತ 74ರಷ್ಟು ಮಳೆಯ ಸಾಧ್ಯತೆ ಇದೆ ಎಂದು ತಿಳಿಸಿದೆ. ಶುಕ್ರವಾರ ಕೂಡ ಮಳೆಯಾಗಿದ್ದು, ಎರಡೂ ತಂಡಗಳ ಸಂಜೆಯ ಅಭ್ಯಾಸಕ್ಕೆ ಅಡ್ಡಿಯಾಗಿತ್ತು. ಮತ್ತೆ ಮತ್ತೆ ಮಳೆ ಸುರಿದುದರಿಂದ ಅಭ್ಯಾಸವನ್ನು ಮೊಟಕುಗೊಳಿಸಲಾಯಿತು. ಹೀಗಾಗಿ ಇಂದು ಕೂಡ ಪಂದ್ಯಕ್ಕೆ ಮಳೆ ಇರುವುದು ಖಚಿತ ಎನ್ನಬಹುದು.
ಇದನ್ನೂ ಓದಿ IPL 2025 Fan Parks: ಈ ಬಾರಿ ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್
ಐಪಿಎಲ್ ನಿಯಮಾವಳಿಯಂತೆ ಪಂದ್ಯಕ್ಕೆ ಒಂದು ಗಂಟೆಯ ಹೆಚ್ಚುವರಿ ಅವಧಿ ಇರುತ್ತದೆ. ರಾತ್ರಿ 10.56ಕ್ಕೆ 5 ಓವರ್‌ಗಳ ಪಂದ್ಯಕ್ಕೆ ಕಟ್ ಆಫ್ ಸಮಯ ನಿಗದಿಯಾಗಿದ್ದು, 12.06ಕ್ಕೆ ಪಂದ್ಯ ಮುಗಿಯಬೇಕಿದೆ. ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.
ಆರ್‌ಸಿಬಿಗೆ ಹೋಲಿಸಿದರೆ ಕೆಕೆಆರ್ ಹೆಚ್ಚು ಬಲಿಷ್ಠವಾಗಿದೆ. ನಾಯಕ ರಹಾನೆ, ಡಿ ಕಾಕ್, ಗುರ್ಬಜ್, ಸುನೀಲ್ ನಾರಾಯಣ್, ವೆಂಕಟೇಶ್ ಅಯ್ಯರ್, ರಿಂಕು, ರಸೆಲ್, ರಮಣ್‌ದೀಪ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ ತವರಿನಂಗಳದಲ್ಲಿ ಉತ್ತಮ ಹಿಡಿತ ಸಾಧಿಸುವ ಸಾಧ್ಯತೆ ಇದೆ.
ಆರ್‌ಸಿಬಿ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದರೂ, ಬೌಲಿಂಗ್‌ನ ಸ್ಪಿನ್ ವಿಭಾಗ ಬಹಳ ದುರ್ಬಲವಾಗಿದೆ. ಕೊಹ್ಲಿ, ಸಾಲ್ಟ್, ಪಡಿಕ್ಕಲ್, ಜಿತೇಶ್ ಶರ್ಮ (ಕೀಪರ್), ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್ ದೊಡ್ಡ ಮೊತ್ತ ಪೇರಿಸುವಲ್ಲಿ ಸಮರ್ಥರಿದ್ದಾರೆ. ವೇಗದ ವಿಭಾಗದಲ್ಲಿ ಅನುಭವಿ ಭುವನೇಶ್ವರ್ ಕುಮಾರ್, ಯಶ್ ದಯಾಳ್ ಇದ್ದಾರೆ. ಆದರೆ ಸ್ಪಿನ್ನರ್ ಆಗಿ ಕಾಣಿಸಿಕೊಂಡಿರುವುದು ಕೃಣಾಲ್ ಪಾಂಡ್ಯ ಮಾತ್ರ. ಆದರೆ ಅವರು ಅಷ್ಟು ಪರಿಣಾಮಕಾರಿ ಬೌಲರ್ ಅಲ್ಲ.
ಸಂಭಾವ್ಯ ಆಡುವ ಬಳಗ
ಆರ್‌ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.ಇಂಪ್ಯಾಕ್ಟ್ ಆಟಗಾರ: ಸ್ವಪ್ನಿಲ್ ಸಿಂಗ್/ಮೋಹಿತ್ ರಾಥೀ/ರಾಸಿಖ್ ಸಲಾಂ.
ಕೆಕೆಆರ್: ಸುನಿಲ್ ನಾರಾಯಣ್, ಕ್ವಿಂಟನ್ ಡಿ ಕಾಕ್ (ವಿ.ಕೀ), ಅಜಿಂಕ್ಯ ರಹಾನೆ (ನಾಯಕ), ಆಂಗ್‌ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಆನ್ರಿಚ್ ನಾರ್ಟ್ಜೆ. ಇಂಪ್ಯಾಕ್ಟ್ ಆಟಗಾರ: ವೈಭವ್ ಅರೋರಾ.
ಪಂದ್ಯ ಆರಂಭ; ಸಂಜೆ 7:30ಕ್ಕೆ. ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್.