ಬೆಂಗಳೂರು, ಜೂ.22: ನಿವೃತ್ತಿ ಹಿಂಪಡೆದು ಮತ್ತೆ ಟೆಸ್ಟ್ ಕ್ರಿಕೆಟ್ ಆಡುವಂತೆ ಸಲಹೆ ನೀಡುತ್ತಿರುವ ಅಭಿಮಾನಿಗಳಿಗೆ ಮತ್ತು ಕ್ರಿಕೆಟ್ ತಜ್ಞರಿಗೆ ವಿರಾಟ್ ಕೊಹ್ಲಿ(Virat Kohli) ತಮ್ಮ ಸ್ಪಷ್ಟ ನಿರ್ಧಾರವನ್ನು ತಿಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಮರಳುವ ಬದಲು ಹೊಸದಾಗಿ ಬಿಡುಗಡೆ ಮಾಡಿದ ಶೂ ಅನ್ನು ಕಡಿಮೆ ದರಕ್ಕೆ ಮಾರಾಟ ಮಾಡಿ ಹೆಚ್ಚು ಲಾಭಗಳಿಸಬಹುದು ಎಂದು ಹೇಳಿದ್ದಾರೆ.
ಒನ್8 ಬ್ರ್ಯಾಂಡ್ ಶೂ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೊಹ್ಲಿಗೆ ಕಾರ್ಯಕ್ರಮ ನಿರೂಪಕ ಟೆಸ್ಟ್ ಕ್ರಿಕೆಟ್‌ಗೆ ಮರಳುವ ಬಗ್ಗೆ ಯೋಚಿಸುತ್ತೀರಾ? ಎಂದು ಪ್ರಶ್ನೆ ಮಾಡಿದರು. ಈ ವೇಳೆ ನಗುತ್ತಲ್ಲೇ ಉತ್ತರ ನೀಡಿದ ಕೊಹ್ಲಿ, ಬೇಕಿದ್ದರೆ ಕಡಿಮೆ ಬೆಲೆಗೆ ಶೂ ಕೊಡುತ್ತೇನೆ, ಆದರೆ ಟೆಸ್ಟ್ ಆಡಲ್ಲ. ಏಕೆಂದರೆ ನಾನು ಅದನ್ನು (ಟೆಸ್ಟ್ ಕ್ರಿಕೆಟ್) ಈಗಾಗಲೇ ಮುಗಿಸಿದ್ದೇನೆ" ಎಂದು ಕೊಹ್ಲಿ ಎಂದು ಹೇಳಿದರು. ಈ ಮೂಲಕ ಮತ್ತೆ ಟೆಸ್ಟ್ ಆಡುವ ಯೋಚನೆ ಇಲ್ಲ ಎನ್ನುವ ಸ್ಪಷ್ಟನೆ ನೀಡಿದ್ದಾರೆ.
ಸಂವಾದದ ಸಮಯದಲ್ಲಿ, ಕೊಹ್ಲಿ ಮೆಲ್ಬೋರ್ನ್‌ನಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯ ಗೆಲ್ಲುವ ಇನ್ನಿಂಗ್ಸ್ ಅನ್ನು ನೆನಪಿಸಿಕೊಂಡರು. "ನನಗೆ ಯಾವಾಗಲೂ ಎದ್ದು ಕಾಣುವ ಒಂದು ಘಟನೆ ಎಂದರೆ ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯ. ಪಂದ್ಯವನ್ನು ಗೆಲ್ಲುವ ಸಾಧ್ಯತೆಗಳು 3% ಅಥವಾ ಅದಕ್ಕಿಂತ ಹೆಚ್ಚಿವೆ ಎಂದು ನನಗೆ ನಂತರ ಹೇಳಲಾಯಿತು. ಆದರೆ ನಾನು ಎಂದಿಗೂ ಹಾಗೆ ಯೋಚಿಸಲಿಲ್ಲ. 1% ಸಹ ಸಾಕು ಕೊನೆಯವರೆಗೆ ಹೋರಾಡ ಬೇಕು" ಎಂದು ಕೊಹ್ಲಿ ಹೇಳಿದರು.
2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ, ಭಾರತ ಪರ 123 ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ 9230 ರನ್ ಕಲೆಹಾಕಿದ್ದಾರೆ. ಇದರಲ್ಲಿ 30 ಶತಕ, 31 ಅರ್ಧಶತಕಗಳೂ ಒಳಗೊಂಡಿವೆ. 10 ಸಾವಿರ ರನ್ ಮೈಲುಗಲ್ಲು ಸಾಧಿಸುವ ಬಯಕೆ ಹೊಂದಿದ್ದ ಕೊಹ್ಲಿ, ಅದಕ್ಕೂ ಮುನ್ನವೇ ನಿವೃತ್ತಿ ಪ್ರಕಟಿಸಿದ್ದರು. ಅವರ ಈ ದಿಢೀರ್ ನಿರ್ಧಾರ ಅಭಿಮಾನಿಗಳು ಮಾತ್ರವಲ್ಲದೆ ಕ್ರಿಕೆಟ್ ಜಗತ್ತನ್ನು ಅಚ್ಚರಿಪಡುವಂತೆ ಮಾಡಿತ್ತು.
IND vs AFG: ಎರಡನೇ ಒಡಿಐ ಶತಕ ಸಿಡಿಸಿ ವಿರಾಟ್ ಕೊಹ್ಲಿ ಮೇಲೆ ಒತ್ತಡ ಹಾಕಿದ ಯಶಸ್ವಿ ಜೈಸ್ವಾಲ್!
ಕೊಹ್ಲಿ ನಾಯಕತ್ವದಲ್ಲಿ ಭಾರತ 68 ಟೆಸ್ಟ್ ಆಡಿದ್ದು, 40ರಲ್ಲಿ ಗೆದ್ದಿದ್ದರೆ, ಕೇವಲ 17 ಪಂದ್ಯಗಳಲ್ಲಿ ಸೋತಿತ್ತು. ಈ ಮೂಲಕ ಭಾರತದ ಶ್ರೇಷ್ಠ ನಾಯಕ ಎನಿಸಿಕೊಂಡಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ 60 ಟೆಸ್ಟ್‌ಗಳಲ್ಲಿ 27ರಲ್ಲಿ ಗೆದ್ದಿದ್ದರೆ, ಗಂಗೂಲಿ ಅವಧಿಯಲ್ಲಿ 49 ಟೆಸ್ಟ್‌ನಲ್ಲಿ 21ರಲ್ಲಿ ಜಯಗಳಿಸಿತ್ತು. ಒಟ್ಟಾರೆ ವಿಶ್ವದಲ್ಲೇ 4ನೇ ಗರಿಷ್ಠ ಟೆಸ್ಟ್ ಪಂದ್ಯ ಗೆದ್ದ ಖ್ಯಾತಿ ಕೊಹ್ಲಿಗಿದೆ. ದ.ಆಫ್ರಿಕಾ ತಂಡ ಗ್ರೇಮ್ ಸ್ಮಿತ್ ನಾಯಕತ್ವದಲ್ಲಿ 109 ಟೆಸ್ಟ್‌ನಲ್ಲಿ 53, ಆಸ್ಟ್ರೇಲಿಯಾ ರಿಕಿ ಪಾಂಟಿಂಗ್ 77 ಪಂದ್ಯಗಳಲ್ಲಿ 48, ಸ್ಟೀವ್ ವಾ 57 ಪಂದ್ಯಗಳಲ್ಲಿ 41ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ.